ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬುದ್ದನನ್ನು ಭೂಮಿಯಲ್ಲಿ
ಹೂಳಲಾಗಿಲ್ಲ
ಭೂಮಿಯಲ್ಲಿ ಬಿತ್ತಲಾಗಿದೆ
ಸಂಕ್ರಾಂತಿಯ ಸುಗ್ಗಿಗೆ ಮೊಳಕೆಯಾಗಿ ಬರುತ್ತಾರೆ
ಬಸವಣ್ಣನನ್ನು ಭೂಮಿಯಲ್ಲಿ ಹೂಳಲಾಗಿಲ್ಲ
ಭೂಮಿಯಲ್ಲಿ ಬಿತ್ತಲಾಗಿದೆ
ಸಂಕ್ರಾಂತಿಯ ಸುಗ್ಗಿಗೆ
ಮೊಗ್ಗಾಗಿ ಬರುತ್ತಾರೆ
ಅಂಬೇಡ್ಕರ್ ರನ್ನು
ಭೂಮಿಯಲ್ಲಿ ಹೂಳಲಾಗಿಲ್ಲ
ಭೂಮಿಯಲ್ಲಿ ಬಿತ್ತಲಾಗಿದೆ
ಸಂಕ್ರಾಂತಿಯ ಸುಗ್ಗಿಗೆ
ಹೂವಾಗಿ ಅರಳಿ ಗಮಗಮಿಸುತ್ತಾರೆ
ಸಾವಿತ್ರಿ ಜ್ಯೋತಿಬಾಪುಲೆಯರನ್ನು
ಭೂಮಿಯಲ್ಲಿ ಹೂತಿಲ್ಲ
ಭೂಮಿಯಲ್ಲಿ ಬಿತ್ತಲಾಗಿದೆ
ಸಂಕ್ರಾಂತಿಯ ಸುಗ್ಗಿಗೆ
ಕಾಯಾಗಿ ಕಾಣುತ್ತಾರೆ
ನಾರಾಯಣ ಗುರುವನ್ನು
ಭೂಮಿಯಲ್ಲಿ ಹೂತಿಲ್ಲ
ಭೂಮಿಯಲ್ಲಿ ಬಿತ್ತಲಾಗಿದೆ
ಸಂಕ್ರಾಂತಿಯ ಸುಗ್ಗಿಗೆ
ಹಣ್ಣಾಗಿ ಹರಸುತ್ತಾರೆ
ಕನಕದಾಸರನ್ನು ಭೂಮಿಯಲ್ಲಿ ಹೂಳಲಾಗಿಲ್ಲ
ಭೂಮಿಯಲ್ಲಿ ಬಿತ್ತಲಾಗಿದೆ
ಸಂಕ್ರಾಂತಿಯ ಸುಗ್ಗಿಗೆ
ಎಳ್ಳು ಬೆಲ್ಲವಾಗಿ ಸಿಹಿ ಹಂಚುತ್ತಾರೆ
ಕೆಂಪು ಕಪ್ಪು ಕರಿ ಮರಳು ಎರೆಮಣ್ಣಿನ ಹೊಲದಲ್ಲಿ
ಕಾಡಲ್ಲಿ ಕಣಿವೆಯಲ್ಲಿ
ಬಿಟ್ಟ ಗುಡ್ಡ ಮರುಭೂಮಿಯಲ್ಲಿ
ಮನಮನದಲ್ಲಿ
ಬಡವರ ಗುಡಿಸಲಲ್ಲಿ
ಸುಗ್ಗಿಯ ಸಂಭ್ರಮದ
ನಗುತರಿಸುತ್ತಾರೆ
ನಗುತ್ತಾರೆ ನಗಿಸುತ್ತಾರೆ
ನಾವು ನೀವು ಕಾಯಬೇಕು
ಕನವರಿಸಬೇಕು
ಕವಿತೆ-ಡಾ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ,
ಕನ್ನಡ ಉಪನ್ಯಾಸಕರು.