ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಕರಣವೊಂದನ್ನು ಮುಚ್ಚಿಹಾಕಲು 1.5 ಕೋಟಿ ರೂ. ಹಣ ಪಡೆದಿದ್ದ ಕೇಂದ್ರದ ನಾಲ್ವರು ಜಿಎಸ್ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಿಎಸ್ಟಿಯ ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ ಸೋನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮನೋಜ್ ಸೈನಿ, ಅಧೀಕ್ಷಕ ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ನಾಗೇಶ್ ಬಾಬು ಬಂಧಿತ ಆರೋಪಿ ಅಧಿಕಾರಿಗಳಾಗಿದ್ದಾರೆ.
ನಿರ್ದಿಷ್ಟ ಪ್ರಕರಣವನ್ನು ಮುಚ್ಚಿಹಾಕುವುದಾಗಿ ಜಿಎಸ್ಟಿ ಅಧಿಕಾರಿಗಳು ಹಣ ಪಡೆದು ಬಳಿಕ ಪರಾರಿಯಾಗಿದ್ದರು. ಈ ಬಗ್ಗೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಓರ್ವ ಉದ್ಯಮಿ ದೂರು ನೀಡಿದ್ದರು. ದೂರು ಆಧರಿಸಿ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ದಾಳಿ ರೂಪದಲ್ಲಿ ಕೃತ್ಯವೆಸಗಿದ್ದರು.
ಬೆಂಗಳೂರು ನಗರ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಪಶ್ಚಿಮ ವಿಭಾಗ ಪೊಲೀಸರಿಂದ ಕಾರ್ಯಾಚರಣೆ ಮಾಡಿ ಬಂಧಿಸಲಾಗಿದೆ. ಪ್ರಕರಣವನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದರು.