ಜವಾಬ್ದಾರಿ ಸ್ಥಾನದಲ್ಲಿರುವ ವಿಪಕ್ಷ ನಾಯಕ ಅಶೋಕ್ ಸುಳ್ಳು ಹೇಳಬಾರದು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಪಕ್ಷ ನಾಯಕ ಆರ್.ಅಶೋಕ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸುಳ್ಳು ಹೇಳಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

ಜಾತಿಗಣತಿ ವರದಿಯನ್ನು ಸಿದ್ದರಾಮಯ್ಯ ಅವರು ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವ ಆರ್.ಅಶೋಕ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಜಾತಿಗಣತಿ ವರದಿ ನಿಜವೇ ಅಥವಾ ಸುಳ್ಳೇ ಎಂಬುದರ ಬಗ್ಗೆ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ, ಸದಸ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿ ದಯಾನಂದ್ ಅವರ ಬಳಿ ವಿಚಾರಿಸಿದರೆ ಸತ್ಯದ ಉತ್ತರ ಸಿಗಲಿದೆ.  ಹಿಂದುಳಿದ ವರ್ಗಗಳ ಆಯೋಗ ಸ್ವಾಯತ್ತ ಸಂಸ್ಥೆ. ಸೀಲ್ ಮಾಡಿದ್ದ ವರದಿಯನ್ನು ಕ್ಯಾಬಿನೆಟ್ ಮುಂದೆ ತಂದು ಅಲ್ಲಿಯೇ ತೆರೆದು ನೋಡಲಾಯಿತು. ಇದನ್ನು ವಿಡಿಯೋ ಚಿತ್ರೀಕರಣ ಕೂಡ ಮಾಡಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಸತೀಶ್ ಜಾರಕಿಹೊಳಿ ಅವರು ಜಾತಿಗಣತಿ ಅನುಷ್ಠಾನಕ್ಕೆ ಇನ್ನೂ ಒಂದು ವರ್ಷವಾಗುತ್ತದೆ ಎನ್ನುವ ಬಗ್ಗೆ ಪ್ರಶ್ನಿಸಿದಾಗ, ಆಂತರಿಕವಾಗಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ವಿಚಾರ. ಸಾರ್ವಜನಿಕವಾಗಿ ಚರ್ಚೆ ಮಾಡುವ ಸಂಗತಿ ಅಲ್ಲ ಎಂದರು.

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಅಧಿಕಾರಿಗಳು ಜನಿವಾರ ತೆಗೆಸಿದ್ದು ತಪ್ಪು. ಒಂದಷ್ಟು ಮಂದಿ ಲಿಂಗ, ಉಡುದಾರ ಧರಿಸಿರುತ್ತಾರೆ. ತಾಳಿ, ಓಲೆ, ಜನಿವಾರಗಳನ್ನು ಮುಟ್ಟಬಾರದು. ಇದೆಲ್ಲ ಅವರವರ ಧರ್ಮದ ವಿಚಾರ. ಸರ್ಕಾರ ಇಂತಹ ವಿಚಾರಗಳಿಗೆ ಅವಕಾಶ ಕೊಡುವುದಿಲ್ಲ. ಪೊಲೀಸ್ ಕೆಲಸಕ್ಕೆ ಆಯ್ಕೆ ಮಾಡುವಾಗ ತೆಗೆಸುವ ಪದ್ಧತಿಯಿದೆ.

ಆದರೆ ಶಾಲಾ ಕಾಲೇಜುಗಳಲ್ಲಿ ತೆಗೆಯಬಾರದು. ಈ ರೀತಿ ಮಾಡಿದ್ದು ತಪ್ಪು. ಕಣ್ಣಿಗೆ ಕಾಣದ ಬ್ಲೂಟೂತ್ ಸಾಧನಗಳು ಸೇರಿದಂತೆ ಒಂದಷ್ಟು ಸಾಧನಗಳನ್ನು ಬಳಸಿಕೊಂಡು ನಕಲು ಮಾಡಿದ್ದ ಘಟನೆಗಳು ಈ ಹಿಂದೆ ನಡೆದಿತ್ತು. ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.

Share This Article
error: Content is protected !!
";