ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಹೊರ ಜಿಲ್ಲೆ ಸೇರಿದಂತೆ ಕರ್ನಾಟಕ ಮತ್ತು ಆಂದ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿರುವ ಶಿಥಿಲಾವಸ್ಥೆಯ ಸೇತುವೆ ಕುಸಿಯುವ ಹಂತ ತಲುಪಿದ್ದು ಆತಂಕದಲ್ಲಿ ಪ್ರಯಾಣಿಕರು ಸಂಚರಿಸಬೇಕಾಗಿದೆ.
ಹಿರಿಯೂರು- ಬ್ಯಾಡರಹಳ್ಳಿ-ಹರಿಯಬ್ಬೆ-ಧರ್ಮಪುರ- ಆಂದ್ರ ಪ್ರದೇಶ- ಶಿರಾ-ಪಾವಗಡ, ತುಮಕೂರು ಜಿಲ್ಲೆಯನ್ನು ಪ್ರವೇಶಿಸುವ ಓಬನಹಳ್ಳಿ-ದೇವರಕೊಟ್ಟ ಮಧ್ಯದ ರಾಜ್ಯ ಹೆದ್ದಿಯಲ್ಲಿರುವ ಹಳೆಯದಾದ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಕಳೆದ ಎರಡು ವರ್ಷಗಳಿಂದೆ ಟಿ.ನಾಗೇನಹಳ್ಳಿ-ದೊಡ್ಡಕಟ್ಟೆ- ಮ್ಯಾದನಹೊಳೆ ಸಂಪರ್ಕಿಸುವ ಸೇತುವೆ ಭಾರೀ ಮಳೆಯಿಂದಾಗಿ ಕಳೆದೆರಡು ವರ್ಷಗಳ ಹಿಂದೆ ರಾತ್ರೋರಾತ್ರಿ ಕುಸಿದು ಬಿದ್ದು ಇವತ್ತಿಗೂ ಆ ಭಾಗದ ಹತ್ತಾರು ಹಳ್ಳಿಗಳ ಜನರಿಗೆ, ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಕುಸಿದಿದ್ದ ಸೇತುವೆ ಇಲ್ಲಿಯ ತನಕ ನಿರ್ಮಾಣ ಭಾಗ್ಯ ಕಂಡಿಲ್ಲ. ಅದರ ಸಾಲಿಗೆ ದೇವರಕೊಟ್ಟ ಸಮೀಪದ ಸೇತುವೆ ಸೇರಿದರೆ ಅರ್ಧದಷ್ಟು ಹಿರಿಯೂರು ತಾಲೂಕಿನ ಹಳ್ಳಿಗಳ ಸಂಪರ್ಕವೇ ಕಡಿತ ಆಗುವ ಸಾಧ್ಯತೆ ಇದೆ.
ಈ ಸೇತುವೆಯು ಇತ್ತೀಚೆಗೆ ಅತ್ಯಂತ ಶಿಥಿಲಾವಸ್ಥೆ ಕಂಡಿದ್ದು, ಇಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸಿದೆ. ಕಿರಿದಾದ ಈ ಸೇತುವೆಯಲ್ಲಿ ವಾಹನಗಳ ಒಮ್ಮುಖ ಸಂಚಾರ ಮಾತ್ರ ಸಾಧ್ಯವಿದ್ದು, ಸೇತುವೆಯ ತಡೆಗೋಡೆ ಕೂಡ ಮುರಿಯುವ ಹಂತ ತಲುಪಿದ್ದು ವಾಹನಗಳ ಚಾಲಕರಿಗೆ ಭಯವನ್ನುಂಟು ಮಾಡಿದೆ. ಅಲ್ಲದೆ ಲಾರಿ, ಬಸ್ಸು, ಟ್ರ್ಯಾಕ್ಟರ್ ಮತ್ತಿತರ ವಾಹನಗಳು ಸೇತುವೆಯಿಂದ ಕಳಗೆ ಮಗುಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಹಳೆಯ ಸೇತುವೆ ಹಿಗ್ಗಿಸುವಿಕೆ ಹಾಗೂ ಹೊಸದಾಗಿ ನಿರ್ಮಾಣ ಮಾಡುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಲೋಕೋಪಯೋಗಿ ಇಲಾಖೆ ಮುನ್ನುಡಿ ಬರೆಯಬೇಕಿದೆ.
ಒಂದು ವೇಳೆ ಮ್ಯಾದನಹೊಳೆ ಸೇತುವೆ ಕುಸಿದಂತೆ ಏಕಾಏಕಿ ಕುಸಿದು ಸಂಭವಿಸಬಹುದಾದ ಸಾವು ನೋವುಗಳಿಗೆ ಯಾರು ಜವಾಬ್ದಾರಿ ಹೊತ್ತುಕೊಳ್ಳುವವರು ಎಂಬ ಪ್ರಶ್ನೆ ಉದ್ಭವವಾಗಿದೆ. ಒಟ್ಟಿನಲ್ಲಿ ಹಲವಾರು ಅಪಘಾತಗಳಿಗೆ ಕಾರಣವಾಗಿರುವ ಶಿಥಿಲಾವಸ್ಥೆಯ ಸೇತುವೆಗೆ ಮುಕ್ತಿ ದೊರಕದೆ, ಹೊಸ ಸೇತುವೆ ನಿರ್ಮಾಣವು ಆಗದೆ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಸಾಗುವ ಸಾವಿರಾರು ವಾಹನಗಳ ಚಾಲಕರ ಮತ್ತು ಪ್ರಯಾಣಿಕರ ಜೀವ ಭಯಕ್ಕೆ ಕೊನೆಯಿಲ್ಲದಂತಾಗಿದೆ.
ಸೇತುವೆಗೆ ಬಂದೊದಗಿರುವ ಅಪಾಯ ಅರಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಂದಿಷ್ಟು ಮಣ್ಣು ಹರಡಿ ಸುಮ್ಮನಾಗಿರುವುದು ಆತಂಕಕ್ಕೆ ಮತ್ತೊಷ್ಟು ಕಾರಣವಾಗಿದೆ.
ಸೇತುವೆ ಇತಿಹಾಸ-
ಹಿರಿಯೂರು ತಾಲೂಕಿನ ಓಬೇನಹಳ್ಳಿ ಗೇಟ್ ಮತ್ತು ದೇವರಕೊಟ್ಟದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೆ 90 ವರ್ಷಗಳ ಹರೆಯ. 1939 ರಲ್ಲಿ ಮೈಸೂರು ಸಂಸ್ಥಾನದ ಮಹರಾಜರ ಕೊಡುಗೆಯಾಗಿ ಜನ್ಮ ತಾಳಿದ ಸೇತುವೆ ದುಸ್ಥಿತಿ ತಲುಪಿದ್ದು ಅತ್ಯಂತ ಶಿಥಿಲಾವಸ್ಥೆಯಲ್ಲಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಸೇತುವೆಯ ಗುಣಮಟ್ಟ, ಸದ್ಯದ ಸ್ಥಿತಿ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆ ನೀಡಿ ಹೋಗಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಜಿಟಿ ಜಿಟಿ ಮಳೆಗೆ ಸೇತುವೆ ಮೇಲಿನ ಗುಂಡಿಗಳು ತಮ್ಮ ವಿಸ್ತಾರ ಹೆಚ್ಚಿಸಿಕೊಂಡಿದ್ದು ಸೇತುವೆಯ ಕೊನೆ ಭಾಗದ ಒಂದು ಮಗ್ಗುಲಲ್ಲಿ ಮಣ್ಣು ಜರುಗಿದ್ದು ಆತಂಕ ಸೃಷ್ಟಿಗೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆ ಅತ್ಯಂತ ನಿರ್ಲಜ್ಜವಾಗಿರುವುದರಿಂದ ನಿರ್ವಹಣೆ ಲೋಪ ಎದ್ದು ಕಾಣುತ್ತಿದೆ. ಹೀಗೆ ಹಿರಿಯೂರು ಸಮೀಪದ ಹುಚ್ಚವ್ವನಹಳ್ಳಿ ಸೇತುವೆ ಶಿಥಿಲಾವಸ್ಥೆಗೆ ಬಂದಾಗ ಖಾಸಗಿ ಬಸ್ಸೊಂದು ಸೇತುವೆ ಮೇಲಿಂದೆ ಹಳ್ಳಕ್ಕೆ ಬಿದ್ದು ಹಲವು ಸಾವು ನೋವುಗಳು ಸಂಭವಿಸಿದ್ದವು. ಈ ರೀತಿಯ ಇತಿಹಾಸ ತಾಲೂಕಿನಲ್ಲಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ರಸ್ತೆ ನಿರ್ವಹಣೆಯಲ್ಲಿ ತೀರಾ ನಿರ್ಲಜ್ಯ ವಹಿಸಿರುವುದು ಸೋಜಿಗ ಮೂಡಿಸಿದೆ.
ಗುಂಡಿ-ಮುಳ್ಳಿನ ಗಿಡಗಳಿಂದ ಆವರಿಸಿರುವ ರಾಜ್ಯ ಹೆದ್ದಾರಿ-
ಹಿರಿಯೂರು-ಬ್ಯಾಡರಹಳ್ಳಿ-ಹರಿಯಬ್ಬೆ-ಧರ್ಮಪುರ ಮಾರ್ಗವಾಗಿ ಆಂದ್ರ ಪ್ರದೇಶ ಮತ್ತು ತುಮಕೂರು ಜಿಲ್ಲೆ ಸಂಪರ್ಕಿಸುವ ಈ ರಸ್ತೆ ತುಂಬ ಗುಂಡಿಗಳು ಬಿದ್ದಿವೆ. ಅಲ್ಲೆದ ರಸ್ತೆ ಮಧ್ಯ ಭಾಗಕ್ಕೆ ಸೀಮೆ ಜಾಲಿ ಮುಳ್ಳಿನ ಕಂಟಿಗಳು ಚಾಚಿವೆ. ಗುಂಡಿಗಳನ್ನು ಮುಚ್ಚಲು, ರಸ್ತೆಯ ಮಧ್ಯ ಭಾಗಕ್ಕೆ ಬಂದಿರುವ ಮುಳ್ಳಿನ ಗಿಡ-ಮರಗಳನ್ನು ತೆಗೆಯಲು ಸರ್ಕಾರದಲ್ಲಿ ಹಣ ಇಲ್ಲ. ಸೇತುವೆಗೆ ಬಣ್ಣ ಹೊಡೆಸಿಲ್ಲ, ಸೇತುವೆ ಅಕ್ಕ ಪಕ್ಕದ ಗಿಡ ಮರ ತೆಗೆದಿಲ್ಲ. ದಿನನಿತ್ಯ ಸಾವಿರಾರು ಬೈಕ್, ಕಾರು ಬಸ್ಸು ಮುಂತಾದ ವಾಹನಗಳು ಸಂಚರಿಸಿಸುವ ಈ ಸೇತುವೆಯ ಮುಖಾಂತರವೆ ಧರ್ಮಪುರ ಭಾಗದಿಂದ ನೂರಾರು ಮಕ್ಕಳು ಶಾಲಾ ಕಾಲೇಜಿಗೆ ನಗರಕ್ಕೆ ಬರುತ್ತಾರೆ.
ಬೈಕ್ ಸವಾರರು ಸೇತುವೆ ಮೇಲೆ ಗುಂಡಿ ತಪ್ಪಿಸಲು ಪರದಾಡುವ ಸ್ಥಿತಿ ಇದೆ. ಇತ್ತೀಚೆಗೆ ಬಿದ್ದ ಮಳೆಗೆ ಮಣ್ಣು ಜರುಗಿದ್ದು ಲೋಕೋಪಯೋಗಿ ಇಲಾಖೆಯವರು ಭೇಟಿ ನೀಡಿ ಒಂದಿಷ್ಟು ಮಣ್ಣು ಹರಡಿಸಿ ರಸ್ತೆಯ ನೀರು ಸೇತುವೆ ಮೇಲೆ ಹರಿಯದಂತೆ ಬೇರೆ ಕಡೆ ಹೋಗುವಂತೆ ಚಿಕ್ಕದಾಗಿ ತಗ್ಗು ಮಾಡಿ ಇನ್ನೇನು ತೊಂದರೆಯಿಲ್ಲ ಎಂಬಂತೆ ಹೊರಟು ಹೋಗಿದ್ದಾರೆ. ಸೇತುವೆ ಪಕ್ಕದ ಮಣ್ಣು ಕುಸಿದಿರುವುದೇ ಸೇತುವೆ ಯಾವ ಅಪಾಯದಲ್ಲಿದೆ ಎಂದು ಹೇಳುತ್ತದೆ.
ವೇದಾವತಿಯಲ್ಲಿ ಸಾಕಷ್ಟು ನೀರು-
ವಿವಿ ಸಾಗರ ಜಲಾಶಯ 2022 ರಲ್ಲಿ ತುಂಬಿ ಕೋಡಿ ಬಿದ್ದಾಗಿನಿಂದಲೂ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಸದಾ ನೀರು ತುಂಬಿ ಹರಿಯುವುದು ಸೇತುವೆಗೆ ಮತ್ತೊಷ್ಟು ಅಪಾರ ತರುವ ಸಾಧ್ಯತೆ ಇದೆ.
ನಿರಂತರವಾಗಿ ನದಿಯಲ್ಲಿ ನೀರು ಹರಿಯುತ್ತಿದ್ದು, ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನ ಓಡಾಡುತ್ತಿರುವುದರಿಂದ ತಜ್ಞರನ್ನು ಕರೆಸಿ ಸೇತುವೆಯ ಗುಣಮಟ್ಟ ಮತ್ತು ಸಾಮರ್ಥ್ಯ ಪರೀಕ್ಷಿಸುವ ತುರ್ತು ಅಗತ್ಯವಿದೆ.
“ತೋರೆ ಓಬೇನಹಳ್ಳಿ ಗೇಟ್ ಬಳಿಯ ಸೇತುವೆ ಮೂಲೆಯೊಂದರಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿತ್ತು. ಕೂಡಲೇ ಮಣ್ಣು ಸುರಿದು ಸರಿ ಮಾಡಲಾಗಿದೆ. ಮಳೆಗಾಲ ಮುಗಿದ ನಂತರ ಕುಸಿದ ಜಾಗದಲ್ಲಿ ಕಾಂಕ್ರಿಟ್ ಗೋಡೆ ಕಟ್ಟಿ ಭದ್ರ ಪಡಿಸಲಾಗುತ್ತದೆ. ಮಳೆ ನೀರು ಬಂದರೆ ಬೇರೆ ಮಾರ್ಗದಿಂದ ಚರಂಡಿಗೆ ಬಿಡಲಾಗಿದೆ. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ”. ನಾಗರಾಜ್, ಎಇಇ, ಲೋಕೋಪಯೋಗಿ ಇಲಾಖೆ, ಹಿರಿಯೂರು.