ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ಹೊಸಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆಯ ಪಕ್ಕದಲ್ಲಿರುವ ಪುರಾತನ ಕಾಲದ ಮಾರಮ್ಮ ದೇವಸ್ಥಾನ ಮುಂಭಾಗದಲ್ಲಿರುವ ಪುಷ್ಕರಣಿಗೆ ಮಣ್ಣು ಸುರಿದು ಪೂಜೆಗೆ ಅಡ್ಡಿಪಡಿಸುತ್ತಿರುವ ಗೋಪಾಲಕೃಷ್ಣ ಮತ್ತಿತರರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಹೊಸಹಳ್ಳಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಸುಮಾರು ನೂರು ವರ್ಷಗಳ ಹಳೆಯದಾಗಿರುವ ಪುಷ್ಕರಣಿಗೆ ಎಸ್ಸಿ. ಜನಾಂಗದವರು ಅನೇಕ ವರ್ಷಗಳಿಂದಲೂ ಮಾರಮ್ಮ ದೇವಿ ಹಬ್ಬ ಆಚರಣೆ ಸಂದರ್ಭದಲ್ಲಿ ಗಂಗಾ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಅದರಂತೆ ಕಳೆದ ತಿಂಗಳು ೯ ರಂದು ಪೂರ್ವಭಾವಿ ಸಭೆ ನಡೆಸಿ ಆ.೧೨ ರಂದು ದೇವಿಯ ಹಬ್ಬ ಆಚರಿಸಲು ಗ್ರಾಮಸ್ಥರೆಲ್ಲರೂ ತೀರ್ಮಾನಿಸಿದ್ದರು. ದೇವಸ್ಥಾನ ಜಾಗದ ಪಕ್ಕದ ಜಮೀನು ಮಾಲೀಕ ಗೋಪಾಲಕೃಷ್ಣ ದೇವಸ್ಥಾನ ನನ್ನ ಸ್ವಂತಕ್ಕೆ ಸೇರಿದ್ದು, ಗ್ರಾಮಸ್ಥರು ಯಾರೂ ಇಲ್ಲಿ ಪೂಜೆ ನಡೆಸಲು ಬಿಡುವುದಿಲ್ಲವೆಂದು ಜು.೧೨ ರಂದು ಜೆಸಿಬಿ. ತರಿಸಿ ಪುಷ್ಕರಣಿಗೆ ಮಣ್ಣು ಸುರಿದು ದೌರ್ಜನ್ಯವೆಸಗಿರುವುದಲ್ಲದೆ ಗ್ರಾಮದಲ್ಲಿ ಅಶಾಂತಿಯನ್ನುಂಟು ಮಾಡುತ್ತಿದ್ದಾನೆಂದು ಪ್ರತಿಭಟನಾಕಾರರು ದೂರಿದರು.
ರಾಜಕೀಯ, ಆರ್ಥಿಕವಾಗಿ ಬಲಾಢ್ಯನಾಗಿರುವ ಗೋಪಾಲಕೃಷ್ಣನನ್ನು ಎಸ್ಸಿ. ಜನಾಂಗ ಪ್ರಶ್ನಿಸಿದರೆ ಹಲ್ಲೆ ನಡೆಸುವ ಬೆದರಿಕೆ ಹಾಕುತ್ತಿದ್ದಾನೆ. ಹೊಸಹಳ್ಳಿ ಗ್ರಾಮಸ್ಥರಿಗೆ ಸೇರಿದ ಓವರ್ ಹೆಡ್ ಟ್ಯಾಂಕ್ ಕುಡಿಯುವ ನೀರಿನ ತೊಟ್ಟಿಯನ್ನು ತನ್ನ ಕಾಂಪೌಂಡ್ ಒಳಗೆ ಸೇರಿಸಿಕೊಂಡು ಕುಡಿಯಲು ನೀರು ಬಿಡುತ್ತಿಲ್ಲ. ಇಂತಹ ಉಪಟಳ ನೀಡುತ್ತಿರುವ ಈತನ ವಿರುದ್ದ ಕಠಿಣ ಕ್ರಮ ಕೈಗೊಂಡು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿಯನ್ನು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ ಜಿಲ್ಲಾಧ್ಯಕ್ಷ ಎಸ್.ಎನ್ ವಿಶ್ವನಾರಾಯಣಮೂರ್ತಿ, ಕೆ.ಮಲ್ಲೇಶಪ್ಪ, ಈರೇಶಪ್ಪ, ಹನುಮಂತಪ್ಪ, ನಾಗರಾಜ, ಮಲ್ಲಿಕಾರ್ಜುನ, ಜಯಪ್ಪ, ವೀರೇಶಪ್ಪ, ತಿಮ್ಮಪ್ಪ, ಸತೀಶ, ಬಿ.ಗುರುಮೂರ್ತಿ, ಜಗದೀಶ, ಪ್ರವೀಣ, ಹನುಮಂತ, ಗೋವಿಂದಪ್ಪ, ಮಂಜುಳ, ರೇಖಾ, ಹೊನ್ನಯ್ಯ, ರೇಣುಕಮ್ಮ, ಸುಲೋಚನಮ್ಮ, ಜಯಮ್ಮ, ನಿಂಗಪ್ಪ, ವಿಷ್ಣು, ಮನು, ಶಿವಲಿಂಗಪ್ಪ, ಶಾಂತಕುಮಾರ, ರಮೇಶ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



