ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಅನ್ಯಾಯ ಮಾಡುತ್ತಿದ್ದು, ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, "ತಮ್ಮನ್ನು ತಾವು 'ಅಲ್ಪಸಂಖ್ಯಾತರ ರಕ್ಷಕರು' ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ, ಪಿಎಚ್.ಡಿ ಸಂಶೋಧನೆ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೇ ಕಳೆದ ಎಂಟು ತಿಂಗಳಿಂದ ಫೆಲೋಶಿಪ್ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಟೀಕಿಸಿದ್ದಾರೆ.
ವಿದ್ಯಾರ್ಥಿಗಳಿಗೆ ತೀವ್ರ ಆರ್ಥಿಕ ಸಂಕಷ್ಟ: "ತಿಂಗಳಿಗೆ ಸಿಗಬೇಕಾದ ಕೇವಲ ₹10,000 ಫೆಲೋಶಿಪ್ ಹಣವನ್ನೇ ನಂಬಿಕೊಂಡು ವಿದ್ಯಾರ್ಥಿಗಳು ವಸತಿ, ಆಹಾರ, ಪುಸ್ತಕಗಳು ಹಾಗೂ ಸಂಶೋಧನಾ ವೆಚ್ಚಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಸಕಾಲದಲ್ಲಿ ಹಣ ಬಿಡುಗಡೆಯಾಗದಿರುವುದು ಅವರಿಗೆ ತೀವ್ರ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಇದರಿಂದಾಗಿ ಸಂಶೋಧನೆಯನ್ನು ಮುಂದುವರಿಸಬೇಕೋ ಅಥವಾ ಜೀವನ ನಿರ್ವಹಣೆಗಾಗಿ ಬೇರೆ ದಾರಿ ಹುಡುಕಬೇಕೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾರೆ" ಎಂದು ಅಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಉಳಿದ ತಿಂಗಳ ಹಣ ಎಲ್ಲಿ?:
ವಿದ್ಯಾರ್ಥಿಗಳ ನಿರಂತರ ಮನವಿ ಮತ್ತು ಹೋರಾಟದ ಒತ್ತಡಕ್ಕೆ ಮಣಿದು ಕೆಲವರಿಗೆ ನಾಲ್ಕು ತಿಂಗಳ, ಇನ್ನು ಕೆಲವರಿಗೆ ಕೇವಲ ಮೂರು ತಿಂಗಳ ಫೆಲೋಶಿಪ್ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಉಲ್ಲೇಖಿಸಿರುವ ಅವರು, "ಹಾಗಾದರೆ ಉಳಿದ ತಿಂಗಳ ಹಣ ಎಲ್ಲಿ? ಅದನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಇನ್ನೆಷ್ಟು ಕಾಲ ಬೇಕು?" ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಬೂಟಾಟಿಕೆ ಬಯಲು:
"ಎಲ್ಲದಕ್ಕೂ 'ತಾಂತ್ರಿಕ ಸಮಸ್ಯೆ' ಎಂಬ ಸಿದ್ಧ ಉತ್ತರ ನೀಡಿದರೆ ಸರ್ಕಾರದ ಜವಾಬ್ದಾರಿ ಮುಗಿಯುತ್ತದೆಯೇ? ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಲೆ ಇಲ್ಲವೇ?" ಎಂದು ತರಾಟೆಗೆ ತೆಗೆದುಕೊಂಡಿರುವ ಅಶೋಕ್, ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುವ ಸರ್ಕಾರಕ್ಕೆ, ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡಬೇಕಾದ ಅಲ್ಪ ಮೊತ್ತದ ಫೆಲೋಶಿಪ್ ಅನ್ನೂ ಸಕಾಲದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗದಿರುವುದು ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನ ಮತ್ತು ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.




