ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ 'ಸ್ಟಿಂಗ್ ಆಪರೇಷನ್' ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪವಾಗುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಲಭಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, "ಆರೋಪಿ ರಿತೇಶ್ ಪಾಂಡೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿವಾಸದಲ್ಲಿ ಉಳಿದುಕೊಂಡಿದ್ದ ವೇಳೆ ಮೊಬೈಲ್ ಎಕ್ಸ್ಚೇಂಜ್ ನಡೆದಿದೆ. ಪ್ರಜ್ವಲ್ ಪ್ರಸಾದ್ ಅವರ ಸೂಚನೆ ಮೇರೆಗೆ ವಿಡಿಯೋ ಅಪ್ಲೋಡ್ ಮಾಡಲಾಗಿದೆ," ಎಂದು ತಿಳಿಸಿದ್ದಾರೆ.
ಮೊಬೈಲ್ ಖರೀದಿ: ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯಂತೆ ಆರೋಪಿಗಳಾದ ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಸೆಪ್ಟೆಂಬರ್ 26ರಂದು ದೆಹಲಿಯಲ್ಲಿ ವಿಡಿಯೋ ಅಪ್ಲೋಡ್ ಮಾಡಲು ಮೊಬೈಲ್ ಖರೀದಿಸಿದ್ದರು.
ಸಿಮ್ ಇಲ್ಲದೆ ಅಪ್ಲೋಡ್: ಯಾವುದೇ ಸಿಮ್ ಕಾರ್ಡ್ ಬಳಸದೆ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸಿಸಿಬಿ ಪೊಲೀಸರು ಈ ಮೊಬೈಲ್ ಖರೀದಿ ಜಾಲವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಹಣ ವರ್ಗಾವಣೆ: ಆರೋಪಿಗಳಾದ ರಿತೇಶ್ ಮತ್ತು ಪ್ರಜ್ವಲ್ ನಡುವೆ ಹಣದ ವಹಿವಾಟು ನಡೆದಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಕೇಂದ್ರ ಸಚಿವರ ಮನೆ ಬಳಿ ಮೊಬೈಲ್ ಹಸ್ತಾಂತರಿಸಲಾಗಿತ್ತು ಎಂದು ರಿತೇಶ್ ಹೇಳಿಕೆ ನೀಡಿದ್ದಾನೆ.
ಮುಂದಿನ ಕ್ರಮ: ಈ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸುತ್ತಿರುವ ಸಿಸಿಬಿ ಪೊಲೀಸರು, ಪ್ರಜ್ವಲ್ ಪ್ರಸಾದ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಅವರ ಹೇಳಿಕೆ ದಾಖಲಿಸಿಕೊಂಡ ನಂತರ ಕುಮಾರಸ್ವಾಮಿ ಅವರ ನಿವಾಸದ ಪರಿಶೀಲನೆ ನಡೆಸುವ ಸಾಧ್ಯತೆಯಿದೆ.




