ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ಧರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳ ಅಥವಾ ಹೈಕಮಾಂಡ್ ರಬ್ಬರ್ ಸ್ಟ್ಯಾಂಪಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಜಾತಿಗಣತಿ ಮರು ಸಮೀಕ್ಷೆ ನನ್ನ ತೀರ್ಮನವಲ್ಲ ಹೈಕಮಾಂಡ್ ತೀರ್ಮಾನ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದಿದ್ದು ನನ್ನ ಕಾರ್ಯಕ್ರಮ, ಚಿನ್ನಸ್ವಾಮಿ ಸ್ಟೇಡಿಯಂಗೂ ನನಗೂ ಸಂಬಂಧವಿಲ್ಲ ಎಂದು ಕಾಲ್ತುಳಿತ ದುರಂತದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೀರಿ.
ಜಾತಿ ಜನಗಣತಿ ಮರು ಸಮೀಕ್ಷೆ ನನ್ನ ನಿರ್ಧಾರ ಅಲ್ಲ, ಹೈಕಮಾಂಡ್ ನಿರ್ಧಾರ ಎನ್ನುತ್ತೀರಿ. ಇಷ್ಟಕ್ಕೂ ನೀವು ರಾಜ್ಯದ ಮುಖ್ಯಮಂತ್ರಿಗಳ ಅಥವಾ ಹೈಕಮಾಂಡ್ ರಬ್ಬರ್ ಸ್ಟ್ಯಾಂಪಾ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಜಾತಿ ಜನಗಣತಿ ಮರು ಸಮೀಕ್ಷೆಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ್ದರೆ, ಕಾಂತರಾಜು-ಹೆಗ್ಡೆ ವರದಿಗೆ ಈವರೆಗೂ ಆಗಿರುವ ವೆಚ್ಚ ಸೇರಿದಂತೆ ಈಗ ಮಾಡುವ ಮರುಸರ್ವೆಯ ಖರ್ಚು ಸೇರಿ ಎಲ್ಲ ಖರ್ಚನ್ನೂ ಎಐಸಿಸಿ/ಕೆಪಿಸಿಸಿ ನಿಧಿಯಿಂದಲೋ ಅಥವಾ ರಾಹುಲ್ ಗಾಂಧಿ ಅವರ ಜೇಬಿನಿಂದಲೋ ಭರಿಸಲಿ.
ಇಷ್ಟೊಂದು ಅಸಹಾಯಕರಾಗಿರುವ ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯಾವ ನೈತಿಕತೆ ಇದೆ? ರಾಜೀನಾಮೆ ಕೊಟ್ಟು ಕರ್ನಾಟಕದ ಗೌರವ ಉಳಿಸಿ. ಕರ್ನಾಟಕ ರಾಜ್ಯ ಕಂಡಂತಹ ಅತ್ಯಂತ ಅಸಮರ್ಥ, ಅಸಹಾಯಕ ಮತ್ತು ದುರ್ಬಲ ಮುಖ್ಯಮಂತ್ರಿ ಅಂದರೆ ಅದು ಸಿದ್ದರಾಮಯ್ಯನವರು ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.