ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಇಂದು ನಡೆದ ಮಂಡ್ಯ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯು ರಾಜಕೀಯ ಜಟಾಪಟಿ ಹಾಗೂ ಅಧಿಕಾರಿಗಳ ಮೇಲಿನ ಆಕ್ರೋಶಕ್ಕೆ ಸಾಕ್ಷಿಯಾಯಿತು. ವೇದಿಕೆಯ ಮೇಲಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಾಮಫಲಕವನ್ನು ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ತೆಗೆಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ನಾಮಫಲಕ ತೆರವಿಗೆ ಕಾರಣವೇನು?: ಮಂಡ್ಯ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳು ವೇದಿಕೆಯ ಟೇಬಲ್ ಮೇಲೆ ನಾಮಫಲಕವನ್ನು ಇರಿಸಿದ್ದರು. ಸಭೆಗೆ ಆಗಮಿಸಿದ ಶಾಸಕ ಕದಲೂರು ಉದಯ್ ಇದನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ಯಾರೋ ಕೆಲಸಕ್ಕೆ ಬಾರದವರ ನಾಮಫಲಕವನ್ನೆಲ್ಲಾ ಇಲ್ಲಿ ಏಕೆ ಇಟ್ಟಿದ್ದೀರಾ?" ಎಂದು ಏರುಧ್ವನಿಯಲ್ಲಿ ಗರಂ ಆದರು. ಶಾಸಕರ ಈ ಆಕ್ರೋಶಕ್ಕೆ ಬೆಚ್ಚಿದ ಅಧಿಕಾರಿಗಳು ತಕ್ಷಣವೇ ವೇದಿಕೆಯ ಮೇಲಿದ್ದ ಕುಮಾರಸ್ವಾಮಿ ಅವರ ನಾಮಫಲಕವನ್ನು ತೆರವುಗೊಳಿಸಿದರು.
ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಚಾಟಿ: ಇನ್ನು ಮಂಡ್ಯ ಮತ್ತು ರಾಮನಗರ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಳಂಬ ಮತ್ತು ಕಳಪೆ ಗುಣಮಟ್ಟದ ವಿಚಾರವಾಗಿ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕ್ರಿಮಿನಲ್ ಕೇಸ್ ಎಚ್ಚರಿಕೆ: ಮಂಡ್ಯ ಸಭೆಯಲ್ಲಿ ಹೆದ್ದಾರಿ ಕಾಮಗಾರಿಗಳ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದ ಶಾಸಕ ಗಣಿಗ ರವಿಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ನೇರ ಎಚ್ಚರಿಕೆ ನೀಡಿದರು.
ರಾಮನಗರದಲ್ಲೂ ಕ್ಲಾಸ್: ಇತ್ತ ರಾಮನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಸಿ ಬಾಲಕೃಷ್ಣ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರು ಕಾಮಗಾರಿಗಳ ನಿರ್ಲಕ್ಷ್ಯದ ಕುರಿತು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದರು.




