ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾತೃಭಾಷೆಯ ಸೇವೆಯನ್ನು ಮೀರಿದ ದೊಡ್ಡ ಧರ್ಮ ಮತ್ತೊಂದಿಲ್ಲ; ನಮ್ಮ ದೇಹ ಯಾವುದೇ ದೇಶದಲ್ಲಿದ್ದರೂ ಉಸಿರು ಮಾತ್ರ ಕನ್ನಡವಾಗಿರಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರತಿಪಾದಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡಿನ ಜನತೆಗೆ ಸಂದೇಶ ನೀಡಿದ ಅವರು, "ನಮ್ಮ ಉಸಿರು ಕನ್ನಡ, ನಮ್ಮ ಹೆಸರು ಕನ್ನಡ, ನಮ್ಮ ಕಸುಬು ಕನ್ನಡ. ಕನ್ನಡ ನುಡಿ ಅತ್ಯಂತ ಸುಂದರವಾದದ್ದು; ಅದರಲ್ಲಿ ಏನೇ ಗೀಚಿದರೂ ಅದು ಶ್ರೀಗಂಧದ ಸೌರಭ ನೀಡುತ್ತದೆ. ಜಗದ ಏಳಿಗೆ ಕರ್ನಾಟಕದಿಂದಲೇ ಆಗಲಿದೆ ಎಂದು ರಾಷ್ಟ್ರಕವಿ ದ.ರಾ. ಬೇಂದ್ರೆಯವರು ಬಹಳ ಹಿಂದೆಯೇ ಸಾರಿದ್ದಾರೆ" ಎಂದು ನೆನಪಿಸಿಕೊಂಡರು.
ಸುದ್ಧಿಯ ಪ್ರಮುಖ ಮುಖ್ಯಾಂಶಗಳು: ಸಂಸ್ಕೃತಿ ಮತ್ತು ಜ್ಞಾನದ ಪ್ರತಿಬಿಂಬ: ಮಾತೃಭಾಷೆಯ ಮೂಲಕವೇ ಜ್ಞಾನ ಹಾಗೂ ಸಂಸ್ಕೃತಿ ಹರಿಯುತ್ತದೆ. ಹೆತ್ತ ತಾಯಿ ಮತ್ತು ಹುಟ್ಟಿದ ನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು.
ಕನ್ನಡದ ಮೂಲಕ ಮನಸ್ಸುಗಳ ಗೆಲುವು: ನಾವು ಇತರರ ಮನಸ್ಸುಗಳನ್ನು ಕನ್ನಡದ ಪ್ರೀತಿಯ ಮೂಲಕವೇ ಗೆಲ್ಲಬೇಕು. ನುಡಿ ಉಳಿದರೆ ನಾಡು ಉಳಿಯುತ್ತದೆ, ನಾಡು ಉಳಿದರೆ ನುಡಿ ಉಳಿಯುತ್ತದೆ.
ರಾಜ್ಯೋತ್ಸವ ಬರೀ ಆಚರಣೆಯಲ್ಲ, ಮಾತೃಪೂಜೆ: ನಾವು ಆಚರಿಸುತ್ತಿರುವುದು ಕೇವಲ ರಾಜ್ಯೋತ್ಸವದ ಶುಷ್ಕ ಸಮಾರಂಭವಲ್ಲ, ಇದು ಕನ್ನಡ ತಾಯಿ ಭುವನೇಶ್ವರಿಯ ಸೇವೆ ಹಾಗೂ ಪವಿತ್ರ ಮಾತೃಪೂಜೆ.
ಕುವೆಂಪು ಅವರ ಸಂದೇಶ: "ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಅದು ಗೋವರ್ಧನಗಿರಿ ಆಗುತ್ತದೆ" ಎಂಬ ರಾಷ್ಟ್ರಕವಿ ಕುವೆಂಪು ಅವರ ನುಡಿಯಂತೆ, ಇಂದು ವಿಶ್ವಮಾನವ ಸಂದೇಶ ಸಾರಿದ ನಾಡಿನಲ್ಲಿ ಕನ್ನಡತನ ಜಾಗತಿಕ ಮಟ್ಟದಲ್ಲಿ ಬೆಳಗುತ್ತಿದೆ.
ಮಗು ಹುಟ್ಟಿದಾಗ ತಾಯಿಯನ್ನು ಹೇಗೆ ಪ್ರೀತಿಸುತ್ತದೆಯೋ, ಅದೇ ಪ್ರೀತಿ ಹಾಗೂ ಗೌರವವನ್ನು ನಾವು ನಮ್ಮ ತಾಯಿಭಾಷೆಗೆ ನೀಡಬೇಕು. ಮಾತೃಭಾಷೆಯಲ್ಲಿ ಕಲಿತ ಜ್ಞಾನ ಅತ್ಯಂತ ಗಟ್ಟಿಯಾಗಿರುತ್ತದೆ ಎಂದು ಡಿಕೆಶಿ ಅಭಿಪ್ರಾಯಪಟ್ಟರು.




