ಗ್ರೇಟರ್ ಬೆಂಗಳೂರು ವರದಿ ಸಲ್ಲಿಕೆ, ಬೆಂಗಳೂರು 7 ವಿಭಾಗವಾಗಿ ವಿಂಗಡಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೇಗವಾಗಿ ಬೆಳೆಯುತ್ತಿರುವ ಬೃಹತ್ ಬೆಂಗಳೂರು ಮಹಾನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ದಿಸೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ಕಾರ್ಪೊರೇಷನ್ ವಿಭಾಗಗಳನ್ನಾಗಿ ರಚನೆ ಮಾಡಿ ವರದಿ ಸಿದ್ದಪಡಿಸಲಾಗಿದ್ದು, ವರದಿಯನ್ನು ಇಂದು ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿಯು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಸಲ್ಲಿಸಿದರು.

ನಂತರ ವಿಧಾನಸೌಧದ ಕರ್ನಾಟಕ ವಿಧಾನ ಮಂಡಲದ ಸಮಿತಿ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರು ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ  ರಿಜ್ಞಾನ್ ಅರ್ಷದ್ ಅವರು ಮಾತನಾಡಿ, ಗ್ರೇಟರ್ ಬೆಂಗಳೂರು ಕುರಿತು  ಸತತ 5 ತಿಂಗಳ ಪ್ರಯತ್ನದಿಂದ  ಸಮಿತಿಯ 20 ಸದಸ್ಯರ ನಡುವೆ ಅಧಿಕೃತ ಸಭೆ, ಸಮಾಲೋಚನೆಗಳನ್ನು ನಡೆಸಿ, ಸಂಘ ಸಂಸ್ಥೆಗಳು, ಸಾರ್ವಜನಿಕರು, ಆನ್ಲೈನ್, ಬ್ರ್ಯಾಂಡ್ ಬೆಂಗಳೂರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನು ತಯಾರಿಸಲಾಗಿದೆ. ವರದಿಯು ವಿಧಾನಸಭೆಯ ಮುಂಬರುವ  ಅಧಿವೇಶನದಲ್ಲಿ ಚರ್ಚೆಗೆ ಬರಲಿದ್ದು, ಬಿಲ್ ಮಂಡನೆಯಾದ ನಂತರ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮುಂಚೂಣಿಯ 400ಕ್ಕೂ ಹೆಚ್ಚು ಕಂಪನಿಗಳು, ಸ್ಟಾರ್ಟ್ ಅಪ್ಗಳು, ಐಟಿ ಕಂಪನಿಗಳು ಇವೆ. ಭಾರತದ ಆರ್ಥಿಕತೆಗೆ ಬೆಂಗಳೂರು ನಗರ ಕೊಡುಗೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಜನತೆಗೆ ಉತ್ತಮ ಮೂಲಸೌಕರ್ಯ ಕಲ್ಪಿಸಲು ಹಾಗೂ ಉತ್ತಮ ಆಡಳಿತ ಒದಗಿಸುವ ಸಲುವಾಗಿ,  ಪರ್ಯಾಯ ವ್ಯವಸ್ಥೆ ಆಗಬೇಕು ಎಂಬ ಉದ್ದೇಶವನ್ನು ಹೊಂದಿ ವರದಿಯನ್ನು ಸಿದ್ದಪಡಿಸಲಾಗಿದೆ ಎಂದರು.

ಸದ್ಯ ಬಿಬಿಎಂಪಿ ಆಡಳಿತ ವೈಖರಿಯು ತೃಪ್ತಿದಾಯಕವಾಗಿಲ್ಲ ಹಾಗೂ  ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮೆಟ್ರೋ, ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ಬಿ ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲ. ಹೀಗಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ ಅಸ್ತಿತ್ವಕ್ಕೆ ತರಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ಬೆಂಗಳೂರು ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ ಎಂದರು.

ಬೆಂಗಳೂರು ನಗರವು ಸುಮಾರು 875 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಸುಮಾರು 1 ಕೋಟಿ 50 ಲಕ್ಷ ಜನಸಾಂದ್ರತೆ ಹೊಂದಿದೆ. ಈಗಿರುವ ಮಹಾನಗರ ಪಾಲಿಕೆಯಿಂದ ಎಲ್ಲಾ ಹಂತಗಳಲ್ಲೂ ನಿಯಂತ್ರಣ ಸಾಧ್ಯವಿಲ್ಲ. ಒಂದು ಏಜೆನ್ಸಿಯಿಂದ ಇನ್ನೊಂದು ಏಜೆನ್ಸಿಯ ಸಹಕಾರವಿಲ್ಲ. ಸಮಸ್ಯೆಗಳನ್ನು ನಿವಾರಿಸಿ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯನ್ನು 100 ರಿಂದ 125 ವಾರ್ಡ್ಗಳಿಗೆ ಒಂದರಂತೆ ಕಾರ್ಪೋರೇಷನ್ ರಚಿಸಬೇಕಾಗುವುದು. ರೀತಿ ಸುಮಾರು 7 ಕಾರ್ಪೋರೇಶನ್ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಎಷ್ಟು ಕಾರ್ಪೊರೇಷನ್ಗಳನ್ನು ರಚಿಸಬೇಕೆಂಬ ನಿರ್ಣಯವನ್ನು ಸರ್ಕಾರದ ವಿವೇಚನೆಗೆ ಬಿಡಲಾಗಿದೆ. ಮೇಯರ್ ಅವಧಿ 30 ತಿಂಗಳ ಇರಬೇಕು ಎಂಬ ಶಿಫಾರಸ್ಸು ಸಹ ವರದಿಯಲ್ಲಿ ಮಾಡಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ಬಿ, ಮೆಟ್ರೋ ರೈಲು ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲಿದೆ. ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸಲಹೆ ಮಾಡಲಾಗಿದೆ.

ಬಿಬಿಎಂಪಿ ವಿಭಜನೆಯಾದರೂ ಬೆಂಗಳೂರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ರೀತಿಯೇ ಇರಬೇಕೆಂಬ ಶಿಫಾರಸ್ಸಿದೆ. ಬೇರೆ ಜಿಲ್ಲೆಯನ್ನು ಸೇರಿಸುವುದಿಲ್ಲ. ಕೆಎಂಸಿ ಕಾಯ್ದೆ ಪ್ರಕಾರ ಹೊಸ ಪಾಲಿಕೆ ರಚನೆಯಾಗುತ್ತದೆ. ಪಾಲಿಕೆ ಹತ್ತಿರದಲ್ಲಿರುವ ಅಭಿವೃದ್ಧಿ ಹೊಂದಿರುವ ಗ್ರಾಮಗಳನ್ನು ಸೇರಿಸಲು ಅವಕಾಶವಿರುತ್ತದೆ ಎಂದು ಹೇಳಿದರು.

ಜೂನ್ 30 ರೊಳಗೆ ವಾರ್ಡ್ಗಳ ಗಡಿ ಗುರುತಿಸಬೇಕಿದೆ. ಅಷ್ಟರೊಳಗೆ ಹೊಸ ಪಾಲಿಕೆ, ವಾರ್ಡ್ಗಳು ರಚನೆ ಆಗಬೇಕು. ಬಳಿಕ ಮೀಸಲಾತಿ ನಿಗದಿಯಾಗಬೇಕು. ಇಷ್ಟೆಲ್ಲ ಕ್ರಿಯೆಗಳು ಪೂರ್ಣಗೊಂಡರೆ ಜುಲೈನಲ್ಲೇ ಪಾಲಿಕೆ ಚುನಾವಣೆ ನಡೆಸಬಹುದು ಎಂದು ಅವರು ತಿಳಿಸಿದರು.
ಸಂದರ್ಭದಲ್ಲಿ  ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿಯ ಸದಸ್ಯರು ಹಾಗೂ ಶಾಸಕರಾದ ಎಸ್.ಟಿ.ಸೋಮಶೇಖರ್, ಪ್ರಿಯಕೃಷ್ಣ, ಎಂ.ಶಿವಣ್ಣ, ಶ್ರೀನಿವಾಸ್, ಜವರಾಯಿಗೌಡ ಅವರು ಉಪಸ್ಥಿತರಿದ್ದರು.

 

Share This Article
error: Content is protected !!
";