ಡಾ: ಕಸ್ತೂರಿ ರಂಗನ್ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟ ಆಗಿದೆ:ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ: ಕಸ್ತೂರಿ ರಂಗನ್ ಅವರ ನಿಧನದಿಂದ ದೇಶಕ್ಕೆ ಅದರಲ್ಲೂ ವಿಜ್ಞಾನ ಕ್ಷೇತ್ರಕ್ಕೆ  ತುಂಬಲಾರದ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು  ಇಂದು ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ: ಕೆ ಕಸ್ತೂರಿ ರಂಗನ್ ರವರ ಪಾರ್ಥಿವ ಶರೀರಕ್ಕೆ  ಅಂತಿಮ ಗೌರವವನ್ನು ಸಲ್ಲಿಸಿದ ನಂತರ  ಮಾಧ್ಯಮದವರೊಂದಿಗೆ ಮಾತನಾಡಿದರು.

ಅವರು ದೇಶ ಕಂಡಂತ ಹೆಸರಾಂತ ವಿಜ್ಞಾನಿ.ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ದೀರ್ಘ ಕಾಲ ಇಸ್ರೋ ಅಧ್ಯಕ್ಷರಾಗಿ ದ್ದವರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಅವರನ್ನು ನಾವು ಮರೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡ ಮಾಡುವ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ  ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಎಂದರು.

ಪರಿಸರ ಕ್ಷೇತ್ರಕ್ಕೆ ಹಾಗೂ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾದುದು. ಅವರನ್ನು ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

 ಅನಿವಾರ್ಯವಾದಾಗ ಮಾತ್ರ ಯುದ್ಧಮಾಡಬೇಕು-
ಯುದ್ಧ ಬೇಡ ಎಂಬ ಮುಖ್ಯಮಂತ್ರಿಗಳ ಹೇಳಿಕೆಯ ಬಗ್ಗೆ ಚರ್ಚೆಗಳಾಗುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಮುಖ್ಯಮಂತ್ರಿಗಳು ಯುದ್ಧ ಅನಿವಾರ್ಯವಾದಾಗ ಮಾತ್ರ ಮಾಡಬೇಕು. ಯುದ್ಧದಿಂದ ಪರಿಹಾರವಾಗಲು ಸಾಧ್ಯವಿಲ್ಲ. ಅನಿವಾರ್ಯವಾದಾಗ ಮಾತ್ರ ಮಾಡಬೇಕು.

ಕೇಂದ್ರ ಸರ್ಕಾರದ  ಭದ್ರತಾ ವ್ಯವಸ್ಥೆಯ ವೈಫಲ್ಯ ಇದೆ ಎಂದು ಹೇಳಿದ್ದೇನೆ. 28 ಜನ ಪ್ರವಾಸಿಗರು ಉಗ್ರರ ದಾಳಿಯಲ್ಲಿ ಅಸುನೀಗಿದ್ದಾರೆ. ಹಿಂದೆ ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಮೃತಪಟ್ಟಿದ್ದರು. ಕೇಂದ್ರ ಸರ್ಕಾರ ಭದ್ರತೆಯನ್ನು ಸರಿಯಾದ ರೀತಿಯಲ್ಲಿ ಕೊಟ್ಟಿರಲಿಲ್ಲ. ತಕ್ಷಣಕ್ಕೆ ಯುದ್ಧ ಬೇಡ ಆದರೆ ಯುದ್ಧ ಮಾಡಲೇಬಾರದು ಎಂದೇನಿಲ್ಲ ಎಂದರು.

ಸಿದ್ದರಾಮಯ್ಯ ಅವರು  ಓಲೈಕೆ ರಾಜಕಾರಣ ಮಾಡುತ್ತಾರೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಸಿಎಂ ಬಿಜೆಪಿ ಹೇಳುವುದೆಲ್ಲ ಸರಿಯಲ್ಲ ಎಂದರು.

 

Share This Article
error: Content is protected !!
";