ಹೊಟ್ಟೆ ಹೊರೆಯಲು ಬಾಹ್ಯಾಕಾಶದ ವಿಸ್ಮಯಗಳ ದುರುಪಯೋಗ- ಡಾ.ಜಿ. ಎನ್ ಮಲ್ಲಿಕಾರ್ಜುನಪ್ಪ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
“ಯಾವುದೇ ದೇಶದ ಅಥವಾ ವ್ಯಕ್ತಿಯ ನಿಜವಾದ ಅಭಿವೃದ್ಧಿ ವಿಜ್ಞಾನದ ಬಗೆಗಿನ ಸರಿಯಾದ ತಿಳಿವಿನಿಂದ ಮಾತ್ರ ಸಾಧ್ಯ” ಎಂದು ಸಾಹಿತಿ
, ಚಿಂತಕ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ, ಡಾ.ಜಿ. ಎನ್ ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.

ಅವರು ಹಿರಿಯೂರಿನಲ್ಲಿನ ಗಿರೀಶ ಶಿಕ್ಷಣ ಮಹಾವಿದ್ಯಾಲಯ ಮತ್ತು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಸಹಯೋಗದಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನ”ದ ಅಂಗವಾಗಿ ಏರ್ಪಡಿಸಲಾಗಿದ್ದ “ಖಗೋಳ ವಿಸ್ಮಯ” ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು,”ಬಾಹ್ಯಾಕಾಶದ ವಿದ್ಯಾಮಾನಗಳನ್ನು, ವಿಸ್ಮಯಗಳನ್ನು ದುರುಪಯೋಗಪಡಿಸಿಕೊಳ್ಳುವ ರೀತಿಯಲ್ಲಿ ಕಥೆಗಳನ್ನು ಹೆಣೆದು ಹೊಟ್ಟೆ ಹೊರೆವ ವರ್ಗ ಇಂದಿನ ಆಧುನಿಕ ಯುಗದಲ್ಲಿಯೂ  ಮುಂದುವರೆದಿರುವುದು ಶೋಚನೀಯ.

ಅದು ಜನಸಾಮಾನ್ಯರಲ್ಲಿ ಭಯೋತ್ಪಾದನೆಯುಂಟುಮಾಡಿ ಅವರ ಅಂಃಸತ್ವವನ್ನೇ ಚಿವುಟಿ ಹಾಕುತ್ತಿದೆ. ವಿವಿಧ ರೀತಿಯ ಪೂಜೆ, ಯಜ್ಞ, ಹೋಮ, ಹವನಾದಿಗಳ ಮೂಲಕ ನಕ್ಷತ್ರಗಳನ್ನು, ಗ್ರಹಗಳನ್ನು ಆರಾಧಿಸುವ ಮೂಲಕ ಯಾವುದೇ ಭೌತಿಕ ಅಥವಾ ಭೌದ್ಧಿಕ ಪ್ರಗತಿ ಹೊಂದುವುದು ಸಾಧ್ಯವಿಲ್ಲದ ಕೆಲಸ” ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಶಿಕ್ಷಕರಿಗೆ ಮತ್ತು ಶಿಕ್ಷಕರಾಗುವ ಕನಸು ಹೊತ್ತು ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಕಲಿಯುವ ಪ್ರಶಿಕ್ಷಣಾರ್ಥಿಗಳಿಗೆ ಜ್ಞಾನ ವಿಜ್ಞಾನದ ಕೌಶಲ್ಯಗಳನ್ನು ಅದೆಷ್ಟು ಕಲಿಸಿದರೂ ಕಡಿಮೆಯೇ” ಎಂದು ಹೇಳಿದರು.

ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಉಪನ್ಯಾಸ ನೀಡಿ ಮಾತನಾಡಿ “ಖಗೋಳ ವಿಜ್ಞಾನ ಸತ್ಯಕ್ಕೆ ಹತ್ತಿರವಾದರೆ, ಅದನ್ನು ಅವಲಂಬಿಸಿ ಹೇಳುವ ಜ್ಯೋತಿಷ್ಯ ಕಾಲ್ಪನಿಕ ವ್ಯಾಖ್ಯಾನ ಮತ್ತು ವಿಶ್ಲೇಷಣೆ. ಆಕಾಶಕಾಯಗಳಲ್ಲಿನ ಯಾವುದೇ ಗ್ರಹ, ನಕ್ಷತ್ರಗಳು ಶ್ರೇಷ್ಠವೂ ಅಲ್ಲ, ಕಂಟಕವೂ ಅಲ್ಲ. ಅವುಗಳ ಬಗೆಗಿನ ಅರಿವು ನಮ್ಮನ್ನು ಮೌಢ್ಯಾಚರಣೆಗಳಿಂದ ದೂರವಿರಿಸುತ್ತದೆ. ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ”ಎಂದು ಹೇಳಿದರು.

 ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಎ. ಸುಧಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೈನ್ಸ್ ಫೌಂಡೇಶನ್ ಚಿತ್ರದುರ್ಗ ನಿರ್ದೇಶಕರಾದ ಪ್ರೊ.ಈ.ರುದ್ರಮುನಿ, ಕೆ.ವಿ.ನಾಗಲಿಂಗರೆಡ್ಡಿ, ಉಪನ್ಯಾಸಕಿ ಡಿ.ವೇದಾ ವೇದಿಕೆಯಲ್ಲಿದ್ದರು.

ಉಪನ್ಯಾಸಕ ಹೆಚ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಮಂಜುಮುತ್ತು ನಿರೂಪಿಸಿದರು. ಉಪನ್ಯಾಸಕ ನಿಜಲಿಂಗಪ್ಪ ವಂದಿಸಿದರು.  ಪ್ರಶಿಕ್ಷಣ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";