ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜಿಲ್ಲೆಯ ಜಗಳೂರು ತಾಲೂಕು ಇನ್ಮುಂದೆ ಬರದನಾಡಲ್ಲ,ಬಂಗಾರದ ನಾಡು. ಇಲ್ಲಿನ ರೈತರು ಬಂಗಾರ ಬೆಳೆಬೆಳೆಯಲಿದ್ದಾರೆ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವಿಶ್ವಾಸ ವ್ಯಕ್ತಪಡಿಸಿದರು.
ಜಗಳೂರು ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು. 50 ವರ್ಷಗಳ ನಂತರ ಜಗಳೂರು ಕೆರೆ ಕೋಡಿ ಬಿದ್ದಿರುವುದು ಈ ಭಾಗದ ರೈತರಲ್ಲಿ ಸಂತಸ ಹಿಮ್ಮಡಿಗೊಂಡಿದೆ. ಮುಂದೆ ಜಗಳೂರು ಕೆರೆ ಸೇರಿ ಪ್ರತಿ ವರ್ಷವೂ ತಾಲೂಕಿನ ಎಲ್ಲಾ ಕೆರೆಗಳು ಕೋಡಿ ಬೀಳಲಿ ಎಂದರು.
ದೂರದೃಷ್ಟಿಯಿಟ್ಟುಕೊಂಡು ಕೆರೆಗಳನ್ನು ಕಟ್ಟಿದ ತಿಮ್ಮಪ್ಪ ನಾಯಕರನ್ನ ನಾವು ಸ್ಮರಿಸಲೇಬೇಕು. ಭರಮಸಾಗರ ಹಾಗೂ ಜಗಳೂರು ಕ್ಷೇತ್ರದ 57 ಕೆರೆಗಳಿಗೆ 1,200 ಕೋಟಿ ಬಿಡುಗಡೆಗೆ ಶ್ರಮಿಸಿದ ಈಗಿನ ಸಿಎಂ ಸಿದ್ದರಾಮಯ್ಯ, ಅಂದಿನ ಮುಖ್ಯಮಂತ್ರಿಯಾದ ಬಿಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಸೇರಿದಂತೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಎಚ್. ಆಂಜನೇಯ, ಜಿ.ಎಂ.ಸಿದ್ದೇಶ್ವರ್, ಚಂದ್ರಪ್ಪ, ಸೇರಿದಂತೆ ಆಯಾಕಾಲದ ಸಚಿವರು, ಸಂಸದರು, ಶಾಸಕರಾದ ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ, ಹಾಲಿ ಶಾಸಕ ದೇವೇಂದ್ರಪ್ಪ, ನೀರಾವರಿ ಎಂಡಿ ಆಗಿದ್ದ ಮಲ್ಲಿಕಾರ್ಜುನ್ ಗುಂಗಿ ಹಾಗೂ ಅಧಿಕಾರಿಗಳನ್ನು ಸ್ಮರಿಸಬೇಕು ಎಂದರು.
8 ಮೋಟರ್‌ಗಳಲ್ಲಿ ಕೇವಲ 4 ಮೋಟರ್ ಮಾತ್ರ ಚಾಲನೆ ಮಾಡಲಾಗುತ್ತಿದೆ. ಮುಂದಿನ ಒಂದು ತಿಂಗಳೊಳಗಾಗಿ ತುಪ್ಪದಹಳ್ಳಿ ಕೆರೆಗೆ ದೊಡ್ಡ ಪೈಪ್‌ಲೈನ್‌ಗೇಟ್ ವಾಲ್ ಅಳವಡಿಸಿ, ಗೇಟ್ ವಾಲ್‌ಗೆ ಸಣ್ಣ ಕೊಠಡಿ ಮಾಡಿ ಎಲ್ಲಾ 8 ಮೋಟರ್ ಚಾಲನೆ ಮಾಡಿಸಬೇಕು. ಈ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಜಗಳೂರು ಕ್ಷೇತ್ರವು ಸಂಭ್ರಮದ ವಾತಾರಣದಲ್ಲಿದೆ. ಸಿರಿಗೆರೆ ಶ್ರೀಗಳ ಪಾದ ಸ್ಪರ್ಷದಿಂದ ಪುನೀತರಾಗಿದ್ದೇವೆ. ಶಾಸಕ ಅವದಿಯಲ್ಲಿ ಸ್ವಾಮೀಜಿಗಳ ನೀಡಿದ ಮಾತನ್ನು ಸರ್ಕಾರದೊಂದಿಗೆ ಸಂಪರ್ಕಕೊಂಡಿಯಂತೆ ಕೆಲಸ ನಿರ್ವಹಿಸಿದೆ.
ಭರಮಸಾಗರ ಮತ್ತು ಜಗಳೂರು ಕ್ಷೇತ್ರದ 57 ಕೆರೆಗಳ ನೀರು ತುಂಬಿಸುವ ಯೋಜನೆಗಳು ಸಾಕಾರಗೊಂಡಿವೆ ಎಂದರು. ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶ್ರೀಗಳನ್ನು ಡೊಳ್ಳು ಸೇರಿ ವಿವಿಧ ಜನಪದ ವಾದ್ಯಗಳೊಂದಿಗೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಪಪಂ ಆಧ್ಯಕ್ಷ ನವೀನ್ ಕುಮಾರ್, ಡಾ.ರವಿಕುಮಾರ್ , ಪಿ.ಸುರೇಶ್ ಗೌಡ್ರು, ಕೆ.ಪಿ.ಪಾಲಯ್ಯ, ಎಂ.ಡಿ.ಕೀರ್ತಿಕುಮಾರ್, ಜಗಳೂರು ಕೆರೆಸಮಿತಿ ಅಧ್ಯಕ್ಷ ಶಿವನಗೌಡ,
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ವೀಣಾ, ಎನ್. ಎಸ್.ರಾಜಣ್ಣ, ವಕೀಲರಾದ ಬಸವರಾಜಪ್ಪ, ಡಿ.ವಿ.ನಾಗಪ್ಪ, ಶಶಿಕುಮಾರ್, ತಹಸೀಲ್ದಾರ್ ಸಯಿದ್ ಕಲೀಂ ಉಲ್ಲಾ, ಇಒ ಕೆಂಚಪ್ಪ ಸೇರಿ ಮತ್ತಿತರರು ಉಪಸ್ಥಿರಿದ್ದರು.