ಆಡು ಮಲ್ಲೇಶ್ವರದ ದಕ್ಷಿಣಕ್ಕೊಂದು ಪಾಂಡವರ ಮಠವೂ ಇದೆ!!

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-53
ಆಡು ಮಲ್ಲೇಶ್ವರದಿಂದ ದಕ್ಷಿಣಕ್ಕೆ ನಡೆದು, ಬಗ್ಗಿದ ಬಂಡೆಯ ಮುಂದಿನಿಂದ, ಬಹು ದೂರದ ಚಾರಣ ಪಾಂಡವರ ಮಠಕ್ಕೆ. ಈ ಭಾಗದಲ್ಲಿ ಹೆಚ್ಚಾಗಿ ಗುಡ್ಡಗಳು ಎದುರಾಗುವುದಿಲ್ಲ. ದಟ್ಟವಾಗಿ ಬೆಳೆದು ನಿಂತ, ಬಯಲ ಕಾಡೊಳಗೇ ಸಾಗುವ ಹೆಜ್ಜೆಗಳು.

ಪಾಂಡವರ ಮಠವೆಂದು ಗುರುತಿಸಿಕೊಳ್ಳುವ,ಈ ದಟ್ಟ ಅಡವಿಯೊಳಗೆ, ನೆಲದಿಂದ ಮೇಲಕ್ಕೆ ಹೊದಿಸಿದ, ಏಕ ಹಾಸು ಬಂಡೆಗೆ ಹೊಂದಿಕೊಂಡಿರುವ ಗವಿಯೊಂದಿದೆ. ಒಳಗೆ ಅಲ್ಲಲ್ಲಿ ಕಾಣುವ ಶಿಥಿಲ ಕಟ್ಟಡದಲ್ಲಿ,ಕಾಡುಪ್ರಾಣಿಗಳ ಇರುವಿಕೆಯ ಗುರುತಾಗಿ, ಅವುಗಳ ಬೆವರಿನ ಸೊಡರು ಮೂಗಿಗೆ ಎಡತಾಕುತ್ತದೆ. ಗವಿ ಮುಂಭಾಗದಲ್ಲಿ, ಸೂರ್ಯ, ಚಂದ್ರ, ಹಾಗೂ ಲಿಂಗದ ರೇಖಾ ಕೆತ್ತನೆಯಲ್ಲಿ, ನಿಲ್ಲಿಸಿರುವ ಲಿಂಗಮುದ್ರೆಯ ಕಲ್ಲೊಂದಿದೆ.ಪಾಂಡವರ ಮಠಕ್ಕೆ ಚಾರಣವೆಂದು ತೀರ್ಮಾನವಾದಾಗ, ಬಹಳ ಕುತೂಹಲದಿಂದ ಹೋದೆ.

ಅಲ್ಲಿ ನಾನಂದುಕೊಂಡಂತಹ, ಯಾವ ಕಲ್ಪನೆಯ ಕುರುಹುಗಳು ಕಾಣ ಸಿಗಲಿಲ್ಲ.ಆ ಸ್ಥಳಕ್ಕೆ ಪಾಂಡವರ ಮಠವೆಂದು, ಯಾರು ಹೆಸರಿಸಿದರೋ ಏನೋ ತಿಳಿಯದ ವಿಚಾರ.ಉತ್ಕನನದ ವಿಚಾರವಗಿಯೂ,ಅಷ್ಟಾಗಿ ಕಂಡು ಬರುವುದಿಲ್ಲ. ಅಲ್ಲಿನ ದೂರದ ಎಡ ಬಲಕ್ಕೆ ಎರಡು ಗುಡ್ಡಗಳಲ್ಲಿ,ಮಳೆರಾಯನ ನೆತ್ತಿ,ಹಾಗೂ ಹಣತೆ ಕಲ್ಲುಗಳೆಂದು ಕರೆಸಿಕೊಳ್ಳುವ ಸ್ಥಳಗಳಿವೆ. ಮಳೆಗಾಲದಲ್ಲಿ, ಮೇಲೆ ಸಾಗುವ ಮಳೆ ಮೋಡಗಳನ್ನ ತಡೆದು, ಮಳೆ ತರಿಸುವ ಎತ್ತರದ ಗುಡ್ಡವೆಂದು,ಅದನ್ನು ಮಳೆರಾಯನ ನೆತ್ತಿಯಂತಲೂ,ದೂರದಿಂದ ಹಣತೆಯಾಕಾರವಾಗಿ ಕಾಣುವ ಬೃಹತ್ ಬಂಡೆಗಲ್ಲನ್ನು ಹಣತೆ ಕಲ್ಲಂತಲೂ ಕರೆಯುತ್ತಾರೆ.

ಈ ಮೂರು ಸ್ಥಳಗಳನ್ನು ಒಂದೇ ಚಾರಣದಲ್ಲಿ ನೋಡಲಾಗುವುದಿಲ್ಲ. ಪ್ರತ್ಯೇಕವಾಗಿಯೇ ಸಾಗಬೇಕು. ಇಲ್ಲಿಂದ ಮುಂದಕ್ಕೆ ಕಾಡಿನ ಒಂದು ಎತ್ತರದ ಏಕಶಿಲಾ ಬಂಡೆಗೆ, ದೊಡ್ಡ ಗಾತ್ರದಲ್ಲಿ ಆಂಜನೇಯನ ಉಬ್ಬು ಶಿಲ್ಪವನ್ನ ಕೆತ್ತಿಸಿ ಪೂಜಿಸಿದ್ದಾರೆ.ಇದು ಸಹ, ಯಾರಿಂದ ಹೇಗಾಯಿತು?

ಇದರ ಕಾಲ,ಮಾನಗಳು ಸಿಗುವುದಿಲ್ಲ. ಬಯಲಲ್ಲಿ ಕೆತ್ತಿಸಿರುವುದರಿಂದ,ಬಿಸಿಲು, ಗಾಳಿ,ಮಳೆಗೆ ಸಿಲುಕಿದೆ.ಕೈ ಮುಗಿಯುವ ಭಕ್ತರು,ಆ ಕಲ್ಲಿನ ಮೂರ್ತಿಗೆ ಎಣ್ಣೆ, ಬಣ್ಣಗಳ ಮುತುವರ್ಜಿ ವಹಿಸಿದ್ದಾರೆ. ಹಾಗೆಯೇ ಕಾಡಿನಲ್ಲಿ ಮುಂದುವರೆದರೆ, ದೊಡ್ಡಣ್ಣನ ಕೆರೆ, ಕುಕ್ಕಾಡದಮ್ಮನ ಗುಡಿ ಸಿಗುತ್ತವೆ.

ಅಂದು ನಾ ಕಂಡು ಕೇಳಿದಂತೆ, ಅಗಲಕ್ಕೂ ಹಾಗು ಎತ್ತರಕ್ಕೂ,ಬೆಳೆದಿದ್ದ ಹುತ್ತಕ್ಕೆ ಇಲ್ಲಿ ಪೂಜೆ ಸಲ್ಲುತ್ತಿತ್ತು.ಈಗ ಭಕ್ತ ಗಣ ಜಾಸ್ತಿಯಾಗಿ,ಗುಡಿ ಕಟ್ಟಿ ನೆರಳು ಮಾಡಿದ್ದಾರೆ.ಇಲ್ಲಿ ಹರಕೆಯ ಪರುವುಗಳಾಗಿ, ಬಾಡೂಟಗಳು ಯತೇಚ್ಚವಾಗಿ ನಡೆಯುತ್ತಿರುತ್ತವೆ. ಜೋಗಿಮಟ್ಟಿ ಅಭಯಾರಣ್ಯದಲ್ಲಿ,ಅತಿ ಹೆಚ್ಚಾಗಿ ಕಾಡು ಪ್ರಾಣಿಗಳು ಕಂಡುಬರುವ ಪ್ರದೇಶವಿದು.

ಗುಡಿಯ ಹಿಂಭಾಗದ ದೊಡ್ಡಣ್ಣನ ಕೆರೆಯೇ,ಪ್ರಾಣಿಗಳಿಗೆ ಜಲ ದಾಹದ ಚಿಲುಮೆ. ಆಡುಮಲ್ಲೇಶ್ವರದಿಂದ ಜೋಗಿ ಗುಡ್ಡಕ್ಕೆ ಬರುವ ಮತ್ತೊಂದು ದಾರಿಯಾಗಿಯೂ ಈ ಭಾಗವನ್ನ ಬಳಸಬಹುದು.ಬಂಗ್ಲೆಯಿಂದ ತುಸು ಹಿಂದೆ ದಕ್ಷಿಣಕ್ಕೆ, ಎತ್ತರದ ಗುಡ್ಡದ ಮೇಲೆ ಜೋಗಿ ಸ್ವಾಮಿಯ ಸಮಾಧಿಯಿದೆ.

ಇದೇ ಜೋಗಿಮಟ್ಟಿಯ ಕೇಂದ್ರ ಸ್ಥಳವೂ ಹೌದು.ಶಿಥಿಲವಾಗಿದ್ದ ಗದ್ದುಗೆ ಸ್ಥಳವನ್ನ ಕಟ್ಟಡವಾಗಿಸಿ, ಮೇಲಿಂದ ಕೆಳಕ್ಕೆ ಬಂಗ್ಲೆಯ ರಸ್ತೆಯವರೆಗೂ,ದಪ್ಪ ಚಪ್ಪಡಿಗಳನ್ನ ಗುಡ್ಡಕ್ಕೆ ಹೊದಿಸಿ ಮೆಟ್ಟಿಲಾಗಿಸಿದ್ದಾರೆ. ಜೋಗಿ ಗುಡ್ಡದ ತುದಿಗೇರಲು  ಚಾರಣಿಗರಿಗಾಗಲೀ, ಪ್ರವಾಸಿಗರಿಗಾಗಲಿ, ಬಹಳಷ್ಟು ಅನುಕೂಲಗಳಿವೆ.  ತಂಗುವವರಿಗೂ ಬಂಗ್ಲೆಯಲ್ಲಿ,ಎಲ್ಲಾ ರೀತಿಯ ವ್ಯವಸ್ಥೆಯಿದೆ.

ಅರಣ್ಯ ಇಲಾಖೆಯಿಂದ ಒಪ್ಪಿಗೆಯ ಪತ್ರವಿರಬೇಕು. ಸಾಮಾನ್ಯರಿಗೆ ಇದು ಎಟಕುವುದಿಲ್ಲ. ಅಧಿಕಾರಿಗಳು, ರಾಜಕೀಯದವರ ಸೇವೆಗೆ, ಈ ಬಂಗ್ಲೆ ಸದಾ ಸಿದ್ಧವಾಗಿರುತ್ತದೆ.ಜೋಗಿ ಗುಡ್ಡದ ಮೇಲೆ ಕಬ್ಬಿಣದ ಆಂಗ್ಲರ್ ಗಳಿಂದ ನಿರ್ಮಿಸಿರುವ,ಹತ್ತು ಮೀಟರ್ ಗಿಂತಲೂ ಎತ್ತರದ ಒಂದು ಗಾಳಿಗೋಪುರವಿದೆ.

ಸುತ್ತಲೂ ಎಂಟು ದಿಕ್ಕುಗಳಿಂದಲೂ ಕಣ್ಣಾಯಿಸಿ,ಸಮೃಧ್ಧ ಹಸಿರ ಸಿರಿಯ ದೃಶ್ಯ ಕಾವ್ಯವನ್ನ ನೋಡುತ್ತಾ,ಸ್ವರ್ಗ ಸುಖವನ್ನು ಅನುಭವಿಸಬಹುದು. ದುರ್ಗಕ್ಕೆ ಬರುವ ಪ್ರವಾಸಿಗರಿಗೆ,ಚಂದ್ರವಳ್ಳಿ, ಏಳುಸುತ್ತಿನ ಕೋಟೆ, ತಿಮ್ಮಣ್ಣನಾಯಕನ ಕೆರೆಬಯಲು (ಅಭಿವೃದ್ಧಿಯಾಗುತ್ತಿದೆ) ಆಡು ಮಲ್ಲೇಶ್ವರದ ಮೃಗಾಲಯ,ಇವುಗಳ ಜೊತೆ ಜೊತೆಗೆ,ನಾಡಿನ ಪ್ರಸಿದ್ಧಿ ಚಾರಣಗಳಲ್ಲೊಂದಾಗಿ ಅಬಿವೃಧ್ಧಿ ಹೊಂದುತ್ತಿರುವ ಸ್ಥಳವೆಂದರೆ ಅದು ಜೋಗಿ ಗುಡ್ಡ,ಇತ್ತೀಚಿಗೆ ಈ ಭಾಗಕ್ಕಂತೂ ಪ್ರವಾಸಿಗರ ಸಂಖ್ಯೆ ತುಂಬಾನೇ ಹೆಚ್ಚಿದೆ.

ಇವೆಲ್ಲವೂ ಮನಸ್ಸಿಗೆ ಮುದ ಕೊಡುವ ಸ್ಥಳಗಳೇ. ವಿಪರ್ಯಾಸವೆಂದರೆ, ದುರ್ಗದಲ್ಲಿ ಹುಟ್ಟಿ ಬೆಳೆದ ಬಹುತೇಕರಿಗೆ,ಇವುಗಳ ಹೆಸರು ಪರಿಚಯ, ಯಾವುವೂ ತಿಳಿದಿರುವುದಿಲ್ಲ.ಇದಕ್ಕೆ ಉದಾಹರಣೆ,ನನ್ನ ಕುಟುಂಬದ ಒಂದು ಘಟನೆಯನ್ನೇ ನೆನೆಪಿಸುತ್ತೇನೆ.

ನನ್ನವ್ವ ಅಪ್ಪನಿಗೆ ಇಲ್ಲದ ಶೀತ ಸಮಸ್ಯೆ,ಮಕ್ಕಳಾದ ನಮ್ಮೆಲ್ಲರಿಗೂ ಕಾಡುತ್ತಿರುತ್ತದೆ.ಇದಕ್ಕೆ ನನ್ನಪ್ಪ ಕೊಟ್ಟ ಉತ್ತರ, ನಿಮ್ಮಜ್ಜನಿಗೆ ಈ ತರಹದ ಸಮಸ್ಯೆ ಇತ್ತು ಅಂತ.ನನ್ನ ಬಹುತೇಕ ಗೆಳೆಯರಿಗೆ ಗೊತ್ತಿದೆ,ಈ ಸಮಸ್ಯೆಯಿಂದಲೇ ನಾನು, ಎರಡೆರಡು ಕರವಸ್ತ್ರಗಳನ್ನ ಜೊತೆಗಿಟ್ಟುಕೊಂಡೇ ಚಾರಣಗಳಲ್ಲಿರುತ್ತೇನೆ.

ಒಮ್ಮೆ ನನ್ನ ಕಿರಿಯ ಸಹೋದರನ ಮನೆಗೆ ಕಾರ್ಯ ನಿಮಿತ್ತ ಹೋಗಿದ್ದೆ.ಈ ಶೀತಬಾದೆ ನಮ್ಮೆಲ್ಲರಿಗಿಂತಲೂ ಅವನಿಗೇ ಹೆಚ್ಚು.ಬೆಳಿಗ್ಗೆ ಏಳುವುದು ಒಂಬತ್ತಕ್ಕೆ,ತಿಂಡಿ ಹನ್ನೊಂದಕ್ಕೆ,ಮಧ್ಯಾಹ್ನದ ಊಟ ಮೂರರ ನಂತರವೇ, ರಾತ್ರಿ ಹತ್ತಾದರೂ ಆಯ್ತು, ಮಧ್ಯರಾತ್ರಿಯಾದರೂ ಸರಿಯೇ,ಆಹಾರ ಕ್ರಮದ ಪ್ರಕಾರ,ಬೆಳಿಗ್ಗೆ ಒಂಬತ್ತರ ಮೇಲೆ ಉಂಡವನು ಹೊರ ರೋಗಿಯೇ,ಮಧ್ಯರಾತ್ರಿ ಉಂಡವನಂತೂ ಮಲಗುವುದು ಖಾತ್ರಿಯೇ,ಅದರಲ್ಲೂ ಮನೆ ಊಟಕ್ಕಿಂತ,ಹೊರಗಿನ ಊಟಗಳಿಗೇ ಆದ್ಯತೆ.

ಆರೋಗ್ಯ ಹದಗೆಡುವುದಕ್ಕೆಇನ್ನೇನು ಬೇಕು ಈ ಜೀವಕ್ಕೆ.ಆ ದಿನ ಶೀತ,ಕೆಮ್ಮು ಹೆಚ್ಚಾಗಿ,ಅವನ ಕಣ್ಗಳೆಲ್ಲಾ ಕೆಂಪಾಗಿದ್ದುದು ಕಂಡೆ.ಎತ್ತಾಡಿಸಿದ ಮಗು ಅದು,ಯಾಕೋ ನನ್ನ ಮನಸ್ಸಿಗೆ ನೋವಾದಂತಾಯ್ತು. ಮಾತನಾಡುತ್ತಾ ವಿಹಾರದ ಬಗ್ಗೆ,ಅಹಾರ ಕ್ರಮದ ಬಗ್ಗೆ ತಿಳಿಸಿದೆ.

ಅದಕ್ಕವನ ಉತ್ತರ. ಅಣ್ಣಾ,ದುರ್ಗದ ಒಟ್ಟು ಜನಸಂಖ್ಯೆ ಎಷ್ಟು ಅಂದ, ಉತ್ತರಿಸಿದೆ,ದುರ್ಗದ ಎಲ್ಲಾ ಭಾಗಗಳಿಂದ ಎಷ್ಟು ಜನ ವಿಹಾರಿಗಳಿದಿರೀ ಅಂದ, ಅದಕ್ಕೂ ಉತ್ತರಿಸಿದೆ, ಅದಕ್ಕವನು,ದುರ್ಗದ ಜನಸಂಖ್ಯೆಯಲ್ಲಿ ನಿಮ್ಮ ವಿಹಾರಿಗಳನ್ನ ಕಳೆದು, ಉಳಿದವರು ಬದುಕಿದ್ದಾರೋ,ಇಲ್ಲವೋ ಹೇಳು ಅಂದ.ನಾನು ಸಹ ಮುಂದಕ್ಕೆ ಮಾತನಾಡದೆ ಸುಮ್ಮನಾದೆ.ಒಂದು ಗಾದೆ ಮಾತಿದೆ”ಮೂರು ಬಿಟ್ಟವರು ದೇವರಿಗಿಂತ ದೊಡ್ಡವರಂತೆ” ಬಂದ ಕೆಲಸ ನೋಡ್ಕೊಂಡು, ಸುಮ್ಮನೆ ಹೋಗಬಹುದಾಗಿತ್ತು. ಪ್ರವಚನ ಮಾಡಿದ್ದು ತಪ್ಪಾಯಿತೇನೋ ಅನ್ನಿಸಿತು.

ಆದರೂ ಈ ಲೇಖನ ಓದು ವವರಿಗೆ ನನ್ನದೊಂದು ಕಿವಿ ಮಾತು.ಕಾಲಚಕ್ರದ ಕರೆಗೆ ಎಲ್ಲರೂ ಒಂದು ದಿನ ಹೋಗಲೇಬೇಕು,ಹಾಗಂತ ಹೇಗೋ ಬದುಕಿ ಹೋಗುವುದಲ್ಲ,ದೈನಂದಿನ ಚಟುವಟಿಕೆಗಳು,ಆಹಾರ ಕ್ರಮಗಳ ಬಗ್ಗೆ ಒತ್ತು ಕೊಡಿ. ನೀವು ಆರೋಗ್ಯವಂತರಾಗಿಯೂ, ಎಪ್ಪತ್ತರ ಮೇಲೆ,ನಿಮ್ಮ ಕುಟುಂಬವೇ ನಿಮ್ಮನ್ನ ತಿರಸ್ಕರಿಸುತ್ತಾ ಬರುತ್ತದೆ. ಎಂಬತ್ತಕ್ಕೆ ನೀವು ಪ್ರೀತಿಸಿದ ನೆಲವೂ ನಿಮ್ಮನ್ನು ತಿರಸ್ಕರಿಸುತ್ತದೆ.ಆಹಾರ, ಚಟುವಟಿಕೆಗಳು, ಸರಿಯಾಗಿಟ್ಟುಕೊಂಡು ಆಯುಷ್ಯವಿದ್ದರೆ,ನಾವುಗಳು ಇವೆರಡನ್ನೂ ಬದಿಗಿರಿಸಿ  ಬದುಕಬಹುದು ಅಲ್ವಾ. ಊಟದ ವಿಚಾರದಲ್ಲಿ ದಾರ್ಶನಿಕರ ಅದ್ಭುತ ಸಾಲುಗಳಿವೆ.

ಒಂದೊತ್ತು ಉಂಡವನು ಯೋಗಿ,ಎರಡೊತ್ತು ಉಂಡವನು ಭೋಗಿ, ಮೂರೊತ್ತು ಉಂಡವನು ರೋಗಿ,ನಾಲ್ಕೊತ್ತು ಉಂಡವನನ್ನ ಎತ್ಕೊಂಡು ಹೋಗಿ.ಯಾವುದು ಬೇಕು? ಆಯ್ಕೆ ನಿಮ್ಮದೇ.

ಮುಂದುವರೆಯುವುದು……
 ಲೇಖನ:ಕುಮಾರ್ ಬಡಪ್ಪ, ಚಿತ್ರದುರ್ಗ.

 

 

- Advertisement -  - Advertisement - 
Share This Article
error: Content is protected !!
";