ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮೂರನೇ ಬಾರಿಗೆ ವಿವಿ ಸಾಗರ ಭರ್ತಿಯಾಗಿ ಕೋಡಿ ಹರಿಯುವ ಸಂಭ್ರಮ ಸಡಗರ ಒಂದೆಡೆಯಾದರೆ ವಿವಿ ಸಾಗರ ಜಲಾಶಯಗಳ ಕಾಲುವೆಗಳ ಸ್ವಚ್ಛತೆ ಮಾದಿರುವುದು ಸೋಜಿಗ ತಂದಿದೆ.
ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಸಮೀಪ ಇರುವ ವಿವಿ ಸಾಗರ ಡ್ಯಾಂನ ಮುಖ್ಯ ಕಾಲುವೆಯಿಂದ, ಕೋಡಿ ಹರಿಯುವ ಪ್ರದೇಶದಿಂದ ಹಿಡಿದು ಕಾತ್ರೀಕೇನಹಳ್ಳಿಯ ಬ್ಯಾರೇಜ್ ತನಕ ಹಾಗೂ ಅಲ್ಲಿಂದ ವಿಭಜನೆಯಾಗುವ ಎಡ ಮತ್ತು ಬಲ ದಂಡೆ ಕಾಲುವೆಗಳು ಸೇರಿದಂತೆ ವೇದಾವತಿ ನದಿ ಪ್ರದೇಶವನ್ನು ನೀರಾವರಿ ಇಲಾಖೆ ಅಧಿಕಾರಿಗಳು ಸ್ವಚ್ಛ ಮಾಡಿಸದೇ ಇರುವುದರಿಂದ ಸಾಕಷ್ಟು ಅನಾಹುತ ಸೃಷ್ಠಿಯಾಗುವ ಸಂಭವವಿದೆ.
ಎಡ ಮತ್ತು ಬಲ ದಂಡೆ ಕಾಲುವೆಗಳಲ್ಲಿ ರಾಶಿ ರಾಶಿ ಘನ ತ್ಯಾಜ್ಯ ಸಂಗ್ರಹವಾಗಿದ್ದರಿಂದ ಸರಾಗವಾಗಿ ನೀರು ಮುಂದಕ್ಕೆ ಹರಿಯದೆ ಸಿಕ್ಕ ಸಿಕ್ಕಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕಾಲುವೆಗಳು ಒಡೆದು ಹೋಗುವುದರ ಜೊತೆಯಲ್ಲಿ ಅವಾಂತರ ಸೃಷ್ಠಿಸುವ ಸಾಧ್ಯತೆ ಇದೆ.
ವಿವಿ ಜಲಾಶಯದ ಡ್ಯಾಂನಿಂದ 9.20 ಕಿ.ಮೀ ದೂರ ಇರುವ ಕಾತ್ರಿಕೇನಹಳ್ಳಿ ಮುಖ್ಯ ಕಾಲುವೆ ಸಮೀಪದಲ್ಲಿ ಸಾಕಷ್ಟು ಸಮಸ್ಯೆ ಇದೆ. ಇಲ್ಲಿಂದ ಎಡ ಮತ್ತು ಬಲ ಕಾಲುವೆಯಾಗಿ ವಿಭಜನೆಗೊಂಡು ನೀರು ಪೂರೈಕೆಯಾಗುತ್ತದೆ. ಈ ಭಾಗದಲ್ಲಿ ಸ್ವಲ್ಪವೂ ಸ್ವಚ್ಛ ಮಾಡಿಲ್ಲ. ಎಡ ಮತ್ತು ಬಲ ಕಾಲುವೆಗಳ ಎರಡು ಬದಿಯ ಅಕ್ಕಪಕ್ಕ ಸೇರಿದಂತೆ ವೇದಾವತಿ ನದಿ ತೀರದಲ್ಲಿ ಹೆಜ್ಜೆ ಹೆಜ್ಜೆಗೂ ಮುಳ್ಳಿನ ಗಿಡ, ಮರಗಳು ಬೆಳೆದು ನಿಂತಿವೆ. ಬ್ಯಾರೇಜ್ ಕೆಳಭಾಗದಲ್ಲಿ ಸಂಪೂರ್ಣ ಕಸ, ಕಡ್ಡಿ, ಮುಳ್ಳು ಕಂಟಿಯಿಂದ ತುಂಬಿ ಹೋಗಿದ್ದು ನೀರು ಮುಂದೆ ಸಾಗದಂತಾಗಿದೆ. ಇದರ ಜೊತೆಯಲ್ಲಿ ಕಾಲುವೆಗಳಿಗೆ ಜೋಡಿಸಿ ನಿರ್ಮಿಸಲಾಗಿದ್ದ ಕಲ್ಲುಗಳು, ಸೀಮೆಂಟ್ ಲೇಪನವೆಲ್ಲ ಶಿಥಿಲಗೊಂಡು ಉದುರಿರುವುದು, ಕಲ್ಲಿನ ರಿವಿಟ್‌ಮೆಂಟ್ ಕಿತ್ತು ಹೋಗಿರುವುದು, ಸಿಮೆಂಟ್ ಗಾರೆ ಹಾಳಾಗಿದ್ದರೂ ಯಾವುದೇ ದುರಸ್ತಿ ಕಾರ್ಯ ಮಾಡಿಸಿಲ್ಲ.
ವಿವಿ ಜಲಾಶಯದ ಕೋಡಿ ನೀರಿನ ಒಳ ಹರಿವು ಏರಿಕೆಯಾಗುವ ಸಾಧ್ಯತೆ ಇದ್ದು ಕೋಡಿ ಮೂಲಕ ನೀರು ಹರಿಯುತ್ತಿದೆ. ಈಗಾಗಲೇ ರೈತರು ನೀರು ಹರಿಸುವಂತೆ ಬೇಡಿಕೆ ಇಟ್ಟಿರುವುದರಿಂದ ಎಡ ಮತ್ತು ಬಲ ದಂಡೆ ಕಾಲುವೆಗಳಲ್ಲಿ ಕೋಡಿ ನೀರನ್ನು ಹರಿಸಬೇಕು.
ಎಡದಂಡೆ ಕಾಲುವೆ 48 ಕಿ.ಮೀ ಉದ್ದವಿದ್ದು ಐನಹಳ್ಳಿ ಎಂಬಲ್ಲಿಯವರೆಗೆ ನೀರು ಹರಿಸುತ್ತದೆ. ಬಲದಂಡೆ ಕಾಲುವೆ 46.41 ಕಿ.ಮೀ ಉದ್ದವಿದ್ದು, ಕುಂದಲಗೊರ ಎಂಬ ಹಳ್ಳಿಯವರೆಗೆ ನೀರು ಹರಿಯುತ್ತದೆ. ಈ ಎರಡೂ ಕಾಲುವೆಗಳು ಅಂದಾಜು 100ಕಿ.ಮೀ ಉದ್ದದಷ್ಟು ನೀರು ಹರಿಯಲಿದೆ.
ವಿವಿ ಸಾಗರ ಅಚ್ಚುಕಟ್ಟು ಪ್ರದೇಶದ ಸುಮಾರು 25 ಸಾವಿರ ಎಕರೆಯಷ್ಟು ಜಮೀನಿನಲ್ಲಿರುವ ಹೊಲ, ಗದ್ದೆ, ತೆಂಗು, ಅಡಿಕೆ, ಹಣ್ಣಿನ ತೋಟಗಳಿಗೆ ಬೇಸಿಗೆ ಹಂಗಾಮಿನ ನೀರನ್ನು ಹರಿಸಬೇಕಾಗಿದೆ. ಅಲ್ಲದೆ ರೈತರು ಅನಗತ್ಯವಾಗಿ ನೀರು ಪೋಲು ಮಾಡಕೂಡದು. ನೀರಿದೆ ಎಂದು ಹೊಲ ಗದ್ದೆ, ತೋಟಗಳಲ್ಲಿ ಎರಡು-ಮೂರು ಅಡಿಯಷ್ಟು ನೀರು ನಿಲ್ಲಿಸುವ ಕೆಲಸ ಕೈಬಿಡಬೇಕು. ಇದರಿಂದ ನೀರು ಪೋಲಾಗುತ್ತದೆ ಅಷ್ಟೇ. ಜಮೀನು, ತೋಟಗಳಿಗೇನು ಅನುಕೂಲ ಆಗುವುದಿಲ್ಲ. ಕಾಲುವೆಗಳಲ್ಲಿ ನೀರು ಹರಿಸುವ ಮುನ್ನ ಗಿಡ, ಮರ, ಮುಳ್ಳಿನ ಕಂಟಿ ಇತರೆ ಘನ ತ್ಯಾಜ್ಯ ತೆಗೆದು ಸ್ವಚ್ಛ ಮಾಡಬೇಕಿದೆ. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡಿದರೆ ಸಾಕಷ್ಟು ನೀರು ಪೋಲಾಗುವುದನ್ನ ತಡೆಯಬಹುದಾಗಿದೆ. ಅಲ್ಲದೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತ ಸೃಷ್ಠಿಸುವುದನ್ನ ತಪ್ಪಿಸಬಹುದಾಗಿದೆ.
ಕಾಲುವೆಗಳಲ್ಲಿ, ವೇದಾವತಿ ನದಿ ಪಾತ್ರದಲ್ಲಿ ಸಂಗ್ರಹವಾಗಿರುವ ರಾಶಿ ರಾಶಿ ತ್ಯಾಜ್ಯ, ಗಿಡ, ಕಂಟಿ, ಮುಳ್ಳಿನ ಮರ, ಸೀಮೆ ಜಾಲಿ ಮರ ಇತ್ಯಾದಿಗಳನ್ನ ಸ್ವಚ್ಥ ಮಾಡಿಸುವಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ರೈತರು ಹಾಗೂ ರೈತ ಮುಖಂಡ ಕಾತ್ರೀಕೇನಹಳ್ಳಿ ಮಂಜುನಾಥ್ ಮತ್ತಿತರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಲಾಶಯದ ಎಡ ಮತ್ತು ಬಲ ದಂಡೆ ಕಾಲುವೆಗಳ ಈಗಿನ ಸ್ಥಿತಿ ಗಮನಿಸಿದರೆ ಕಾಲುವೆಗಳಲ್ಲಿ ಬೊಗಸೆ ನೀರು ಮುಂದಕ್ಕೆ ಹೋಗುವುದು ದುಸ್ತರವಾಗಿದೆ. ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಮತ್ತು ಸದಸ್ಯರು ಸಲಹಾ ಸಮಿತಿ ಸಭೆಯಲ್ಲಿ ವೇದಾವತಿ ನದಿ ಪಾತ್ರ, ಎಡ ಮತ್ತು ಬಲ ದಂಡೆ ಕಾಲುವೆಗಳನ್ನು ಸ್ವಚ್ಛತೆ ಮಾಡುವಂತೆ ಸೂಚನೆ ನೀಡಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಗಮನ ನೀಡಿಲ್ಲ, ಅಷ್ಟೇ ಅಲ್ಲ ಜಿಲ್ಲಾಧಿಕಾರಿಗಳ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ.
ಶಿಥಿಲಗೊಂಡಿರುವ ಕಾಲುವೆಗಳ ಕುರಿತು, ಕಾಲುವೆಗಳಲ್ಲಿ ಗಿಡ, ಮರ ಬೆಳೆದಿರುವ ಬಗ್ಗೆ ಸಾಕಷ್ಟು ಪತ್ರಿಕೆಯಲ್ಲಿ ಬೆಳಕು ಚೆಲ್ಲಿದ್ದರೂ ಅಧಿಕಾರಿಗಳು ಮಾತ್ರ ಸ್ವಚ್ಛತೆಗೆ ಮುಂದಾಗಿಲ್ಲ. ಅದೂ ಅಲ್ಲದೆ ಕೆಲ ಪ್ರದೇಶಗಳಲ್ಲಿ ನೀವಾವರಿ ಇಲಾಖೆಗೆ ಸೇರಿದ ಜಾಗವನ್ನ ಒತ್ತುವರಿ ಮಾಡಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ.
ವೇದಾವತಿ ನದಿ ತೀರದ ಪ್ರದೇಶದಲ್ಲಿ, ನಗರದ ತಾಲ್ಲೂಕು ಕಛೇರಿ ಹಿಂಭಾಗ, ರೆಡ್ಡಿ ಹೋಟೆಲ್ ಹತ್ತಿರ, ಮಟನ್ ಮಾರ್ಕೇಟ್, ಆಜಾದ್ ನಗರ, ಸಿದ್ದನಾಯಕ ಸರ್ಕಲ್, ಬಬ್ಬೂರು ರಸ್ತೆ, ಗೋಪಾಲ ಪುರ, ಕಟುಕರ ಹಳ್ಳ, ಹನುಮಾನ್ ಶಾಮಿಲ್ ವರೆಗೆ ಸಾಕಷ್ಟು ಸಮಸ್ಯೆ ಇದೆ. ಇದಕ್ಕೆಲ್ಲ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ನೇರ ಹೊಣೆ ಹೊರಬೇಕಾಗುತ್ತದೆ.