Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಮ್ಮೂರ ನಂಟು, ಹೀಗೊಂದು ನೆನಪಿನ ಸಿಹಿ! ಚಿತ್ರದುರ್ಗದಲ್ಲಿ ‘ನಮ್ಮೂರ ನೆಂಟರು’ ಉಪಚಾರ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೆಲವು ಭೇಟಿಗಳು ಮನಸ್ಸಿಗೆ ಮುದ ನೀಡುತ್ತವೆ. ಕೆಲವು ಸನ್ಮಾನಗಳು ಮನಸ್ಸನ್ನು ಭಾವುಕಗೊಳಿಸುತ್ತವೆ. ಇನ್ನು ಕೆಲವು ಕ್ಷಣಗಳು ನಮ್ಮ ಬದುಕಿನ ದಾರಿಯಲ್ಲಿ ಪ್ರೀತಿ
, ಸಂಬಂಧಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸುತ್ತವೆ. ಚಿತ್ರದುರ್ಗದಲ್ಲಿ ಭಾನುವಾರ ನಡೆದ ‘ನಮ್ಮೂರ ನೆಂಟರು’ ಕಾರ್ಯಕ್ರಮ ನನಗೆ ಅಂತಹ ಒಂದು ಆತ್ಮೀಯ ಅನುಭವ ನೀಡಿತು.

ಈ ಕಾರ್ಯಕ್ರಮವೇ ಒಂದು ರೀತಿಯ ವಿಭಿನ್ನ ಆಲೋಚನೆ. ಹಿರಿಯ ಪತ್ರಕರ್ತ ಚಿಕ್ಕನ್ಮಳ್ಳಿ ಷಣ್ಮುಖ ಅವರು ದೂರವಾಣಿ ಕರೆ ಮಾಡಿ, “ನೀನು ನಮ್ಮೂರಿನ ನಂಟ” ಎಂದಾಗ, ಯಾಕೆ ಹೀಗೆ ಹೇಳುತ್ತಿದ್ದಾರೆ ಎಂಬ ಕುತೂಹಲ ನನ್ನದಾಗಿತ್ತು. “ಅಲ್ಲಯ್ಯ, ನೀನು ನಮ್ಮ ಜಿಲ್ಲೆಯ ಹೆಣ್ಣುಮಗಳನ್ನು ಮದುವೆಯಾಗಿದ್ದೀಯ. ಹಾಗಾಗಿ ನಮ್ಮ ಜಿಲ್ಲೆಯ ಅಳಿಯ ಅಲ್ವಾ!” ಎಂದು ಅವರು ಪ್ರೀತಿಯಿಂದ ಗದರಿಸಿದಾಗ, ಆ ಮಾತಿನಲ್ಲಿದ್ದ ಆತ್ಮೀಯತೆ ನನ್ನನ್ನು ನಗಿಸಿತ್ತು. ಅವರು ಮತ್ತು ಪತ್ರಕರ್ತ ಸ್ನೇಹಿತರ ಪ್ರೀತಿಯ ಆಹ್ವಾನಕ್ಕೆ ಇಲ್ಲ ಎನ್ನಲಾಗಲಿಲ್ಲ.

ಹೀಗೆ ಚಿತ್ರದುರ್ಗದ ನಂಟು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಯಿತು. ನಾನು ಮದುವೆ ಆಗಿದ್ದು ಹೊಳಲ್ಕೆರೆ ತಾಲೂಕಿನ ಕುಗ್ರಾಮ ಅರಬಘಟ್ಟದ ಮಗಳು. ಆ ಘಟನಾವಳಿಗಳಿಂದ ಹಿಡಿದು ಇವತ್ತಿನ ತನಕ ನೂರಾರು ಘಟನೆಗಳು ಸಭಾಂಗಣಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನೆನಪಾದವು.

ಆದರೆ, ಅಲ್ಲಿ ನನಗಾಗಿ ಕಾದಿದ್ದದ್ದು ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ; ಪ್ರೀತಿ, ಸ್ನೇಹ, ಗೌರವ ಮತ್ತು ಸಂಬಂಧಗಳ ಬೆಸುಗೆಯ ಸುಂದರ ಕ್ಷಣಗಳಾಗಿದ್ದವು.

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ದುರ್ಗದ ಕಲಾಸಿರಿ ತಂಡ, ಗೆಳೆಯರ ಬಳಗ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ‘ನಮ್ಮೂರ ನೆಂಟರು’ ಸರಣಿ ಕಾರ್ಯಕ್ರಮದಲ್ಲಿ ನನ್ನ ಮತ್ತು ನನ್ನ ಪತ್ನಿ ಮಾಲಾ ಅವರ ಆತ್ಮೀಯ ಉಪಚಾರ ನಡೆಯಿತು.

ವೇದಿಕೆಯ ಮೇಲಿನ ಗೌರವಕ್ಕಿಂತಲೂ, ವೇದಿಕೆಯ ಕೆಳಗೆ ಸಿಕ್ಕ ಪ್ರೀತಿ ಮನಸ್ಸಿಗೆ ಹೆಚ್ಚು ಆಪ್ತವಾಯಿತು. ನಮ್ಮನ್ನು ತಮ್ಮ ಮನೆಯವರಂತೆ ಬರಮಾಡಿಕೊಂಡ ರೀತಿ, ಮಾತನಾಡಿಸಿದ ಆತ್ಮೀಯತೆ, ತೋರಿದ ಅಭಿಮಾನ ಇವೆಲ್ಲವೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವು.

ಕಾರ್ಯಕ್ರಮದಲ್ಲಿ ಮಾತನಾಡುವಾಗ ನನ್ನ ಮನಸ್ಸಿನಲ್ಲಿದ್ದ ಒಂದು ಮಾತನ್ನು ಹಂಚಿಕೊಂಡೆ. ಪತ್ರಕರ್ತನ ಬದುಕು ಹೊರಗಿನಿಂದ ನೋಡುವವರಿಗೆ ಒಂದು ವೃತ್ತಿ. ಆದರೆ, ಅದರ ಒಳಗಿನ ಕಷ್ಟಗಳನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಅದರ ಹಿಂದಿರುವ ತ್ಯಾಗದ ಅರಿವಾಗುತ್ತದೆ.

ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತ, ಜನರ ನೋವುಗಳಿಗೆ ಸ್ಪಂದಿಸುವ ಪತ್ರಕರ್ತ, ಅನ್ಯಾಯದ ವಿರುದ್ಧ ಬರೆಯುವ ಪತ್ರಕರ್ತ ತನ್ನ ವೃತ್ತಿಯ ಜವಾಬ್ದಾರಿಗಾಗಿ ಅನೇಕ ಬಾರಿ ಕುಟುಂಬದೊಂದಿಗೆ ಕಳೆಯಬೇಕಾದ ಅಮೂಲ್ಯ ಸಮಯವನ್ನೂ ಕಳೆದುಕೊಳ್ಳುತ್ತಾನೆ. ಸುದ್ದಿ, ಸಭೆ, ಪ್ರವಾಸ, ಹೋರಾಟ ಎಂದು ಓಡಾಡುವಾಗ ಮನೆಯವರು ಕಾಯುತ್ತಾರೆ. ಕೆಲವೊಮ್ಮೆ ನಮ್ಮ ಕೆಲಸದ ಒತ್ತಡದಲ್ಲಿ ಅವರ ನಿರೀಕ್ಷೆಗಳಿಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ.

ಆದರೆ, ಮನೆಯವರು ಮಾತ್ರ ನಮ್ಮನ್ನು ಅರ್ಥಮಾಡಿಕೊಂಡು ಬೆನ್ನಿಗೆ ನಿಲ್ಲುತ್ತಾರೆ. ನಮ್ಮ ಕಷ್ಟಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ನಮ್ಮ ಸಂತೋಷದಲ್ಲಿ ಸಂಭ್ರಮಿಸುತ್ತಾರೆ. ನಮ್ಮ ನೋವಿನಲ್ಲಿ ಸಾಂತ್ವನವಾಗುತ್ತಾರೆ.

ಹೀಗಾಗಿ ಪತ್ರಕರ್ತನ ಸಾಧನೆ ಎಂದರೆ ಅದು ಆತನೊಬ್ಬನ ಸಾಧನೆಯಲ್ಲ. ಆತನ ಕುಟುಂಬದ ತ್ಯಾಗ, ಪತ್ನಿಯ ಸಹನೆ, ಮನೆಯವರ ಪ್ರೀತಿ ಮತ್ತು ಬೆಂಬಲವೂ ಆ ಸಾಧನೆಯ ಭಾಗವೇ ಆಗಿರುತ್ತದೆ.

ನನ್ನ ಬದುಕಿನ ಪಯಣವನ್ನು ನೆನಪಿಸಿಕೊಂಡಾಗ ಈ ಮಾತುಗಳು ಮತ್ತಷ್ಟು ಅರ್ಥಪೂರ್ಣವೆನಿಸುತ್ತವೆ. ಸಾರ್ವಜನಿಕ ಬದುಕಿನಲ್ಲಿ ನಾವು ಸಂಪಾದಿಸುವ ಹೆಸರು, ಗೌರವಗಳ ಹಿಂದೆ ನಮ್ಮನ್ನು ಪ್ರೀತಿಸುವವರ ಕೊಡುಗೆ ದೊಡ್ಡದಿರುತ್ತದೆ. ಅದನ್ನು ಮರೆಯಬಾರದು ಎಂಬುದೇ ನನ್ನ ಮನದಾಳದ ಮಾತಾಗಿತ್ತು.

ಹಿರಿಯ ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್ ಅವರು ನನ್ನ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ಅಷ್ಟೇ ಅಲ್ಲ ಅರ್ಥಪೂರ್ಣವಾದ ಮಾತುಗಳನ್ನಾಡಿದರು.

ಮುರುಘಾ ಗುರುಮಿಟಕಲ್ ಶಾಖಾ ಮಠದ ಶ್ರೀ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷ ಕಾಂತರಾಜು, ರೈತ ಸಂಘದ ಧನಂಜಯ, ನಿವೃತ್ತ ಪೊಲೀಸ್ ಅಧಿಕಾರಿ ಸೈಯ್ಯದ್ ಇಸಾಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ತೊಡರನಾಳ್, ಹಿರಿಯ ಪತ್ರಕರ್ತರಾದ ಚಿಕ್ಕನ್ಮಳ್ಳಿ ಷಣ್ಮುಖ, ಚಂದ್ರಶೇಖರ ಬೆಳೆಗೆರೆ ಮತ್ತಿತರರು ತಮ್ಮ ಮಾತುಗಳ ಮೂಲಕ ಪ್ರೀತಿ ಹಂಚಿಕೊಂಡರು.

ಪತ್ರಕರ್ತರು, ಅವರ ಕುಟುಂಬದ ಸದಸ್ಯರು, ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜನಪರ ಸಂಘಟನೆಗಳ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ಮುಗಿದು ಹೊರಡುವಾಗ ಮನಸ್ಸಿನಲ್ಲಿ ಒಂದು ಸಂತೃಪ್ತಿಯ ಭಾವವಿತ್ತು. ನಾವು ಜೀವನದಲ್ಲಿ ಎಷ್ಟೇ ಜನರನ್ನು ಭೇಟಿಯಾಗಬಹುದು, ಎಷ್ಟೇ ಊರುಗಳನ್ನು ಸುತ್ತಬಹುದು, ಎಷ್ಟೇ ಗೌರವಗಳನ್ನು ಪಡೆಯಬಹುದು. ಆದರೆ, ನಮ್ಮನ್ನು ತಮ್ಮವರೆಂದು ಭಾವಿಸಿ ಪ್ರೀತಿಯಿಂದ ಕರೆದು, ಗೌರವಿಸಿ, ಮನಸ್ಸಿಗೆ ಹತ್ತಿರವಾಗುವವರು ಸಿಗುವುದು ನಿಜಕ್ಕೂ ವಿಶೇಷ.

ಚಿತ್ರದುರ್ಗದ ಜನರು ನನಗೆ ಆ ಪ್ರೀತಿಯನ್ನು ನೀಡಿದರು. ನನ್ನ ಪತ್ನಿ ಮಾಲಾ ಮತ್ತು ಮಕ್ಕಳೊಂದಿಗೆ ಈ ಆತ್ಮೀಯತೆಯನ್ನು ಹಂಚಿಕೊಳ್ಳಲು ಸಾಧ್ಯವಾದದ್ದು ಇನ್ನಷ್ಟು ಸಂತೋಷ ನೀಡಿತು.

ಊರಿನ ನಂಟು ಎಂದರೆ ಕೇವಲ ಹುಟ್ಟಿದ ಊರಿನ ಸಂಬಂಧವಲ್ಲ. ನಮ್ಮನ್ನು ಪ್ರೀತಿಸುವ ಹೃದಯಗಳಿರುವ ಪ್ರತಿಯೊಂದು ಊರೂ ನಮ್ಮದೇ ಆಗುತ್ತದೆ.

ಚಿತ್ರದುರ್ಗದ ಈ ಭೇಟಿಯು ನನಗೆ ಕೊಟ್ಟ ದೊಡ್ಡ ನೆನಪು ಇದೇ. ಇದು ಕೇವಲ ಸನ್ಮಾನದ ನೆನಪಲ್ಲ; ಪ್ರೀತಿ ಮತ್ತು ಸಂಬಂಧಗಳ ಬೆಲೆಯನ್ನು ಮತ್ತೊಮ್ಮೆ ಮನದಟ್ಟು ಮಾಡಿದ ಆತ್ಮೀಯ ಕ್ಷಣ.

ನಮ್ಮೂರಿನವರು ಎಂದು ಪ್ರೀತಿಯಿಂದ ಕರೆದು, ತಮ್ಮವರೆಂದು ಅಪ್ಪಿಕೊಂಡ ಚಿತ್ರದುರ್ಗದ ಗೆಳೆಯರಿಗೆ ನನ್ನ ಹೃದಯದ ಕೃತಜ್ಞತೆಗಳು.

ಕೆಲವು ನಂಟುಗಳು ರಕ್ತಸಂಬಂಧದಿಂದ ಹುಟ್ಟುತ್ತವೆ. ಇನ್ನು ಕೆಲವು ಪ್ರೀತಿಯಿಂದ ಹುಟ್ಟುತ್ತವೆ. ಚಿತ್ರದುರ್ಗದ ಈ ನಂಟು ನನ್ನ ಪಾಲಿಗೆ ಪ್ರೀತಿಯಿಂದ ಬೆಸೆದ ಸುಂದರ ಸಂಬಂಧ. ಹಾಗೆ ಕಾರ್ಯಕ್ರಮವೂ ಸಹ ನಮ್ಮ ಕುಟುಂಬದ ಪಾಲಿಗೆ ಮರೆಯಲಾಗದ ಅವಿಸ್ಮರಣೀಯ ಕ್ಷಣ.
ಲೇಖನ: ಶಿವಾನಂದ ತಗಡೂರು, ಚಿಂತಕರು, ಹಿರಿಯ ಪತ್ರಕರ್ತರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಧ್ಯಮ ಅಕಾಡೆಮಿಯಲ್ಲಿ ಶಿವಾನಂದ ತಗಡೂರ್‌ಗೆ ಅಭಿನಂದನೆನಮ್ಮೂರ ನಂಟು, ಹೀಗೊಂದು ನೆನಪಿನ ಸಿಹಿ! ಚಿತ್ರದುರ್ಗದಲ್ಲಿ ‘ನಮ್ಮೂರ ನೆಂಟರು’ ಉಪಚಾರಸಿನೆಮಾ ಟಿಕೆಟ್‌ಗೆ ಸೆಸ್, ಕಲ್ಯಾಣ ಕಾಯ್ದೆ ತಿದ್ದುಪಡಿ ಪ್ರಶ್ನಿಸಿದ್ದ ಅರ್ಜಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಸೋಲು, 2028ಕ್ಕೆ ಎನ್‌ಡಿಎ ಸರ್ಕಾರ ಖಚಿತ: ಬಿ.ವೈ. ವಿಜಯೇಂದ್ರವಿಧಾನ ಪರಿಷತ್ ಫಲಿತಾಂಶ: ಮತದಾರರ ತೀರ್ಮಾನ ಪರಿಶೀಲಿಸಿ ಸರಿಪಡಿಸಿಕೊಳ್ಳುತ್ತೇವೆ – ಡಿ.ಕೆ.ಶಿವಕುಮಾರ್ಕಾಂಗ್ರೆಸ್‌ನಿಂದ ಸುಳ್ಳು ಆರೋಪ, ಪ್ರಜಾಪ್ರಭುತ್ವಕ್ಕೆ ಧಕ್ಕೆ: ಶಾಸಕ ಡಾ. ಸಿ. ಎನ್. ಅಶ್ವತ್ಥನಾರಾಯಣ ಟೀಕೆ90 ಲಕ್ಷ ಮತದಾರರ ಗುರುತಿನ ಚೀಟಿ ಮುದ್ರಣದಲ್ಲಿ 20 ಕೋಟಿ ಹಗರಣ: ಸಿಬಿಐ ತನಿಖೆಗೆ ಆರ್‌.ಅಶೋಕ್ ಹಾಸನಾಂಬೆ ದೇವಿ ದರ್ಶನೋತ್ಸವ ಗುರುವಾರದಿಂದ ಆರಂಭ: ಗಣ್ಯರು ಹಾಗೂ ಗೋಲ್ಡ್‌ಪಾಸ್‌ದಾರರಿಗೆ ವಿಶೇಷ ವ್ಯವಸ್ಥೆವಿಧಾನ ಪರಿಷತ್ ಚುನಾವಣೆ ಹಿನ್ನಡೆ: ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ ಎಂದ ಪ್ರಿಯಾಂಕ್ ಖರ್ಗೆಪ್ರಧಾನಿ ಕ್ಷೇತ್ರದಲ್ಲಿ ಬಿಜೆಪಿಗೆ ಮುಖಭಂಗ, ಸಮಾಜವಾದಿ ಪಕ್ಷಕ್ಕೆ ಭರ್ಜರಿ ಗೆಲುವು