ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಸಹಯೋಗದೊಂದಿಗೆ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾದೀಶರು, ಸದಸ್ಯ ಕಾರ್ಯದರ್ಶಿ ಬೋಲ್ ಪಂಡಿತ್ ಅವರು, ವಿದ್ಯಾರ್ಥಿಗಳು ತಮ್ಮ ತಮ್ಮ ಜೀವನದಲ್ಲಿ ಕಾನೂನು ಅರಿವು ತಿಳುವಳಿಕೆ ಬಹಳ ಮುಖ್ಯ. ಏಕೆಂದರೆ ವಿದ್ಯಾರ್ಥಿಗಳಿಗೆ ಅರಿವಿಲ್ಲದೆ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ಆದರೆ ಅದು ಅಪರಾಧ ಎಂದು ನಮಗೆ ತಿಳಿದಿರುವುದಿಲ್ಲ. ವಿದ್ಯಾರ್ಥಿಗಳು ಸಹಜವಾಗಿ 16 ನೇ ವಯಸ್ಸಿನಿಂದ 22 ನೇ ವಯಸ್ಸಿನ ವರೆಗೆ ಮೋಜಿಗಾಗಿ ದೂಮಪಾನ ಮದ್ಯಪಾನ ತಂಬಾಕು ಉತ್ಪನ್ನಗಳ ಸೇವನೆ ಮಾದಕವಸ್ತುಗಳ ಸೇವನೆ ಮಾಡುತ್ತಾರೆ. ಇದನ್ನು ಒಮ್ಮೆ ನೀವು ಅದರ ರುಚಿ ನೋಡಿ ಪಳಗಿದರೆ ಮತ್ತೆ ವಾಪಸ್ ಬರಲು ಸಾಧ್ಯವೇ ಇಲ್ಲ. ಇದರಿಂದ ನಿಮ್ಮ ಭವಿಷ್ಯ ಜೀವನ ಹಾಳಾಗುತ್ತದೆ.
ಜೊತೆಗೆ ಇದರಿಂದ ನೀವು ಅಪರಾಧಿಗಳಾಗಿ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದರೆ ಪೋಕ್ಸೋ ಕಾಯಿದೆಗೆ ಗುರಿಯಾಗಬೇಕಾಗುತ್ತದೆ. ಜೊತೆಗೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ತೊಂದರೆ ಕೊಟ್ಟರೆ ದೌರ್ಜನ್ಯ ಎಸಗಿದರೆ ಅವರು ಸಹ ಶಿಕ್ಷೆಗೆ ಗುರಿ ಯಾಗ ಬೇಕಾಗುತ್ತದೆ. ಹಿಗಾಗಿ ವಿದ್ಯಾರ್ಥಿಗಳಿಗೆ ಕಾನೂನು ತಿಳುವಳಿಕೆ ತುಂಬಾ ಅಗತ್ಯ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಮಧುಸೂದನ್ ಮಾತನಾಡಿ ವಿದ್ಯಾರ್ಥಿಗಳು ತುಂಬಾ ಅನಾವಶ್ಯಕವಾಗಿ ಮೊಬೈಲ್ ಪೋನ್ ಬಳಸುತ್ತಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುತ್ತದೆ. ಅದುದರಿಂದ ವಿದ್ಯಾರ್ಥಿಗಳು ಮೊಬೈಲ್ ಪೋನ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಕೃಷ್ಣಮೂರ್ತಿ ಮಾತನಾಡಿ ನಮ್ಮ ಸಂವಿಧಾನ ನಮ್ಮ ಕಾನೂನು ನಮ್ಮ ಹೆಮ್ಮೆ ಅಂಬೇಡ್ಕರ್ ರವರು ನಮಗೆ ಉತ್ತಮ ಸಂವಿಧಾನ ನೀಡಿದ್ದಾರೆ. ಇದರಿಂದ ತಳಮಟ್ಟದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಮಾನತೆ ಪಡೆಯಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ ಹೆಚ್ ಜಿ ವಿಜಯಕುಮಾರ್, ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಸಂತೋಷ ಮೂಡಲು ಕಾನೂನು ತಿಳುವಳಿಕೆ ತುಂಬಾ ಅಗತ್ಯ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಮಕ್ಕಳಲ್ಲಿ ಸಮಾನತೆ ಸಾಮಾನ್ಯ ತಿಳುವಳಿಕೆ ಮೂಡಿಸುವುದೆ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಜ್ಞಾನ ದೀಪಿಕಾ ಸಂಸ್ಥೆಯ ಮುಖ್ಯಸ್ಥ ಎಂ ಎಸ್ ಮಂಜುನಾಥ್, ಪ್ರಾಂಶುಪಾಲ ಎಂ ಸಿ ಮಂಜುನಾಥ್, ಗೌರಾ ರಾಮಮೂರ್ತಿ, ಕೃಷ್ಣ ಪ್ರಸಾದ್, ಪತ್ರಕರ್ತ ಶ್ರೀಕಾಂತ್, ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.