ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಕೇಂದ್ರದ ಬಿಜೆಪಿ ಸರ್ಕಾರ ದೇಶದ ಜನತೆಗೆ ನಿರಂತರವಾಗಿ ಬೆಲೆ ಏರಿಕೆಯ ಬರೆ ಎಳೆಯುತ್ತಿದ್ದರೆ, ನಮ್ಮ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ನೆರವಿಗೆ ಧಾವಿಸಿ ಗ್ಯಾರಂಟಿ ಯೋಜನೆಗಳನ್ನು ನೀಡಿದೆ" ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಮೇ 30 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು.
ಗ್ಯಾರಂಟಿ ಇಲ್ಲದಿದ್ದರೆ ಬದುಕು ದುಸ್ತರ:
"ಒಂದು ವೇಳೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದೇ ಇದ್ದಿದ್ದರೆ, ಈ ಭೀಕರ ಬೆಲೆ ಏರಿಕೆಯ ದಿನಗಳಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಈಗಾಗಲೇ ರಾಜ್ಯದ ಅರ್ಧದಷ್ಟು ಹೋಟೆಲ್‌ಗಳು ಮುಚ್ಚಿಹೋಗಿವೆ. ಹಂತ ಹಂತವಾಗಿ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವುದರಿಂದ ಹೋಟೆಲ್ ಉದ್ಯಮಿಗಳು ಹಾಗೂ ಜನಸಾಮಾನ್ಯರ ಬದುಕು ಅತ್ಯಂತ ಕಷ್ಟಕರವಾಗಿದೆ" ಎಂದು ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.
ತೆರಿಗೆ ಹೆಸರಲ್ಲಿ 43 ಲಕ್ಷ ಕೋಟಿ ಲೂಟಿ!:
ಕಳೆದ 12 ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ರೂಪದಲ್ಲೇ ಸಾರ್ವಜನಿಕರ ಜೇಬಿನಿಂದ ಬರೋಬ್ಬರಿ 43 ಲಕ್ಷ ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದೆ ಎಂದು ಡಿಕೆಶಿ ಆರೋಪಿಸಿದರು.
ಯುಪಿಎ ಹಾಗೂ ಹಾಲಿ ಮೋದಿ ಸರ್ಕಾರದ ಅವಧಿಯ ಇಂಧನ ದರಗಳ ತೌಲನಿಕ ನೋಟ ಇಲ್ಲಿದೆ.
ಇಂಧನ ಮಾದರಿ ಯುಪಿಎ ಆಡಳಿತ ಹಾಲಿ ಮೋದಿ ಆಡಳಿತ (ಪ್ರಸ್ತುತ) ಪೆಟ್ರೋಲ್ (ಪ್ರತಿ ಲೀಟರ್‌ಗೆ) 71.41 - 110 ಕ್ಕೂ ಅಧಿಕ
ಡೀಸೆಲ್ (ಪ್ರತಿ ಲೀಟರ್‌ಗೆ) 56.71 -98 ಕ್ಕೂ ಅಧಿಕ
"ಕಳೆದ ಕೇವಲ 11 ದಿನಗಳಲ್ಲಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ಬರೋಬ್ಬರಿ 7.50 ರೂಪಾಯಿಗಿಂತಲೂ ಹೆಚ್ಚು ಏರಿಕೆ ಮಾಡಿದೆ. ಸಾರ್ವಜನಿಕರ ಉಳಿತಾಯಕ್ಕೆ ಈ ಸರ್ಕಾರ ಕೊಳ್ಳಿ ಇಡುತ್ತಿದೆ" ಎಂದು ಅವರು ಆಕ್ರೋಶ ಹೊರಹಾಕಿದರು.
"ಮೊದಲು ಕೇಂದ್ರ ಸರ್ಕಾರ ಬೆಲೆ ಇಳಿಸಲಿ":
"ರಾಜ್ಯ ಸರ್ಕಾರ ಇಂಧನ ಮೇಲಿನ ತೆರಿಗೆ ಕಡಿಮೆ ಮಾಡಬೇಕು" ಎಂದು ಒತ್ತಾಯಿಸುತ್ತಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಡಿಕೆಶಿ, "ಮೊದಲು ಕೇಂದ್ರ ಸರ್ಕಾರದವರು ಬೆಲೆ ಕಡಿಮೆ ಮಾಡಲಿ. ಅದನ್ನು ಬಿಟ್ಟು ನಮಗೆ ತೆರಿಗೆ ಕಡಿಮೆ ಮಾಡಿ ಎನ್ನುತ್ತಿರುವುದು ಎಷ್ಟು ಸರಿ? ಇಂದು ಅಡುಗೆ ಎಣ್ಣೆ ಬೆಲೆಯೂ ಸಹ ಗಗನಕ್ಕೇರಿದೆ. ಜನರಿಗೆ ತೊಂದರೆ ಕೊಡಲೆಂದೇ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ" ಎಂದರು.
ಮೇ 30 ರಿಂದ ಕಾಂಗ್ರೆಸ್ ಬೃಹತ್ ಪ್ರತಿಭಟನೆ:
ಕೇಂದ್ರದ ಈ ಜನವಿರೋಧಿ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಉಗ್ರ ಹೋರಾಟ ರೂಪಿಸಿದೆ. ಮೇ 30 ರಂದು ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಬೃಹತ್ ಪ್ರತಿಭಟನೆ ನಡೆಯಲಿದ್ದು, ಆನಂತರದ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆಯನ್ನು ವಿಸ್ತರಿಸಲಾಗುವುದು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
"ಇಂದು ಜನರ ಆದಾಯ ಪಾತಾಳಕ್ಕೆ ಕುಸಿಯುತ್ತಿದ್ದರೆ, ಅಗತ್ಯ ವಸ್ತುಗಳ ಬೆಲೆಗಳು ಮಾತ್ರ ಗಗನ ಮುಟ್ಟುತ್ತಿವೆ. ಜನರ ಲೂಟಿ ನಿಲ್ಲಿಸಲು ಸಾರ್ವಜನಿಕರೇ ಈ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ" ಎಂದು ಅವರು ಜನತೆಗೆ ಕರೆ ನೀಡಿದರು.



