ಚಂದ್ರವಳ್ಳಿ ನ್ಯೂಸ್, ಹಿರಿಯೂರು:
17 ವರ್ಷದೊಳಗಿನ ರಾಷ್ಟ್ರೀಯ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿ ಹಿರಿಯೂರು ತಾಲೂಕಿಗೆ ಕೀರ್ತಿ ತಂದಿರುವ ವೇದಾವತಿ ನಗರದ ನಿವಾಸಿ, ರಾಘವೇಂದ್ರ ಹಾಗೂ ಸುನೀತಾ ದಂಪತಿಯ ಪುತ್ರಿ ಕು. ಸಂಗೀತಾ ಅವರನ್ನು ವೇದಾವತಿ ನಗರದ ನಿವಾಸಿಗಳು ಆತ್ಮೀಯವಾಗಿ ಸನ್ಮಾನಿಸಿ, ಶುಭ ಹಾರೈಸಿದರು.
ಊರಿಗೆ ತಂದ ಹಿರಿಮೆ: ನಗರಸಭೆಯ ಮಾಜಿ ಸದಸ್ಯ ಹಾಗೂ ವಕೀಲರಾದ ತಿಪ್ಪೇಸ್ವಾಮಿ ಮಾತನಾಡಿ, "ರಾಷ್ಟ್ರೀಯ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಕು. ಸಂಗೀತಾ ಅವರು ತಾಲೂಕಿಗೆ ಹಾಗೂ ನಮ್ಮ ವೇದಾವತಿ ನಗರಕ್ಕೆ ಕೀರ್ತಿ ತಂದಿದ್ದಾರೆ. ಇವರ ಕ್ರೀಡಾ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆದು, ಮುಂಬರುವ ದಿನಗಳಲ್ಲಿ ದೇಶವನ್ನು ಪ್ರತಿನಿಧಿಸಿ ದೊಡ್ಡ ಸಾಧನೆ ಮಾಡಲಿ" ಎಂದು ಹಾರೈಸಿ, ಅವರ ಕ್ರೀಡಾ ಭವಿಷ್ಯಕ್ಕೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಸಂಘಟನೆಯಿಂದ ಬೆಂಬಲ: ವಂದೇ ಮಾತರಂ ಜಾಗೃತಿ ವೇದಿಕೆಯ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಪಿ. ಕೃಷ್ಣಮೂರ್ತಿ ಮಾತನಾಡಿ, ಸಂಗೀತಾ ಅವರ ಕ್ರೀಡಾ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದ್ದು, ಸಂಸ್ಥೆಯ ವತಿಯಿಂದ ನಿರಂತರ ಬೆಂಬಲ ಹಾಗೂ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ಈ ಅಭಿನಂದನಾ ಸಮಾರಂಭದಲ್ಲಿ ಬಬ್ಬೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ವಂದೇ ಮಾತರಂ ಜಾಗೃತಿ ವೇದಿಕೆಯ ಸಂಚಾಲಕ ಕೋಟ್ರೇಶ್, ವಿನಯ್, ಯುವ ಘಟಕದ ಎಸ್.ಕೆ. ರಾಘು, ರೈತ ಘಟಕದ ದೇವರಾಜ ನಾಗಣ್ಣ, ಮಂಜುನಾಥ್, ಲಕ್ಷ್ಮಣ್, ವೀರೇಶ್, 2ನೇ ವಾರ್ಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಧನುಷ್, ಜಗನ್, ಶಾರುಕ್ ಸೇರಿದಂತೆ ಸಂಗೀತಾ ಅವರ ಪೋಷಕರಾದ ರಾಘವೇಂದ್ರ ಮತ್ತು ಸುನೀತಾ ಹಾಗೂ ನಗರದ ಪ್ರಮುಖರು ಹಾಜರಿದ್ದರು.



