ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ 7,70,702 ಹೆಕ್ಟೇರ್ ವಿಶಾಲ ಪ್ರದೇಶದಲ್ಲಿ, 2,06,594 ಹೆಕ್ಟೇರ್ ಜಾಗ ಕಂದಾಯ ಇಲಾಖೆ ಸುಪರ್ದಿಯಲ್ಲಿದೆ. ಇದರಲ್ಲಿ ಸುಮಾರು 72,000 ಹೆಕ್ಟೇರ್ ನಷ್ಟು ಜಾಗ ಒತ್ತುವರಿಯಾಗಿದೆ ಎಂಬ ಮಾಹಿತಿ ಇದೆ. ಈ ಒತ್ತುವರಿ ಜಾಗಗಳಿಗೆ ಫಾರಂ 50, 53 ಹಾಗೂ 57 ಅಡಿ ಭೂಮಿ ಮಂಜೂರಿಗೆ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತು ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಹಿಂದುಳಿದ ಜಿಲ್ಲೆ, 3 ಎಕರೆಗಿಂತ ಕಡಿಮೆ ಜಾಗ ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡುವುದರಿಂದ ಜೀವನ ಆಧಾರಕ್ಕೆ ತೊಂದರೆಯಾಗುತ್ತದೆ ಎನ್ನುವ ಅಂಶಗಳ ಹಿನ್ನೆಲೆಯಲ್ಲಿ ಈ ಒತ್ತುವರಿ ತೆರವುಗೊಳಿಸಿರಲಿಕ್ಕಿಲ್ಲ. ಈ ಎಲ್ಲಾ ಅಂಶಗಳ ಹೊರತಾಗಿಯೂ ಒತ್ತುವರಿಯಾದ 72,000 ಹೆಕ್ಟೇರ್ ಪೈಕಿ 15,000 ಹೆಕ್ಟೇರ್ ಭೂಮಿ ಒತ್ತುವರಿ ತೆರವುಗೊಳಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.
ಕಂದಾಯ ಇಲಾಖೆ ಭೂಮಿ ಹೊರತಾಗಿ ಅರಣ್ಯ, ಮುಜುರಾಯಿ, ಸ್ಮಶಾನ, ಕೆರೆ ಒತ್ತುವರಿ ಪ್ರಕರಣಗಳು ಜಿಲ್ಲೆಯಲ್ಲಿವೆ. ವಿಶೇಷ ಭೂ ಕಬಳಿಕೆ ನಿಷೇಧ ನ್ಯಾಯಾಲಯ, ಸುಪ್ರಿಂಕೋರ್ಟ್ ಹಸಿರು ನ್ಯಾಯಾಲಯಗಳ ಆದೇಶವಿದ್ದರೂ, ಕೆರೆ ಒತ್ತುವರಿ ಪೂರ್ಣ ಪ್ರಮಾಣದಲ್ಲಿ ತೆರವು ಆಗಿಲ್ಲ. ಜಿಲ್ಲೆಯಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆಯಿದೆ. ಅಂತರ್ಜಲ ಮಟ್ಟ ಕೂಡ ಕುಸಿದಿದೆ. ಸಣ್ಣ ನೀರಾವರಿ, ಜಲಾನಯನ ಸೇರಿದಂತೆ, ಕೆ.ಎಂ.ಇ.ಆರ್.ಸಿ ಹಾಗೂ ಡಿ.ಎಂ.ಎಫ್ ನಿಧಿಗಳ ಅಡಿ ಸಾವಿರಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ದುರಂತವೆಂದರೆ ಈ ಜಲಮೂಲಗಳ ಸಂಗ್ರಹಕ್ಕೆ ಬೇಕಾದ ಕೆರೆಗಳೇ ಒತ್ತುವರಿಯಾಗಿವೆ. ಇದರಿಂದ ಹಣವೂ ವ್ಯರ್ಥವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಚಳ್ಳಕೆರೆ ಹಾಗೂ ಚಿತ್ರದುರ್ಗ ನಗರದ ಮೂಲ ನಕ್ಷೆಯಲ್ಲಿ ನಗರದ ಪ್ರಮುಖ ಬೀದಿಗಳು ಈಗಿರುವ ವಿಸ್ತೀರ್ಣದ ನಾಲ್ಕರಷ್ಟು ಅಗಲವಾಗಿವೆ. ಆದರೆ ಒತ್ತುವರಿಯಿಂದ ಇಂದು ಕಿರಿದಾಗಿವೆ. ಭೂ ಕಬಳಿಕೆ, ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣವೆನ್ನಬಹುದಾಗಿದೆ. ಒತ್ತುವರಿ ಜಾಗ ತೆರವು ಗೊಳಿಸದೇ, ಅವುಗಳಿಗೆ ಖಾತೆ ಮಾಡಿಕೊಡಲಾಗಿದೆ. ಇಂದರಿಂದಾಗಿ ಒತ್ತುವರಿದಾರರು ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿ ಕೂತಿದ್ದಾರೆ. ನಗರದ ಹಳೆಯ ಭೂ ನಕ್ಷೆಯ ಪ್ರಕಾರ ಒಂದು ನಯಾಪೈಸೆ ಪರಿಹಾರ ನೀಡದೇ ಚಿತ್ರದುರ್ಗ ಹಾಗೂ ಹಿರಿಯೂರು ನಗರಗಳಲ್ಲಿ ಒತ್ತುವರಿ ತೆರವುಗೊಳಿಸಬಹುದಾಗಿದೆ. ಚಳ್ಳಕೆರೆ ನಗರದಲ್ಲಿ ಈಗಾಗಲೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ಹೇಳಿದರು.
ಈ ಕಾರ್ಯಗಾರಕ್ಕೆ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಏಕೆಂದರೆ ಎಲ್ಲಾ ಇಲಾಖೆಗಳಿಗೂ ಸರ್ಕಾರಿ ಜಾಗಗಳನ್ನು ಮಂಜೂರು ಮಾಡಿ ವಶಕ್ಕೆ ನೀಡಲಾಗಿದೆ. ಈ ಜಾಗಗಳ ರಕ್ಷಣೆ ಹೊಣೆ ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಭೂ ರಕ್ಷಣೆ ಸಂಬಂದಿಸಿದಂತೆ, ಭೂ ಕಬಳಿಕೆ ನಿಷೇಧ, ಮೋಜಣಿ, ಕರ್ನಾಟಕ ಭೂ ಕಂದಾಯ, ನಗರ ಪಾಲಿಕೆ, ಪಂಚಾಯತ್ ರಾಜ್, ಕೆರೆ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರ, ಅರಣ್ಯ ಸಂರಕ್ಷಣೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಹಾಗೂ ವಕ್ಫ್ ಅಧಿನಿಯಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಈ ಕಾಯ್ದೆಗಳನ್ನು ಬಳಸಿ ಭೂ ಒತ್ತುವರಿ ತಡೆಯುವುದು ಹೇಗೆ ಎಂಬುದನ್ನು ಕಾರ್ಯಗಾರದಲ್ಲಿ ತಿಳಿಸಿಕೊಡಲಾಗುವುದು. ಅನಧಿಕೃತ ಭೂ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಸಿಕೊಳ್ಳಲು ಆದೇಶ ಪಡೆದ ಉದಾಹರಣೆಗಳು ಸಾಕಷ್ಟಿವೆ. ನ್ಯಾಯಲಯಕ್ಕೆ ಸಲ್ಲಿಸುವ ಭೂ ದಾಖಲೆಗಳು ಅಧಿಕೃತವಾಗಿರಬೇಕು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವಾಗ ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಉದ್ಘಾಟನೆ ಸಮಾರಂಭದಲ್ಲಿ ಭೂ ಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಅಪರ ನಿರ್ದೇಶಕ ಕೆ.ಜಯಪ್ರಕಾಶ್, ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಲಯದ ಕಂದಾಯ ಸದಸ್ಯರಾದ ಎಸ್.ಪಾಲಯ್ಯ, ಅಶ್ವತ್ಥನಾರಾಯಣ ಗೌಡ.ಕೆ.ಹೆಚ್, ವಿಲೇಖನಾಧಿಕಾರಿ ಹೆಚ್.ಕೆ.ನವೀನ್, ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರು ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ವಂದನೆ ಸಲ್ಲಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ, ಕಂದಾಯ, ಅರಣ್ಯ, ನಗರಾಭಿವೃದ್ಧಿ, ಪೊಲೀಸ್, ಶಿಕ್ಷಣ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.