ಪ್ರಿಯಕರನಿಗಾಗಿ ಹೆತ್ತ ತಾಯಿಯನ್ನೇ ಕೊಲೆಗೈದ ವಿವಾಹಿತ ಮಗಳು
ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಆಕೆಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಪರ ಪುರಷನ ಸಂಗ ಮಾಡಿ ಅಮ್ಮನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಕೊನೆಗೆ ಪ್ರಿಯಕರನಿಗಾಗಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗಳ ಕಥೆ ಇದು.
ಹೌದು ತನ್ನ ಪ್ರಿಯಕರನಿಗಾಗಿ ಹೆತ್ತಮ್ಮನನ್ನೇ ಮಸಣಕ್ಕೆ ಕಳುಹಿಸಿ ಬಳಿಕ ನಾಟಕವಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮಗಳು ಕೊನೆಗೆ ಪ್ರಿಯಕರನ ಜೊತೆಯೇ ಪೊಲೀಸರಿಗೆ ತಗ್ಲಾಕೊಂಡಿದ್ದಾಳೆ.
ಬೊಮ್ಮನಹಳ್ಳಿಯ ಹೊಂಗಸಂದ್ರದ ಗುರುಮೂರ್ತಿ ರೆಡ್ಡಿ ಬಡವಾಣೆಯಲ್ಲಿ ನಡೆದಿದ್ದ ಜಯಲಕ್ಷ್ಮಿ ಕೊಲೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ.
ಹೆತ್ತ ಮಗಳೇ ಪ್ರಿಯಕರನ ಜೊತೆ ಸೇರಿ ತಾಯಿಯ ಕತ್ತನ್ನ ಟವಲ್ ನಿಂದ ಬಿಗಿದು ಹತ್ಯೆ ಮಾಡಿದ್ದಳು. ಇದೊಂದು ಆಕಸ್ಮಿಕ ಸಾವು ಅಂತಾ ಬಿಂಬಿಸಲು ಹರಸಾಹಸವನ್ನೇ ಮಾಡಿದ್ರು. ಆದ್ರೆ ಕೊನೆಗೂ ಖಾಕಿಯ ಮುಂದೆ ಇವ್ರ ಡ್ರಾಮ ನಡೆಯಲೇ ಇಲ್ಲ. ಕೊನೆಗೂ ಪೊಲೀಸರು ಕೊಲೆ ರಹಸ್ಯ ಬೇಧಿಸಿದ್ದಾರೆ.
ಸೆಪ್ಟೆಂಬರ್ 11ರ ಸಂಜೆ 4 ಗಂಟೆಗೆ ಜಯಲಕ್ಷ್ಮೀ ಮನೆಯಲ್ಲಿಯೇ ಸಾವನ್ನಪ್ಪಿದ್ದರು. ತಕ್ಷಣಕ್ಕೆ ಮಗಳು ಪವಿತ್ರಾ ಅಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಮೃತಪಟ್ಟ ಬಗ್ಗೆ ಖಚಿತ ಪಡಿಸಿ ನಂತರ ಬೊಮ್ಮನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗಳನ್ನ ವಿಚಾರಸಿದಾಗ ನನ್ನ ತಾಯಿಗೆ ಋತುಚಕ್ರವಾದಾಗ ಹೆಚ್ಚು ರಕ್ತಸ್ರಾವ ಆಗುತ್ತೆ. ಇದರಿಂದ ಸುಸ್ತಾಗಿ ಬಾತ್ ರೂಂ ನಲ್ಲಿ ಬಿದ್ದಿದ್ದಳು. ಆಸ್ಪತ್ರೆಗೆ ಕರೆತಂದಿದ್ವಿ. ಆದರೆ ವೈದ್ಯರು ತಾಯಿ ಸಾವನ್ನಪ್ಪಿರೋದಾಗಿ ಹೇಳಿದ್ರು ಎಂದು ಗೋಳಾಡಿ ಕಥೆ ಕಟ್ಟಿದ್ದಳು. ಈ ಮಧ್ಯೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದರು.
ಶವಾಗಾರದಿಂದ ಹೊರಬಂದ ಪೊಲೀಸರಿಗೆ ಇದು ಸಹಜ ಸಾವಲ್ಲ ಕೊಲೆ ಎಂಬ ಅನುಮಾನ ಬಂದಿದೆ. ವಾಪಸ್ಸು ಬಂದು ಸ್ಯಾನಿಟರಿ ಪ್ಯಾಡ್ ಪರಿಶೀಲಿಸಿದ್ದಾರೆ. ಆದರೆ ರಕ್ತದ ಕಲೆಗಳು ಇರ್ಲಿಲ್ಲ. ವೈದ್ಯರ ಬಳಿ ವಿಚಾರಸಿದಾಗ ಋತುಚಕ್ರ ನಿಂತು ಐದು ದಿನವಾಗಿದೆ ಎಂದು ಗೊತ್ತಾಗಿದೆ. ಅಲ್ಲದೇ ಕೈ ಹಾಗೂ ಗಲ್ಲದ ಮೇಲೆ ಉಗುರಿನಿಂದ ಪರಚಿದ ಗುರುತು ಇತ್ತು ಜೊತೆಗೆ ಕತ್ತಿನಲ್ಲಿ ಜೋರಾಗಿ ಬಿಗಿದ ಗುರುತು ಕೂಡ ಇತ್ತು ಹಾಗಾಗಿ ಪೊಲೀಸರು ಮಗಳು ಪವಿತ್ರಾಳನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಪ್ರಶ್ನೆ ಮಾಡ್ತಿದ್ದಂತೆ ಮಗಳ ಮೇಲೆಯೇ ಅನುಮಾನ ಪಡ್ತೀರ ಎಂದು ಹೇಳಿದ್ದಾಳೆ. ಇದು ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡುವಂತೆ ಮಾಡಿತ್ತು. ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಪ್ರಿಯಕರ ಲವನೀತ್ ಜೊತೆಗೆ ಸೇರಿ ಕೊಲೆ ಮಾಡಿರೋದನ್ನ ಬಾಯಿ ಬಿಟ್ಟಿದ್ದಾಳೆ.
ಆರೋಪಿ ಪವಿತ್ರ ತನ್ನ ತಾಯಿಯ ಸ್ವಂತ ತಮ್ಮ ಸುರೇಶ್ ರನ್ನ ವಿವಾಹವಾಗಿದ್ದಳು. ದಂಪತಿಗೆ 10 ವರ್ಷದ ಹೆಣ್ಣು ಮಗು ಹಾಗೂ 6 ವರ್ಷದ ಒಂದು ಗಂಡು ಮಗು ಇದೆ. ಜಯಲಕ್ಷ್ಮೀ ಸ್ವಲ್ಪ ಸ್ವಲ್ಪ ಹಣ ಕೂಡಿ ಹಾಕಿ ಮೂರು ಕಟ್ಟಡ ಕಟ್ಟಿಸಿದ್ದು. ತಿಂಗಳಿಗೆ ಮೂರು ಲಕ್ಷ ಬಾಡಿಗೆ ಬರುತ್ತೆ. ಗುರುಮೂರ್ತಿ ರೆಡ್ಡಿ ಬಡವಾಣೆಯಲ್ಲಿ ಜಯಲಕ್ಷ್ಮೀ ಹಾಗೂ ಪತಿ ಮುನಿರಾಜು ವಾಸವಿದ್ದರೇ, ಸುರೇಶ್ ಹಾಗೂ ಪವಿತ್ರಾ ಮೈಕೋಲೇಔಟ್ ಮನೆಯಲ್ಲಿದ್ರು. ಇತ್ತೀಚೆಗೆ ತಾಯಿಗೆ ಅನಾರೋಗ್ಯ ಇದ್ದಿದ್ದರಿಂದ ಪವಿತ್ರ ತಾಯಿ ನಡೆಸ್ತಿದ್ದ ಅಂಗಡಿ ಬಂದು ನೋಡಿಕೊಳ್ಳುತ್ತಿದ್ದಳು ಹೀಗೆ ಬರ್ತಿದ್ದವಳಿಗೆ ಇದೇ ಮನೆಯಲ್ಲಿ ಬಾಡಿಗೆಗೆ ಇದ್ದ ಲವನೀಶ್ ಪರಿಚಯವಾಗಿದ್ದಾನೆ. ಇಬ್ಬರ ಮಧ್ಯೆ ಕಳೆದ ಒಂದು ವರ್ಷದಿಂದ ಪ್ರೀತಿ ಶುರವಾಗಿ ಅನೈತಿಕ ಸಂಬಂಧ ಕೂಡ ಬೆಳೆದಿತ್ತು.
ಒಂದು ತಿಂಗಳ ಹಿಂದೆ ಇವರಿಬ್ಬರ ಕಳ್ಳಾಟ ಬಯಲಾಗಿದೆ. ಇದರಿಂದಾಗಿ ಜಯಲಕ್ಷ್ಮೀ ಮಗಳಿಗೆ ಬುದ್ಧಿ ಹೇಳಿ ಬೈಯ್ದಿದ್ದಾರೆ. ಅಲ್ಲದೇ ಲವನೀಶ್ ಇದ್ದ ಮನೆ ಕೂಡ ಖಾಲಿ ಮಾಡಿಸಿದ್ದರು. ಬಿಟ್ರೆ ಈ ವಿಚಾರ ನನ್ನ ಗಂಡನವರೆಗೂ ಹೋಗಬಹುದು ಎಂದು ಆತಂಕಗೊಂಡಿದ್ದ ಪವಿತ್ರಾ ತಾಯಿಯ ಕೊಲೆ ಪ್ಲಾನ್ ರೆಡಿ ಮಾಡಿ ಪ್ರಿಯಕರನ ಜೊತೆಗೆ ಸೇರಿ ಟವಲ್ ನಿಂದ ಕುತ್ತಿಗೆ ಬಿಗಿದು ತಾಯಿ ಜಯಲಕ್ಷ್ಮೀ ಕೊಲೆ ಮಾಡಿದ್ದಾಳೆ. ಬಳಿಕ ಮುಚ್ಚಿಹಾಕಲು ಹರಸಾಹಸಪಟ್ಟಿದ್ದಾಳೆ. ಆದರೆ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದು ಸದ್ಯ ಘಟನೆ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.