ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ 45,000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಕೊರೆಯುವ ಚಳಿ ಮತ್ತು ಅನಾರೋಗ್ಯದ ನಡುವೆಯೂ ನವೆಂಬರ್ 17ರಿಂದ ಆರಂಭವಾಗಿರುವ ಈ ಅಹೋರಾತ್ರಿ ಧರಣಿಯನ್ನು ಕಾರ್ಯಕರ್ತೆಯರು ತೀವ್ರಗೊಳಿಸಿದ್ದಾರೆ.
ಮಾಸಿಕ ಗೌರವಧನವನ್ನು 15,000ಕ್ಕೆ ಹೆಚ್ಚಿಸುವುದು ಹಾಗೂ ₹5 ಲಕ್ಷ ನಿವೃತ್ತಿ ಪರಿಹಾರ ನೀಡುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರೊಂದಿಗೆ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಸರ್ಕಾರದ ಮೌಖಿಕ ಭರವಸೆಗಳಿಗೆ ಕಾರ್ಯಕರ್ತೆಯರು ಸೊಪ್ಪು ಹಾಕಿಲ್ಲ. ಬೇಡಿಕೆಗಳ ಕುರಿತು ಸರ್ಕಾರದಿಂದ ಅಧಿಕೃತ ಲಿಖಿತ ಆದೇಶ ಪ್ರತಿ ಕೈ ಸೇರುವವರೆಗೂ ಫ್ರೀಡಂ ಪಾರ್ಕ್ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.




