ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯ ‘ಹರ್‌ಘರ್‌ತಿರಂಗಾ’ ಅಭಿಯಾನವನ್ನು ನಾಗಪುರದಲ್ಲಿರುವ ಆರ್‌ಎಸ್‌ಎಸ್‌ಕೇಂದ್ರ ಕಚೇರಿಯಿಂದಲೇ ಪ್ರಾರಂಭಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲೆಸೆದಿದ್ದಾರೆ.
ಸ್ವಾತಂತ್ರ್ಯ ಬಂದು ಐದು ದಶಕಗಳಿಗೂ ಹೆಚ್ಚು ಕಾಲ ನಾಗಪುರದ ಆರ್‌ಎಸ್‌ಎಸ್‌ಕೇಂದ್ರ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ಅಧಿಕೃತವಾಗಿ ಅಲ್ಲಿ 2002ರಲ್ಲಷ್ಟೇ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಹೀಗಿರುವಾಗ, ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಯ ಪಾಠ ಮಾಡುವ ಮೊದಲು, ಬಿಜೆಪಿ ತನ್ನ ವೈಚಾರಿಕ ಮಾತೃಸಂಸ್ಥೆ ರಾಷ್ಟ್ರಧ್ವಜಕ್ಕಿಂತ ಭಗವಾ ಧ್ವಜಕ್ಕೆ ಏಕೆ ಆದ್ಯತೆ ನೀಡಿತು ಮತ್ತು ಇಷ್ಟೊಂದು ವರ್ಷಗಳ ಕಾಲ ರಾಷ್ಟ್ರಧ್ವಜವನ್ನು ಅಲ್ಲಿ ಏಕೆ ಹಾರಿಸಲಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಷ್ಟೇ ಅಲ್ಲದೆ, ಪೂರ್ಣ ಗಣವೇಷದಲ್ಲಿರುವ ಆರ್‌ಎಸ್‌ಎಸ್‌ಸ್ವಯಂಸೇವಕರು ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಹೆಮ್ಮೆಯಿಂದ ಪಥಸಂಚಲನ ನಡೆಸಿದ ಎಷ್ಟು ಸಂದರ್ಭಗಳನ್ನು ನೀವು ನೋಡಿದ್ದೀರಿ? ಒಂದೂ ಇಲ್ಲ! ಆದರೆ ಇವರೇ ಪ್ರತಿಯೊಬ್ಬರಿಗೂ ‘ದೇಶಭಕ್ತ’ರ ಸರ್ಟಿಫಿಕೇಟ್ ಹಂಚುತ್ತಾ ಓಡಾಡುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.



