ಡೀಸೆಲ್ ಬೆಲೆ ಏರಿಕೆ ಖಂಡಿಸಿ ಲಾರಿ ಮುಷ್ಕರಕ್ಕೆ ಮುಂದಾದ ಮಾಲೀಕರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರ ಡೀಸೆಲ್ ಬೆಲೆ 2 ರೂ. ಏರಿಕೆ ಮಾಡಿರುವುದನ್ನು ಖಂಡಿಸಿ  ಲಾರಿ ಮಾಲೀಕರು ರಾಜ್ಯ ಸರ್ಕಾರದ ವಿರುದ್ಧ
ಲಾರಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈ ಸಂಬಂಧ ಶನಿವಾರ ಸಭೆ ನಡೆಸಲಿದ್ದಾರೆ ತಿಳಿದು ಬಂದಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ಹಾಗಾಗಿ ಇಂದು ಈ ಕುರಿತು ಸಭೆ ನಡೆಸುತ್ತೇವೆ. ದರ ಏರಿಕೆ ಖಂಡಿಸಿ ಮುಂದಿನ ವಾರ ಮುಷ್ಕರಕ್ಕೆ ಕರೆ ನೀಡಲಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ತಿಳಿಸಿದ್ದಾರೆ.

ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕೆಲವು ದಿನಗಳ ಹಿಂದಷ್ಟೇ ಶೇಕಡ 2.73 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಡಿಸೆಲ್ ಬೆಲೆ 2 ರೂಪಾಯಿಯಷ್ಟು ಹೆಚ್ಚಳವಾಗಿದೆ. ಏಪ್ರಿಲ್ 1ರಿಂದಲೇ ಹೊಸ ದರ ಜಾರಿಗೆ ಬಂದಿದೆ.

ದರ ಹೆಚ್ಚಳದ ನಂತರ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 91.02 ರೂಪಾಯಿ ಆಗಿದೆ. ಒಂದೆಡೆ ಡೀಸೆಲ್ ದರ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೆ ಮತ್ತೊಂದೆಡೆ ತನ್ನ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಅಗತ್ಯ ವಸ್ತುಗಳ ಬೆಲೆ ಮತ್ತೆ ಹೆಚ್ಚಳವಾಗುವ ಆತಂಕ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಬಹುತೇಕ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಡೀಸೆಲ್ ಬೆಲೆ ಹೆಚ್ಚಳದಿಂದ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಸಾಗಾಟ ದರ ಹೆಚ್ಚಳವಾದಲ್ಲಿ ಮತ್ತೆ ಬೆಲೆ ಏರಿಕೆಯ ಹೊಡೆತ ಎದುರಿಸಬೇಕಾಗಬಹುದು. ಅದರಲ್ಲೂ ಒಂದು ವೇಳೆ ಲಾರಿ ಮುಷ್ಕರ ನಡೆದಿದ್ದೆ ಆದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮೇಲೆ ನಕಾರಾತ್ಮಕ ಪರಿಣಾಮವಾಗಲಿದೆ ಎನ್ನುವ ಆತಂಕ ಮನೆ ಮಾಡಿದೆ.

Share This Article
error: Content is protected !!
";