ವಿಮಾನಕ್ಕೆ ಟೆಂಪೋ ಟ್ರಾವೆಲರ್ ಡಿಕ್ಕಿ

News Desk

ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):
ಟೆಂಪೋ ಟ್ರಾವೆಲರ್ ನಿಂತಿದ್ದ ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದು
, ಭಾರೀ ಅನಾಹುತ ತಪ್ಪಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್​ 19 ಶನಿವಾರ ಮಧ್ಯಾಹ್ನ 12.15ರ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಇಂಜಿನ್ ಸಮಸ್ಯೆ ಇದ್ದ ಇಂಡಿಗೋ A320 ವಿಮಾನವನ್ನು ಪಾರ್ಕಿಂಗ್ ಬೇ 71 ಆಲ್ಫಾ ಬಳಿಯ ಏರ್​ ಸೈಡ್​ನಲ್ಲಿ ನಿಲ್ಲಿಸಿದ್ದ ವೇಳೆ ಟೆಂಪೋ ಟ್ರಾವಲರ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ.

ಟೆಂಪೋ ಟ್ರಾವೆಲರ್ ಚಾಲಕ ನಿದ್ದೆಯ ಮಂಪರಿನಲ್ಲಿದ್ದು, ಅರವಿಗೆ ಬಾರದೆ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದಾನೆ. ವಿಮಾನದ ಕೆಳ ಭಾಗಕ್ಕೆ ಡಿಕ್ಕಿ ಹೊಡೆದ ನಂತರ ಎಚ್ಚೆತ್ತುಕೊಂಡಿದ್ದಾನೆ ಎಂದು ಏರ್​ಪೋರ್ಟ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಏರ್ ಸಿಬ್ಬಂದಿಯನ್ನು ಅವರ ಕಚೇರಿಗೆ ಡ್ರಾಪ್ ಮತ್ತು ಪಿಕ್ಅಪ್ ಮಾಡಲು ಟೆಂಪೋ ಟ್ರಾವೆಲರ್ ಬಳಕೆ ಮಾಡಲಾಗುತ್ತದೆ. ಘಟನೆ ಸಂದರ್ಭದಲ್ಲಿ ಟೆಂಪೋ ಟ್ರಾವೆಲರ್​ನಲ್ಲಿ ಯಾರೂ ಇರಲಿಲ್ಲ. ಘಟನೆ ಸಂಬಂಧ ಹೆಚ್ಚಿನ ತನಿಖೆ ಆರಂಭವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ ಎನ್ನಲಾಗಿದೆ.

 

 

Share This Article
error: Content is protected !!
";