ಚಂದ್ರವಳ್ಳಿ ನ್ಯೂಸ್, ವಡ್ಡಗೆರೆ:
ಚಂದ್ರಮ್ಮನ ಆಚರಣೆ ಅಥವಾ ಬೆಳ್ದಿಂಗ್ಳಪ್ಪನ ಪೂಜೆಗೆ ಬನ್ನಿ...
ಬೆಳ್ದಿಂಗಳಪ್ಪನ ಪೂಜೆ - ಮದುಮಕ್ಕಳ ಚಂದ್ರಮಂಡಲ ದಿಬ್ಬಣ.
ಸ್ಥಳ : ವಡ್ಡಗೆರೆ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ
ದಿನಾಂಕ : 30-04-2026, ಗುರುವಾರ ಸಮಯ : 06-30 ಇಳಿಹೊತ್ತು. ಉದ್ಘಾಟನೆ : ಅಗ್ರಹಾರ ಕೃಷ್ಣಮೂರ್ತಿ, ಮಾಜಿ ಕಾರ್ಯದರ್ಶಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಅಧ್ಯಕ್ಷತೆ : ಮಲ್ಲಿಕಾ ಬಸವರಾಜು, ನಿಕಟಪೂರ್ವ ಅಧ್ಯಕ್ಷರು, ತುಮಕೂರು ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘ, ತುಮಕೂರು.
ಮದುಮಕ್ಕಳ ಚಂದ್ರಮಂಡಲ ದಿಬ್ಬಣದ ಉಪಸ್ಥಿತಿ :
ಡಾ. ಎ. ಎಸ್.ಪ್ರಭಾಕರ, ಅಧ್ಯಕ್ಷರು, ನಾಡೋಜ ಡಾ. ರಾಜ್ ಕುಮಾರ್ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವಿಶೇಷ ಅತಿಥಿ : ಡಾ.ಮೋಹನ ಚಂದ್ರಗುತ್ತಿ, ಕುಲಸಚಿವರು, ತುಮಕೂರು ವಿಶ್ವವಿದ್ಯಾಲಯ, ತುಮಕೂರು.
ಪ್ರಾಸ್ತಾವಿಕ ಮಾತು : ಡಾ.ವಡ್ಡಗೆರೆ ನಾಗರಾಜಯ್ಯ, ಕವಿ, ಸಂಶೋಧಕರು ಹಾಗೂ ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು.
ಮುಖ್ಯ ವಿಷಯ ಮಂಡನೆ : ಡಾ. ರವಿಕುಮಾರ್ ನೀಹ, ಸದಸ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತುಮಕೂರು.
ಮುಖ್ಯ ಅತಿಥಿಗಳು : ಕೈಲಾಶ್ ಮಳವಳ್ಳಿ, ಚಲನಚಿತ್ರ ನಿರ್ದೇಶಕರು, ಬೆಂಗಳೂರು.
ನಮ್ಮೊಂದಿಗೆ : ಡಾ.ಎಲ್.ಮುಕುಂದ್ ಗೋಪಗಾನಹಳ್ಳಿ, ಪ್ರಾಧ್ಯಾಪಕರು, ತುಮಕೂರು. ಡಾ.ಎ.ಓ.ನರಸಿಂಹಮೂರ್ತಿ ಜಟ್ಟಿಅಗ್ರಹಾರ, ಇತಿಹಾಸ ತಜ್ಞರು, ತುಮಕೂರು, ಮೂರ್ತಿ ತಿಮ್ಮನಹಳ್ಳಿ, ಉಪನ್ಯಾಸಕರು, ತುಮಕೂರು, ಕಾಂತರಾಜು ಗುಪ್ಪಟ್ಣ, ಸಾಹಿತಿ, ಕೊರಟಗೆರೆ, ಶಿವಾನಂದ್ ಡಿ.ಇ (ಪಿಎಚ್.ಡಿ) ಸಂಶೋಧನಾರ್ಥಿ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ.
ಸುಖಾಗಮನ ಕೋರುವವರು : ವಡ್ಡಗೆರೆ ಕದರಮ್ಮ, ವಡ್ಡಗೆರೆ ಮುದ್ದುನಾಗಮ್ಮ, ಬಡಗಿ ರಂಗಮ್ಮ, ಬಡಗಿ ಗಂಗಮ್ಮ, ಲಕ್ಕವ್ವ ತಿಪ್ಪೇನಾಗಯ್ಯ, ಲಕ್ಷ್ಮೀದೇವಮ್ಮ ಸಣ್ಣಮ್ಮಯ್ಯ, ಸಂಜೀವಮ್ಮ, ಸಾಕಮ್ಮ ನಾಗಣ್ಣ, ಚಿಕ್ಕನಾಗಮ್ಮ, ಮದುಮಕ್ಕಳು : ಸಿರಿ ವಿ.ಹೆಚ್. ಹಾಗೂ ದಿವ್ಯಾ ವಿ.ಎಸ್.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನಮ್ಮೂರು ವಡ್ಡಗೆರೆಯಲ್ಲಿ ದಿನಾಂಕ : 22-04-2026 ಬುಧವಾರದಿಂದ ದಿನಾಂಕ : 30-04-2026 ರವರೆಗೆ ಒಂಭತ್ತು ದಿನಗಳ ಕಾಲ ಚಂದ್ರಮ್ಮನ ಒಯ್ಯೋದು- ಬೆಳ್ದಿಂಗ್ಳಪ್ಪನ ಪೂಜೆ- ತಿಂಗಳಮಾವನ ಪೂಜೆ ಆಚರಣೆಯನ್ನು ನಡೆಸಲಾಗುತ್ತಿದೆ.
ಬೆಳದಿಂಗಳ ರಾತ್ರಿಯಲ್ಲಿ ಚಂದ್ರಮ್ಮನ ಒಯ್ಯೋ ಆಚರಣೆಯನ್ನು ಪ್ರಾದೇಶಿಕವಾಗಿ ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ. ಕೃಷಿ ಮತ್ತು ಪಶುಪಾಲನಾ ಸಂಸ್ಕೃತಿಗೂ ಪೂರ್ವದ ಆದಿಮ ಬೇಟೆಗಾರ ಸಂಸ್ಕೃತಿಯ ಗುರುತುಗಳನ್ನು ಸಂಗೋಪಿಸಿಕೊಂಡಿರುವ ಈ ಆಚರಣೆ ತುಂಬಾ ವಿಶಿಷ್ಟವಾದದ್ದು. ಇಡೀ ಹಟ್ಟಿಯ ಹೆಣ್ಣುಮಕ್ಕಳೆಲ್ಲಾ ಹಟ್ಟಿಮಧ್ಯ ಸೇರಿಕೊಂಡು ಬೀದಿಯನ್ನು ಶುಚಿಯಾಗಿ ಗುಡಿಸಿ, ಹಸುವಿನ ಸಗಣಿಯ ನುಣ್ಣನೆ ಕದರಿನಿಂದ ಸಾರಿಸಿ, ಬಟ್ಟುಮುತ್ತು ರಂಗೋಲಿ- ಸೂರ್ಯ- ಚಂದ್ರ- ಗೋಪಾದ- ಕುರಿಹೆಜ್ಜೆ- ಮೀನು- ಜಿಂಕೆ- ನವಿಲು- ನಕ್ಷತ್ರಗಳನ್ನು ಬರೆದು ವಿವಿಧ ರೀತಿಯ ಹೂವುಗಳಿಂದ ಸಿಂಗರಿಸುತ್ತಾರೆ. ಸಾಲು ಹಣತೆಗಳ ಬೆಳಕಿನಲ್ಲಿ ಕಮ್ಮನೆಯ ಸಗಣಿ ಬಗ್ಗಡ- ಘಮ್ಮನೆಯ ಹೂವುಗಳ ಪರಿಮಳ ಆಘ್ರಾಣಿಸುತ್ತಾ ಪ್ರತಿದಿನ ಮುಸ್ಸಂಜೆ ಏಳು ಗಂಟೆಯಿಂದ ಪ್ರಾರಂಭಿಸಿ ಸಮರಾತ್ರಿವರೆಗೆ ಚಂದ್ರಮ್ಮನ ಮೇಲೆ ಪದಗಳನ್ನು ಹಾಡುತ್ತಾರೆ.
ಸಾಲು ಹಣತೆಗಳ ನಡುವೆ ಕನ್ನಡಿ ಇರಿಸಿ ಬೆಳದಿಂಗಳ ಸೂಸುವ ಚಂದ್ರನ ಪ್ರತಿಬಿಂಬ ಪ್ರಕಾಶಿಸುವುದನ್ನು ನೋಡುತ್ತಾ ಎಂಟು ದಿನಗಳ ಕಾಲ ಕಾವೇಟಿರಂಗ ಮತ್ತು ಚಿಕ್ಕರಸಿ ಮಗಳಾದ ಲಕ್ಷ್ಮಿಯ ಮದುವೆ ಸಿದ್ಧತೆಯ ಪದಗಳ ಬೆಳದಿಂಗಳ ಹೊಳೆಯನ್ನೇ ಹರಿಸುತ್ತಾರೆ. ಕೊನೆಯ ಒಂಭತ್ತನೆಯ ರಾತ್ರಿ ಸಣ್ಣ ವಯಸ್ಸಿನ ಇಬ್ಬರು ಹುಡುಗಿಯರನ್ನು ಮದುಮಕ್ಕಳನ್ನಾಗಿ ಅಲಂಕಾರ ಮಾಡಿ, ಕಾವೇಟಿರಂಗ ಮತ್ತು ಚಿಕ್ಕರಸಿಯ ಮಗಳಾದ ಲಕ್ಷ್ಮಿಯ ಅಣಕು ಮದುವೆಯ ಶಾಸ್ತ್ರ ನೆರವೇರಿಸುತ್ತಾರೆ. ಕಾವೇಟಿರಂಗ ಮತ್ತು ಲಕ್ಷ್ಮಿಯ ಮದುವೆಗೆ ಚಂದ್ರನು ಬಂದು ಮಳೆ-ಬೆಳೆ, ಜನ- ಜಾನುವಾರು, ಜೀವಗೋಳ ಸುಭಿಕ್ಷೆಯಾಗಲೆಂದು ಹರಸುತ್ತಾನೆ ಎಂಬುದು ಈ ಆಚರಣೆಯ ಹಿಂದಿರುವ ನಂಬಿಕೆ. ಈ ಮದುವೆಗೆ ಸೇರಿದವರೆಲ್ಲರಿಗೂ ದೊಡ್ಡಿನೆಲ್ಲಕ್ಕಿ ಅನ್ನ ಮತ್ತು ಹುರಿದ ಗಟ್ಟಕ್ಕಿ ಪಾಯಸವನ್ನು ಚಂದ್ರಮ್ಮ ಉಣಲಿಕ್ಕಿ ತಾನು ಮಾತ್ರ ಒಂಬತ್ತು ಸಪ್ಪೆರೊಟ್ಟಿ ಚೊಕ್ಕಭೋಜನ ಮಾಡುತ್ತಾನೆ !
ಬೆಳ್ದಿಂಗಳಪ್ಪನ ಪೂಜೆಯ ಆಚರಣೆಯನ್ನು ವಿಶೇಷವಾಗಿ ಕದಿರಿ ಹುಣ್ಣಿಮೆ(ಹೋಳಿ) ದಿನಗಳಲ್ಲಿ ಆಚರಿಸಲಾಗುತ್ತದೆ. ಇದು ಆಂಧ್ರಪ್ರದೇಶದ ಕದಿರಿ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ವಿಶೇಷವಾಗಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಅನಂತಪುರಂ ಜಿಲ್ಲೆಗಳಲ್ಲಿ ಪರಿಶಿಷ್ಟರ ಹಟ್ಟಿಗಳಲ್ಲಿ ಚಂದಿರಮ್ಮನ ಪೂಜೆ ಮಾಡಲಾಗುತ್ತದೆ. ಕದಿರಿ ನರಸಿಂಹಸ್ವಾಮಿಯ ರಥೋತ್ಸವಕ್ಕೆ ಹೋಗಲಾಗದ ಮಹಿಳೆಯರು ತಮ್ಮ ಹಟ್ಟಿಗಳಲ್ಲಿಯೇ ಚಂದಿರಮ್ಮನನ್ನು ಪೂಜಿಸಿ, ಹಬ್ಬ ಆಚರಿಸುತ್ತಾರೆ. ಈ ಹಬ್ಬವು ಸಾಮಾನ್ಯವಾಗಿ ಮಾರ್ಚ್ ತಿಂಗಳ ಹುಣ್ಣಿಮೆಯಂದು ಬರುತ್ತದೆ. ಏಪ್ರಿಲ್ ತಿಂಗಳಿನ ಹುಣ್ಣುಮೆಯಲ್ಲಿಯೂ ಈ ಹಬ್ಬವನ್ನು ಆಚರಿಸುತ್ತಾರೆ. ಆಂಧ್ರಪ್ರದೇಶದ ಕದಿರಿ ನರಸಿಂಹಸ್ವಾಮಿ ದೇವರ ರಥೋತ್ಸವದ ದಿನಗಳಲ್ಲಿ ಈ ಚಂದಿರಮ್ಮನ ಪೂಜೆ ಮಾಡುವುದು ಸಂಪ್ರದಾಯ.
ಅಗ್ರಹಾರ ಕೃಷ್ಣಮೂರ್ತಿ ಅವರ ಬೆಳ್ದಿಂಗ್ಳಪ್ಪನ ಪೂಜೆ (ಜಾನಪದ ಆಚರಣೆಯ ಅಧ್ಯಯನ) ಇದು ಚಂದ್ರಮ್ಮನ ಆಚರಣೆ ಕುರಿತ ಮೊಟ್ಟಮೊದಲ ಸಂಶೋಧನಾ ಗ್ರಂಥವಾಗಿದೆ.
ಲೇಖನ: ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು. 8722724174


