ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಬೃಹತ್ ಕಟ್ಟಡಗಳು, ನ್ಯಾಯಾಲಯಗಳ ಸಮುಚ್ಚಯ ಕಟ್ಟಡ, ಅಗ್ನಿಶಾಮಕ ಠಾಣೆ, ಕುರಿ ಮಾರುಕಟ್ಟೆ ಪ್ರಾಂಗಣ ಸೇರಿದಂತೆ ನೂರಾರು ಹಳ್ಳಿಗಳಿಗೆ ಸಂಪರ್ಕ ಸಾಧಿಸುವ ಪ್ರಮುಖ ಎಪಿಎಂಸಿ ಜಂಕ್ಷನ್‌ಬಳಿ ಮೇಲು ಸೇತುವೆ ನಿರ್ಮಿಸುವಂತೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ, ಅದರ ಯೋಜನಾ ವಿಭಾಗದ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರು ಸಾರ್ವಜನಿಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಮೇಲ್ಸೇತುವೆ ನಿರ್ಮಾಣ ಮಾಡಲು ಕಾನೂನು ಪ್ರಕಾರ ಪರಿಗಣಿಸಿ ನಿರ್ಧಾರ ಮಾಡಬೇಕಾಗಿದೆ.
2001-02ರಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಷ್ಠಾನಾಧಿಕಾರಿಗಳು ಅವೈಜ್ಞಾನಿಕವಾಗಿ ಪ್ರಮುಖ ಈ ಜಕ್ಷನ್ ನಲ್ಲಿ ಕೇವಲ ಎರಡು ಬೈಕ್, ಒಂದು ಎಮ್ಮೆ, ಎತ್ತು ಹೋಗುವಂತ ಅಂಡರ್ ಪಾಸ್ ನಿರ್ಮಿಸಿ ಸಾಕಷ್ಟು ಅಪಘಾತಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ.
ಕುರಿ ಮಾರುಕಟ್ಟೆ- ಎಪಿಎಂಸಿ ಮಾರುಕಟ್ಟೆ ಸಮೀಪದಲ್ಲೇ ಕುರಿ ಮಾರುಕಟ್ಟೆ ನಡೆಯುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಕಷ್ಟು ಕುರಿ, ಮೇಕೆಗಳನ್ನು ತಂದು ರೈತರು ಮಾರಾಟ ಮಾಡುವ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಈ ಕುರಿ ಮಾರುಕಟ್ಟೆಗೆ ತಲುಪಬೇಕಾದರೆ ಕನಿಷ್ಠ 2 ಕಿಲೋ ಮೀಟರ್ ಸುತ್ತಿಕೊಂಡು ಬರಲೇಬೇಕು. ಇಲ್ಲವಾದರೆ ಕುರಿ ಮಾರುಕಟ್ಟೆ ತಲುಪುವುದು ದುಸ್ತರವಾಗಿದೆ. ಕುರಿ ಸಂತೆ ನಡೆಯುವ ಪ್ರತಿ ಸಂದರ್ಭದಲ್ಲೂ ಹತ್ತಾರು ಸಾವಿರ ಕುರಿಗಳು, ಮೇಕೆಗಳು, ಮರಿಗಳನ್ನು ಮಾರಾಟಕ್ಕೆ ಕುರಿಗಾಯಿಗಳು ತರುತ್ತಿದ್ದು ಇವರ ಪರಿಸ್ಥಿತಿ ಹೇಳತೀರದಾಗಿದೆ. ಕುರಿ ಸಂತೆ ಇದ್ದ ದಿನ ಪೂರ್ತಿ ರೋಡ್ ಜಾಮ್ ಆಗುತ್ತಿದ್ದು ಆ ರಸ್ತೆಯಲ್ಲೇ ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ಅಂಡರ್ ಪಾಸ್ ನಿರ್ಮಿಸಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ.
ಹಿರಿಯೂರು ನ್ಯಾಯಾಲಯ- ಕುರಿ ಮಾರುಕಟ್ಟೆ ಸಮೀಪದಲ್ಲೇ ಹಿರಿಯೂರು ನ್ಯಾಯಾಲಯಗಳ ಕಟ್ಟಡ ಇದ್ದು ಈ ಪ್ರದೇಶಕ್ಕೂ ಎರಡು ಮೂರು ಕಿಲೋ ಮೀಟರ್ ಸುತ್ತಿ ಬಳಸಿ ಬರಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಪ್ರತಿನಿತ್ಯ ನ್ಯಾಯಾಲಯಕ್ಕೆ ನೂರಾರು ಮಂದಿ ಕಕ್ಷಿದಾರರು ಬರುತ್ತಿದ್ದು ಅವರಿಗೂ ಕೂಡ ಸಾಕಷ್ಟು ತೊಂದರೆ ಆಗಿದೆ. ಎಪಿಎಂಸಿ ಜಕ್ಷನ್ ನಲ್ಲಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಿಸಿದ್ದರೆ ಸುಗಮ ಸಂಚಾರಕ್ಕೆ ಅನುಕೂಲ ಆಗುತ್ತಿತ್ತು.
ರಾಜ್ಯ ಆಹಾರ ನಿಗಮದ ಉಗ್ರಾಣ-ಕುರಿ ಮಾರುಕಟ್ಟೆಗೆ ಹೊಂದಿಕೊಂಡಂತೆ ಕರ್ನಾಟಕ ರಾಜ್ಯ ಆಹಾರ ನಿಗಮದ ಉಗ್ರಾಣಗಳಿದ್ದು ಪ್ರತಿ ನಿತ್ಯ ನೂರಾರು ಲಾರಿಗಳು ಉಗ್ರಾಣಕ್ಕೆ ಆಹಾರ ತಲುಪಿಸಲು ಬರುತ್ತದೆ. ಈ ಸಂದರ್ಭದಲ್ಲಿ ಬಹಳಷ್ಟು ಸಮಸ್ಯೆ ಕಾಡುತ್ತಿದೆ. ಈ ಜಾಗದಲ್ಲಿ ಒಂದು ಮೇಲ್ಸೇತುವೆ(ಅಥವಾ ಅಂಡರ್ ಪಾಸ್) ನಿರ್ಮಿಸಿದಿದ್ದರೆ ನೂರಾರು ಲಾರಿಗಳು ಸುಗಮವಾಗಿ ಬಂದು ಹೋಗುತ್ತಿದ್ದವು. ಯಾರಿಗೂ ಸಮಸ್ಯೆ ಆಗುತ್ತಿರಲಿಲ್ಲ.
ಎಪಿಎಂಸಿ ಮಾರುಕಟ್ಟೆ-ಸುಗ್ಗಿ ಕಾಲದ ವಾರದಲ್ಲಿ ಮೂರು ದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜನಜಂಗುಳಿಯಿಂದ ಕೂಡಿರುತ್ತದೆ. ಹಲವು ಲಾರಿ, ಟ್ರ್ಯಾಕ್ಟರ್, ಟಾಟಾ ಎಸಿಗಳು, ಬೈಕ್ ಸೇರಿದಂತೆ ಎತ್ತಿನ ಗಾಡಿಗಳಿಂದ ಇಡೀ ಜಕ್ಷನ್ ತುಂಬಿ ತುಳುಕುತ್ತಿರುತ್ತದೆ. ಎಪಿಎಂಸಿ ಮಾರುಕಟ್ಟೆ ಸುಗಮವಾಗಿ ಬರಲು ಸಾಧ್ಯವಾಗುತ್ತಿಲ್ಲ. ಕುರಿ ಮಾರುಕಟ್ಟೆ, ಎಪಿಎಂಪಿ ಮಾರುಕಟ್ಟೆ ಇದ್ದ ದಿನಗಳಲ್ಲಿ ಟಿಬಿ ವೃತ್ತ, ಕೋರ್ಟ್ ರಸ್ತೆ, ಬಬ್ಬರೂ ರಸ್ತೆ ಎಲ್ಲವೂ ಜಾಮ್ ಆಗಿರುತ್ತದೆ. ಎಪಿಎಂಸಿಗೂ ಸುತ್ತಿ ಬಳಸಿ ಬರಬೇಕಿದ್ದು ಯಮಯಾತನೆ ಆಗಿದೆ. ಮೇಲ್ಸೇತುವೆ ಅಥವಾ ಒಂದು ದೊಡ್ಡ ಅಂಡರ್ ಪಾಸ್ ನಿರ್ಮಿಸಿದ್ದರೆ ಇದಕ್ಕೆಲ್ಲ ಕಡಿವಾಣ ಹಾಕಬಹುದಿತ್ತು.
ಮೇಲೆ ಸೂಚಿಸಿರುವ ಎಲ್ಲ ವಾಣಿಜ್ಯ ವಹಿವಾಟು ಕೇಂದ್ರಗಳಿಗೆ ಮತ್ತು ಕೋರ್ಟ್ ಗೆ ಬರುವವರು ಸುತ್ತಿ ಬಳಸಿಕೊಂಡು ಬರಬೇಕಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಇದೇ ರಸ್ತೆಯಲ್ಲಿ ಅಂಬ್ಯುಲೆನ್ಸ್ ಗಳು ಮತ್ತು ಅನಾರೋಗ್ಯಕ್ಕೆ ತುತ್ತಾದವರು ಕೂಡಾ ಸುತ್ತಿಕೊಂಡು ಆಸ್ಪತ್ರೆಗೆ ಹೋಗುವ ವೇಳೆ ಉಂಟಾಗುವ ಅನಾಹುತಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಎಪಿಎಂಸಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಿ, ಜನ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆ ಇದೆ.
ಇದೇ ಜಕ್ಷನ್ ನಲ್ಲಿ ಅಗ್ನಿಶಾಮಕ ಠಾಣೆ ಕೂಡಾ ಇದೆ. ಇವರದ್ದು ತುರ್ತು ಸೇವೆಗಳು. ಇವರು ಸುತ್ತಿ ಬಳಸಿ ಹೋಗುವಷ್ಟರಲ್ಲಿ ಭಾರೀ ಅನಾಹುತಗಳು ಆಗಿರುತ್ತದೆ.
ಮುಖ್ಯ ಸಂಪರ್ಕ ಕೇಂದ್ರ- ಎಪಿಎಂಸಿ ಜಕ್ಷನ್ ನಿಂದ ಬಬ್ಬೂರು, ಬಬ್ಬೂರು ಫಾರಂ, ಆಲೂರು ಮಾರ್ಗ, ಬಬ್ಬೂರು-ಬ್ಯಾಡರಹಳ್ಳಿ-ಹರಿಯಬ್ಬೆ-ಧರ್ಮಪುರ ಮಾರ್ಗ, ಶಿರಾ ಮಾರ್ಗ, ಭೀಮನ ಬಂಡೆ ಯಳನಾಡು ಮಾರ್ಗ ಹೀಗೆ ನೂರಾರು ಹಳ್ಳಿಗಳಿಗೆ ಸಂಪರ್ಕ ಸಾಧಿಸುವ ಪ್ರಮುಖ ಕೇಂದ್ರವಾಗಿದೆ ಈ ಎಪಿಎಂಸಿ ಜಕ್ಷನ್.
ಈ ಜಾಗದಲ್ಲಿ ತುರ್ತಾಗಿ ಒಂದು ಮೇಲ್ಸೇತುವೆ ಅಥವಾ ಅಂಡರ್ ಪಾಸ್ ರಸ್ತೆ ನಿರ್ಮಿಸುವುದು ಅಗತ್ಯವಿದೆ. ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಿಸಿರುವುದರಿಂದ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಈ ಎಲ್ಲ ಸಮಸ್ಯೆಗಳನ್ನು ಅರಿತು ಎನ್‌ಎಚ್‌ಎಐ ಅಧಿಕಾರಿಗಳು ಮೇಲ್ಸೇತುವೆ ನಿರ್ಮಿಸಲು ಮುಂದಾಗಬೇಕಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಸಂಸದರು, ರಾಜ್ಯ ಸರ್ಕಾರಕ್ಕೆ ಜಿಲ್ಲಾ ಸಚಿವರು, ಕ್ಷೇತ್ರದ ಶಾಸಕರು ಎನ್‌ಎಚ್‌ಎಐಗೆ ಅಗತ್ಯ ನಿರ್ದೇಶನ ನೀಡಿ ಅಂಡರ್ ಪಾಸ್ ರಸ್ತೆ ನಿರ್ಮಿಸಬೇಕು.
“ಆ ಭಾಗದಲ್ಲಿ ನೂರಾರು ವಾಹನಗಳು ದಿನನಿತ್ಯ ಓಡಾಡುತ್ತಿದ್ದು ಒಂದು ಅಂಡರ್ ಪಾಸ್ ಅವಶ್ಯಕತೆ ಇದೆ. ರಾಷ್ಟ್ರೀಯ ಹೆದ್ದಾರಿಯಿಂದ ಬಬ್ಬೂರು ಮಾರ್ಗವಾಗಿ ಆಂಧ್ರ ಗಡಿಯವರಿಗೂ ಸಾಕಷ್ಟು ವಾಹನಗಳು ಓಡಾಡುವದರಿಂದ ಅಂಡರ್ ಪಾಸ್ ಬೇಕಾಗಿದೆ”.
ವಿ.ಅರುಣ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರು, ಬಬ್ಬೂರ ಫಾರಂ.
“ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಅಗ್ನಿಶಾಮಕ ದಳ ರಸ್ತೆ, ಕುರಿ ಮಾರುಕಟ್ಟೆ ಹಾಗೂ ಕೋರ್ಟ್ ಈ ನಾಲ್ಕು ಕೇಂದ್ರ ಬಿಂದುಗಳಾಗಿರುವುದರಿಂದ ಅಂಡರ್ ಪಾಸ್ ವ್ಯವಸ್ಥೆ ಮಾಡಬೇಕಾಗುತ್ತದೆ”.
ಹೇಮಂತ್ ಯಾದವ್, ಮಾಜಿ ಅಧ್ಯಕ್ಷರು, ಬಬ್ಬೂರು ಗ್ರಾಮ ಪಂಚಾಯಿತಿ.
“ಬೆಂಗಳೂರು ಮಾರ್ಗದಿಂದ ಬಂದ ವಾಹನಗಳು ಆಂಧ್ರಕ್ಕೆ ಹೋಗಬೇಕೆಂದರೆ ಟಿಬಿ ವೃತ್ತದವರೆಗೂ ಹೋಗಿ ಸುತ್ತಿಬಳಸಿ ಬರಬೇಕಾಗುತ್ತದೆ ಆ ಮಧ್ಯ ಎರಡು ಕಡೆ ಅವಶ್ಯಕತೆ ಇರುವ ಮಾರುಕಟ್ಟೆಗಳಿವೆ. ಕೋರ್ಟ್, ಅಗ್ನಿಶಾಮಕ ದಳ, ಕೃಷಿ ಉತ್ಪನ್ನ ಮಾರುಕಟ್ಟೆ ಇರುವುದರಿಂದ ಆದಷ್ಟು ಬೇಗ ಅಂಡರ್ ಪಾಸ್ ಬಗ್ಗೆ ಗಮನ ಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬೇಕಾಗುತ್ತದೆ”.
ಚಿತ್ತಪ್ಪ ಹೊಸಹಟ್ಟಿ, ಅಧ್ಯಕ್ಷರು, ಬಬ್ಬೂರು ಗ್ರಾಮ ಪಂಚಾಯಿತಿ.