ಶೀಘ್ರ ಬಿಬಿಎಂಪಿ ಚುನಾವಣೆ ನಡೆಸಿ-ಬಿಜೆಪಿ ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ಬಿಜೆಪಿ ಶಾಸಕರು ಹಾಗೂ ಸಂಸದರ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರನ್ನು ಶುಕ್ರವಾರ ಭೇಟಿ ಮಾಡಿ, ತಮ್ಮ ಬೇಡಿಕೆಗಳ ಕುರಿತು ಚರ್ಚಿಸಿ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ಒಟ್ಟಾರೆ ಆಯವ್ಯಯಕ್ಕೆ ಬೆಂಗಳೂರು ನಗರದಿಂದಲೇ ಹೆಚ್ಚಿನ ಆದಾಯ ಬರುತ್ತಿರುವುದರಿಂದ ಬೆಂಗಳೂರು ನಗರದ ಬಿಜೆಪಿ ಶಾಸಕರುಗಳ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ಅನುದಾನ ಒದಗಿಸಿ ಎಂದು ಕೋರಿಕೆ ಸಲ್ಲಿಸಿದರು.

ರಸ್ತೆ, ಉದ್ಯಾನ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ತಲಾ 100 ಕೋಟಿ ಅನುದಾನಕ್ಕೆ ಒತ್ತಾಯಿಸಿದರು. ಮೆಟ್ರೋ ದರ ಮತ್ತಷ್ಟು ಇಳಿಸುವ ಕೋರಿಕೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ಈಗಾಗಲೇ ಅವೈಜ್ಞಾನಿಕ ದರ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರಕ್ಕೆ, ಮೆಟ್ರೋಗೆ ಪತ್ರ ಬರೆಯಲಾಗಿದೆ.

ಸಾರ್ವಜನಿಕರಿಗೆ ಹೊರೆಯಾಗದಂತೆ ಮೆಟ್ರೋ ದರ ಇಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ  ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

ರಾಜಧಾನಿಯ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಪೂರಕ ಸ್ಪಂದನೆಯ ಕೊರತೆ ವಿವರಿಸಿ, ರಸ್ತೆ, ಕುಡಿಯುವ ನೀರು, ಟ್ರಾಫಿಕ್ ಸಮಸ್ಯೆ, ಮಳೆಗಾಲದಲ್ಲಿ ನಾಗರೀಕರು ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ದೂರದೃಷ್ಟಿ ಯೋಜನೆ ರೂಪಿಸುವಲ್ಲಿ ಬಿಬಿಎಂಪಿ ವಿಫಲವಾಗಿರುವುದರ ಕುರಿತು ಗಮನ ಸೆಳೆಯಲಾಯಿತು.

ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ನಡೆಸಬೇಕು, ಮೆಟ್ರೋ ಪ್ರಯಾಣ ದರ ಇಳಿಕೆ ಸೇರಿದಂತೆ ರಾಜಕೀಯವನ್ನು ಹೊರತುಪಡಿಸಿ ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ನಾಗರೀಕರ ದನಿಯಾಗಿ ಅನೇಕ ವಿಷಯಗಳನ್ನು ಮುಖ್ಯಮಂತ್ರಿಗಳಿಗೆ ಮನನ ಮಾಡಿಕೊಡಲಾಯಿತಲ್ಲದೇ ರಾಜ್ಯದಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಲಾಯಿತು.

ಅಭಿವೃದ್ಧಿ ರಾಜಕಾರಣದಲ್ಲಿ ಜನರನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಕಾಳಜಿ ಪೂರ್ವಕವಾದ ನಮ್ಮ ನಿಯೋಗದ ಉದ್ದೇಶವನ್ನು ಮುಖ್ಯಮಂತ್ರಿಗಳು ಅರ್ಥೈಸಿಕೊಂಡಿದ್ದಾರೆಂದು ಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ಇಂದಿನ ಮುಖ್ಯಮಂತ್ರಿಗಳ ಭೇಟಿಯ ಫಲಶೃತಿ ಮುಂದಿನ ದಿನಗಳಲ್ಲಿ ಸಕಾರಾತ್ಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದು ನಂಬಿದ್ದೇವೆ.

ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವರಾದ ಭೈರತಿ ಬಸವರಾಜ್,  ಕೆ.ಗೋಪಾಲಯ್ಯ, ಮುನಿರತ್ನ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಎಂ ಕೃಷ್ಣಪ್ಪ, ಎಸ್ಆರ್ ವಿಶ್ವನಾಥ್,  ಸಿ.ಕೆ.ರಾಮಮೂರ್ತಿ, ಉದಯ್ ಗರುಡಾಚಾರ್, ಮುನಿರಾಜು , ಎಸ್ ರಘು, ರವಿಸುಬ್ರಮಣ್ಯ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ,  ಕೇಶವಪ್ರಸಾದ್ ಸೇರಿದಂತೆ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

 

 

Share This Article
error: Content is protected !!
";