ಸ್ಯಾಂಕಿ ಟ್ಯಾಂಕ್​​ ಬಫರ್ ಝೋನ್​ನಲ್ಲೇ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಅನುಮತಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯ ನಿಯಮಗಳು ಉಲ್ಲಂಘನೆಯಾಗದಂತೆ ಬೆಂಗಳೂರು ನಗರದ ಸ್ಯಾಂಕಿ ಟ್ಯಾಂಕ್​​ನ ಬಫರ್ ಝೋನ್​ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಹೈಕೋರ್ಟ್ ಅನುಮತಿ ನೀಡಿ ಆದೇಶಿಸಿದೆ.

ನಗರದ ಕೆರೆಗಳ ಸಂರಕ್ಷಣೆ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಗೀತಾ ಮಿಶ್ರಾ ಎಂಬವರು ಸಲ್ಲಿಸಿದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಸಾರ್ವಜನಿಕ ಸುವ್ಯವಸ್ಥೆ ಮತ್ತು ಕಾನೂನಿನಲ್ಲಿನ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಕಾಪಾಡಬೇಕು. ಜೊತೆಗೆ, ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ನ್ಯಾಯಪೀಠವು ನೀಡಿರುವ ತನ್ನ ಆದೇಶದಲ್ಲಿ ತಿಳಿಸಿದೆ.

 ಕಾವೇರಿ ಆರತಿ ಕಾಯಕ್ರಮ ಸಾಂಸ್ಕೃತಿಕವಾಗಿದ್ದು, ಯಾವುದೇ ರೀತಿಯಲ್ಲಿಯೂ ವಾಣಿಜ್ಯ ಚಟುವಟಿಕೆ ಅಲ್ಲ. ಈ ಸಂದರ್ಭದಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳು, ಆಹಾರ ಪದಾರ್ಥಗಳ ಮಾರಾಟ ಮಾಡುವುದಿಲ್ಲ. ಈ ರೀತಿಯ ಆರತಿಯನ್ನು ಈ ಹಿಂದೆಯೂ ಇದೇ ಕೆರೆಯಲ್ಲಿ ಆಯೋಜಿಸಲಾಗಿದ್ದು, ಇದು ಮೊದಲ ಬಾರಿಗೆ ಮಾಡಿರುವುದಲ್ಲ ಎಂಬುದಾಗಿ ಸರ್ಕಾರ ಮತ್ತು ಜಲ ಮಂಡಳಿ ವಕೀಲರು ಭರವಸೆ ನೀಡಿದ್ದಾರೆ. ಅದರಂತೆ ಅನುಮತಿ ನೀಡುತ್ತಿರುವುದಾಗಿ ಪೀಠ ಹೇಳಿದೆ.

ಕೆರೆಗಳ ಸಂರಕ್ಷಣೆಗೆ ಪ್ರೋತ್ಸಾಹಿಸುವುದು ಮತ್ತು ಅಭಿವೃದ್ಧಿ ಸಾರ್ವಜನಿಕ ಜಾಗೃತಿ ಮೂಡಿಸುವುದಕ್ಕೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯಲ್ಲಿ ಅವಕಾಶವಿದೆ ಎಂಬುದಾಗಿ ಜಲಮಂಡಳಿ ಪರ ವಕೀಲರ ವಾದ ಪುರಸ್ಕರಿಸಿದ ಪೀಠ, ಕಾಯಿದೆಯಲ್ಲಿ ವಿವರಿಸಿರುವಂತೆ ಕೆರೆಗಳ ಸಂರಕ್ಷಣೆಗೆ ವಿರುದ್ಧವಾಗಿರುವಂತಹ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಿ ಆದೇಶಿಸಿತು.

ಇದೇ ಸಂದರ್ಭದಲ್ಲಿ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಮನವಿ ಮಾಡದೆ, ವಾದ ಅಂಶಗಳನ್ನೂ ನೀಡದೆ ಕಾವೇರಿ ಆರತಿ ಆಯೋಜನೆ ಮಾಡುತ್ತಿದ್ದ ಬೆಂಗಳೂರು ಜಲ ಮಂಡಳಿಯನ್ನು ಪ್ರತಿವಾದಿಯನ್ನಾಗಿಸದೆ, ಅರ್ಜಿಯ ಪ್ರತಿಯನ್ನೂ ನೀಡದ ಅರ್ಜಿದಾರರ ಪರ ವಕೀಲರ ಕ್ರಮಕ್ಕೆ ನ್ಯಾಯಪೀಠ ತೀವ್ರ ತೀವ್ರ ಸಮಾಧಾನ ವ್ಯಕ್ತಪಡಿಸಿತು.

ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಗಂಗಾ ಆರತಿ ಮಾದರಿಯಲ್ಲಿ ನಗರದ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಹಮ್ಮಿಕೊಳ್ಳುವುದಕ್ಕೆ ಅರ್ಜಿದಾರರಿಂದ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ಕೆರೆಯ ಬಫರ್‌ಝೋನ್‌ನಲ್ಲಿ ಕಾನೂನು ಬಾಹಿರವಾಗಿ ತಾತ್ಕಾಲಿಕವಾಗಿ ನಿರ್ಮಾಣವಾಗಲಿವೆ. ಇದಕ್ಕೆ ಅವರ ಆಕ್ಷೇಪಣೆ ಇದೆ ಎಂದು ಪೀಠಕ್ಕೆ ತಿಳಿಸಿದರು.

ಸ್ಯಾಂಕಿ ಕೆರೆಯ ಬಫರ್‌ ಝೋನ್‌ಲ್ಲಿ ಈ ರೀತಿಯ ಕಾಯಕ್ರಮಗಳನ್ನು ಹಮ್ಮಿಕೊಳ್ಳುವುದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯಿದೆಗೆ ತದ್ವಿರುದ್ಧ. ಅಲ್ಲದೆ, ಈ ಕಾರ್ಯಕ್ರಮಕ್ಕೆ ವೇದಿಕೆ ಸೇರಿದಂತೆ ತಾತ್ಕಾಲಿಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಿಂದ ಕೆರೆಯಲ್ಲಿನ ಹಕ್ಕಿಗಳಿಗೆ ತೀವ್ರ ತರದ ತೊಂದರೆಯಾಗುತ್ತದೆ ಎಂದು ಅವರು ಪೀಠಕ್ಕೆ ವಿವರಿಸಿದರು.

 

 

 

- Advertisement -  - Advertisement - 
Share This Article
error: Content is protected !!
";