ಚಿತ್ರದುರ್ಗ ಡಿಸಿ ಕಚೇರಿ ಕಾಮಗಾರಿ ಪರಿಶೀಲಿಸಿ ನಮ್ಮ ಕಾಲಲ್ಲಿರುವುದನ್ನ ತಗಂಡ್ ಹೊಡ್ಕಬೇಕು-ಕಂದಾಯ ಸಚಿವ

News Desk

ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್
, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ಪರಿಶೀಲನೆ ಮಾಡಿದ ಕಂದಾಯ ಸಚಿವ  ಕೃಷ್ಣ ಭೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ಚಿತ್ರದುರ್ಗದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಕಣಿವೆ ಗುಡ್ಡದಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿಯನ್ನು ಸೋಮವಾರ ವೀಕ್ಷಣೆ ಮಾಡಿ ಅಸಮಾಧಾನ ಹೊರ ಹಾಕಿದ ಪ್ರಸಂಗ ಜರುಗಿತು.

 ಚಿತ್ರದುರ್ಗ ಹೊರ ವಲಯದ ಕುಂಚಿಗನಾಳ ಕಣಿವೆಯ ಹೊಸ ಜಿಲ್ಲಾಧಿಕಾರಿಗಳ ಕಟ್ಟಡ ಸರಿಯಾಗಿ ಕಟ್ಟಿಲ್ಲ. ಗಾಳಿ ಬೆಳಕಿಗೆ ಸುತ್ತಲೂ ಒಪನ್ ಜಾಗ ಇದ್ದರೂ ಹೆಚ್ಚುವರಿಯಾಗಿ ವೆಂಟಿಲೇಷನ್ ಬಿಡುವ ಅಗತ್ಯ ಏನಿತ್ತು. ಮನಬಂದಂತೆ ಪ್ಲಾನ್ ಮಾಡುವುದು, ಬಿಲ್ ಬರೆದುಕೊಳ್ಳುವುದೇ ಅಧಿಕಾರಿಗಳ ಕೆಲಸ ಆಗಿದೆ. ಈ ದೇಶವನ್ನು ಯಾರು ರಕ್ಷಣೆ ಮಾಡಬೇಕು ಎಂದು ಸಚಿವರು ಅಸಮಧಾನ ವ್ಯಕ್ತಪಡಿಸಿ ನಮ್ಮ ಕಾಲಲ್ಲಿರುವುದನ್ನು ತಗಂಡ್ ಹೊಡ್ಕಬೇಕು ಎಂದು ಹರಿಹಾಯ್ದರು.

ಹಾಗೆ ಇಂಚಿಂಚು ಕಟ್ಟಡ ಪರಿಶೀಲನೆ ಮಾಡುತ್ತಾ ಸಾಗಿದ ಸಚಿವ ಕೃಷ್ಣ ಭೈರೇಗೌಡರು ಇಂಜಿನಿಯರ್ಗಳಿಗೆ ಕಟ್ಟಡದ ಪ್ಲಾನ್ ಕುರಿತು ಮಾಹಿತಿ ಕೇಳಿದರು. ಇಂಜಿನಿಯರ್ ಗಳಿಂದ ಸಚಿವರ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲಿಲ್ಲ. ಯಾವ ಏಜೆನ್ಸಿ ಎಂದು ಪ್ರಶ್ನಿಸಿದರು. ಆಗ ಲೋಕೋಪಯೋಗಿ ಇಲಾಖೆ ಎಂದು ಇಂಜಿನಿಯರ್ ಗಳು ತಿಳಿಸಿದಾಗ ದೇವರೇ ಕಾಪಾಡಬೇಕು ಎಂದು ಸಚಿವರು ಉದ್ಗರಿಸಿದರು.

ಅವೈಜ್ಞಾನಿಕವಾಗಿ ಜಿಲ್ಲಾಧಿಕಾರಿಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಸರಿ ಇಲ್ಲದ್ದಕ್ಕೆ ನಮ್ಮ ಕಾಲಲ್ಲಿ ತಗಂಡ್ ಹೊಡ್ಕಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವರು ಕೇಳಿದ ಪ್ರಶ್ನೆಗಳಿಗೆ ಇಂಜಿನಿಯರ್ ಮತ್ತು ಗುತ್ತಿಗೆದಾರರಿಂದ ಸಮಂಜಸ ಉತ್ತರ ನೀಡಲಿಲ್ಲ.
ದೇಶನ ಹೇಗೆ ಕಾಪಾಡ್ಬೇಕು ಗೊತ್ತಿಲ್ಲ. ಕಟ್ಟಡದಲ್ಲಿ ವೆಂಟಿಲೇಷನ್ ಬಿಟ್ಟಿದ್ದ ವಿಚಾರಕ್ಕೆ ಸಚಿವ ಕೃಷ್ಣ ಬೈರೆಗೌಡ ತೀವ್ರ ಬೇಸರ ಹೊರ ಹಾಕಿದರು.
ಹಾಗೆ ಮುಂದುವರೆದ ಕಾಮಗಾರಿ ವೀಕ್ಷಣೆ ಮಾಡುತ್ತಾ ಮೆಟ್ಟಿಲುಗಳನ್ನು ಎಣಿಕೆ ಮಾಡಿದ ಕಂದಾಯ ಸಟಿವ ಕೃಷ್ಣ ಭೈರೇಗೌಡರು ಈ ವೇಳೆಯು ಅಸಮಾಧಾನ ಹೊರ ಹಾಕಿದರು.

ಒಂದು ಹೆಜ್ಜೆ ಮುಂದಿಡುವಾಗ ಯೋಚಿಸಿ ಕೆಲಸ ಮಾಡಬೇಕು. ಅಷ್ಟು ಕೆಲಸ ಮಾಡಲು ಇವರಿಗೆ ಸಮಯ ಎಲ್ಲಿರುತ್ತೇ, ಸರ್ಕಾರದ ದುಡ್ಡು, ಏನೂ ಹೇಳುವಂತಿಲ್ಲ, ಕೇಳುವಂತಿಲ್ಲ ಎಂದು ಕೃಷ್ಣ ಭೈರೇಗೌಡರು ಹರಿಹಾಯ್ದರು.
ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾಗುತ್ತೇ. ಆ ವೇಳೆಗೆ ಕಚೇರಿ ಸುತ್ತ ಮುತ್ತಲೂ ಗಿಡ ಮರಗಳನ್ನು ನೆಟ್ಟು ನೀರಾಕಿ ಬೆಳೆಸಿ ಎಂದು ಸಚಿವರು ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಸೂಚನೆ ನೀಡಿದರು.
ಅಂದಾಜು ಪಟ್ಟಿ ಇಲ್ಲ, ಏನು ಕೇಳಿದರೂ ಸಮರ್ಪಕ ಉತ್ತರ ನೀಡುತ್ತಿಲ್ಲ, ಪಿಲ್ಲರ್ ಗಳ ಕಾಮಗಾರಿ ಸರಿಯಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡರು ಬೇಸರ ವ್ಯಕ್ತಪಡಿಸಿದರು.

ಅನುದಾನಕ್ಕೆ ಬೇಡಿಕೆ- ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೆಚ್ಚುವರಿಯಾಗಿ 15 ಕೋಟಿ ರೂ.ಗೆ ಬೇಡಿಕೆ ಇಡುತ್ತಿದ್ದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಈಗಾಗಲೇ 47.50 ಕೋಟಿ ಖರ್ಚಾಗಿದೆ. ಇನ್ನೂ 15 ಕೋಟಿ ಬೇಕೆನ್ನುತ್ತೀರಿ, ಏನಾದರೂ ಮಾತನಾಡಿದರೆ ನಿಮಗೆ ಬೇಸರ ಆಗುತ್ತದೆ ಏನಾಪ್ಪ ಎಂದು ಕಂದಾಯ ಸಚಿವರು ಉದ್ಗರಿಸಿದರು.

ಇಷ್ಟೇಲ್ಲ ಅಸಮಾಧಾನ ಇದ್ದರೂ ಕಂದಾಯ ಸಚಿವರು ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ ಬೇಕಿರುವ 15 ಕೋಟಿ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.
ಸಚಿವ ಕೃಷ್ಣಭೈರೇಗೌಡರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್
, ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಾಥ್ ನೀಡಿದರು.

ಜಿಲ್ಲಾಧಿಕಾರಿಗಳ ಕಟ್ಟಡ-
ಚಿತ್ರದುರ್ಗ ನಗರದ ಹೊರ ವಲಯದ ಕುಂಚಿಗನಾಳ (ಕಣಿವೆ) ಗ್ರಾಮದ ರಿಸನಂ 44ರಲ್ಲಿ ಸುಮಾರು 40 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮೀಸಲಿಡಲಾಗಿತ್ತು. ಇಡೀ ಜಾಗ ಗುಡ್ಡ, ಕಲ್ಲುಗಳಿಂದ ಕೂಡಿದ್ದರಿಂದ ಇದನ್ನ ಸಮತಟ್ಟು ಮಾಡಲು ಹರಸಾಹಸ ಮಾಡಲಾಯಿತು. ಸುಮಾರು 3.50 ಕೋಟಿ ಅಷ್ಟು ಹಣ ಖರ್ಚು ಮಾಡಿ ಒಂದಿಷ್ಟು ಸಮತಟ್ಟು ಮಾಡಲಾಯಿತು. ಗುಡ್ಡದ ಮಣ್ಣನ್ನು ಪಿಎನ್ ಸಿ ಕಂಪನಿಯವರು ರಸ್ತೆ ನಿರ್ಮಾಣ ಕಾರ್ಯಕ್ಕೆ ಲಿಫ್ಟ್ ಮಾಡುತ್ತಿದ್ದರು. ಆದರೆ ಮಣ್ಣಿನ ಗುಣಮಟ್ಟ ಸರಿ ಇಲ್ಲ ಎನ್ನುವ ಕಾರಣಕ್ಕೆ ಆ ಮಣ್ಣನ್ನು ಲಿಫ್ಟ್ ಮಾಡಲಿಲ್ಲ. ಹಾಗಾಗಿ ಗುಡ್ಡದ ಸಮತಟ್ಟು ಕಾರ್ಯ ಅಲ್ಲಿಗೆ ಸ್ಥಗಿತಕೊಂಡಿತು.
ಜಿಲ್ಲಾಧಿಕಾರಿಗಳ ಕಚೇರಿಗೆ ಬೇಕಾಗುವಷ್ಟು ಜಾಗವನ್ನು ಮಾತ್ರ ಸಮತಟ್ಟು ಮಾಡಿ ಆ ಜಾಗದಲ್ಲಿ ಜಿಲ್ಲಾಧಿಕಾರಿಗಳ ನೂತನ ಕಚೇರಿ ಶಂಕುಸ್ಥಾಪನೆ ಮಾಡಲಾಯಿತು. ಆರಂಭದಿಂದಲೂ ಜಿಲ್ಲಾಧಿಕಾರಿಗಳ ಜಾಗ ವಿವಾದದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿತು.

ಅಂದಾಜು ವೆಚ್ಚ- ಯಾವುದೇ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಲು 15 ಕೋಟಿ, ತಹಶೀಲ್ದಾರ್ ಕಚೇರಿ ನಿರ್ಮಾಣ ಮಾಡಲು 10 ಕೋಟಿ ಸೇರಿಸಿ ಆರಂಭದಲ್ಲಿ 25 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿತ್ತು.
ಇಷ್ಟು ಹಣದಲ್ಲಿ ನೆಲ ಮಹಡಿ ಮತ್ತು ಮೊದಲನೇ ಮಹಡಿಯಲ್ಲಿ ಅರ್ಧದಷ್ಟು ಕಾಮಗಾರಿ ಮಾಡಲಷ್ಟೇ ಅನುದಾನ ಮುಗಿದು ಹೋಯಿತು. ನಂತರ ಗುತ್ತಿಗೆದಾರರೇ ಆಸಕ್ತಿ ವಹಿಸಿ ಹೆಚ್ಚುವರಿಯಾಗಿ 22.50 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿಕೊಂಡು ಬಂದರು. ಆರಂಭಿಕ ಮೊತ್ತ 25 ಕೋಟಿ ಮತ್ತು 2ನೇ ಸಲ ಹೆಚ್ಚುವರಿಯಾಗಿ ಮಂಜೂರಾದ 22.50 ಕೋಟಿ ರೂ.ಸೇರಿ ಒಟ್ಟು 47.50 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಆದರೂ ಈ ಮೊತ್ತ ಸಾಕಾಗುತ್ತಿಲ್ಲ. ಇನ್ನೂ 15 ಕೋಟಿ ರೂ.ಗಳ ಅನುದಾನ ಅಗತ್ಯವಿದೆ ಎನ್ನಲಾಗಿದೆ.

ಕಳೆದ ವಾರವಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜಿಲ್ಲಾಧಿಕಾರಿಗಳ ಕಟ್ಟಡ ಕಾಮಗಾರಿ ಪರಿಶೀಲನೆ ಮಾಡಿದ್ದು ಮತ್ತೆ ಹೆಚ್ಚುವರಿಯಾಗಿ 15 ಕೋಟಿ ರೂ.ಗಳನ್ನು ಕೊಡಿಸುವ ಭರವಸೆ ನೀಡಿದ್ದರಿಂದಾಗಿ ಇಂದು ಕಂದಾಯ ಸಚಿವ ಕೃಷ್ಣ ಭೈರೇಗೌಡರು ಕಾಮಗಾರಿ ಪರಿಶೀಲನೆಗಾಗಿ ಆಗಮಿಸಿದ್ದರು. ಇಡೀ ಕಟ್ಟಡ ಕಾಮಗಾರಿ ಪರಿಶೀಲನೆ ಮಾಡಿದ ನಂತರ ಕಂದಾಯ ಸಚಿವರು ಹೌಹಾರಿದರು.

ಈಗ ಮತ್ತೆ 15 ಕೋಟಿ ರೂ.ಗಳನ್ನ ರಾಜ್ಯ ಸರ್ಕಾರ ನೀಡಿದ್ದೇ ಆದರೆ ಒಟ್ಟು 62.50 ಕೋಟಿ ರೂ.ಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಆದಂತಾಗಲಿದೆ. ಮೂಗಿಗಿಂತ ಮೂಗ್ತಿ ಬಾರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಬಿಸಿ ತುಪ್ಪವನ್ನ ಬಾಯಲ್ಲಿ ಹಾಕಿಕೊಂಡಿದ್ದು ಅತ್ತ ನುಂಗಲೂ ಆಗದೆ ಇತ್ತ ಉಗುಳಲೂ ಆಗದೆ ಬಾಯಲ್ಲೇ ಇಟ್ಟುಕೊಂಡು ವಿಲ ವಿಲ ಎನ್ನುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಸಾಲುತ್ತಿಲ್ಲ. ಜಿಲ್ಲಾಧಿಕಾರಿಗಳ ನೂತನ ಕಟ್ಟಡ ನಿರ್ಮಾಣ ಕಾರ್ಯ ಬಿಳಿ ಆನೆ ಸಾಕಿದಂತಾಗಿದೆ.

 

Share This Article
error: Content is protected !!
";