ವಕೀಲ ಜಗದೀಶ್, ಪುತ್ರ ಸೇರಿ ನಾಲ್ವರ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವಕರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದಲ್ಲದೆ
, ತನ್ನ ಗನ್‌ಮ್ಯಾನ್‌ನಿಂದ ವ್ಯಕ್ತಿಯೊಬ್ಬನ ಕೊಲೆಗೈಯಲು ಗುಂಡು ಹಾರಿಸಿದ ಆರೋಪದ ಮೇಲೆ ವಕೀಲ ಕೆ.ಎನ್.ಜಗದೀಶ್, ಅವರ ಪುತ್ರ ಸೇರಿ ನಾಲ್ವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ತೇಜಸ್ವಿ ಎಂಬುವರು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕೊಲೆಗೆ ಯತ್ನ, ಹಲ್ಲೆ, ಶಸ್ತ್ರಾಸ್ತ್ರ ಬಳಕೆ ಹಾಗೂ ಇತರೆ ಆರೋಪಗಳ ಅಡಿಯಲ್ಲಿ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿರೂಪಾಕ್ಷಪುರ ನಿವಾಸಿ ಕೆ.ಎನ್.ಜಗದೀಶ್, ಅವರ ಪುತ್ರ ಆರ್ಯ ಜಗದೀಶ್, ಗನ್‌ಮ್ಯಾನ್ ಅಭಿಷೇಕ್ ತಿವಾರಿ ಹಾಗೂ ಕಾರು ಚಾಲಕ ಶುಭಂ ಕುಮಾರ್ ಅವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದೇನು?: ಜ.24ರಂದು ದೂರುದಾರ ತೇಜಸ್ವಿ ಹಾಗೂ ಇತರೆ ಸ್ಥಳೀಯರು ವಿರೂಪಾಕ್ಷಪುರದ ಆರ್ಚ್ ಬಳಿಯ ಬೇಕರಿಯಲ್ಲಿ ಟೀ ಕುಡಿಯುತ್ತಿದ್ದರು. ಆಗ ಆರೋಪಿಗಳು ಯಾಕೆ ಇಲ್ಲಿ ನಿಂತಿದ್ದಿರಾ? ಮನೆಗೆ ಹೋಗಿ ಎಂದಿದ್ದಾರೆ. ಆಗ ತೇಜಸ್ವಿ ಟೀ ಕುಡಿದು ಹೋಗುತ್ತೇವೆ ಎಂದಿದ್ದಾರೆ. ಆದರೆ, ಆರೋಪಿಗಳು ಏಕಾಏಕಿ, ಎಲ್ಲರೂ ಡ್ರಗ್ಸ್ ಸೇವಿಸಿದ್ದಾರೆ ಎಂದು ಲಾಠಿ ತಂದು ಹಲ್ಲೆೆ ನಡೆಸಿದ್ದಾರೆ. ಆಗ ತೇಜಸ್ವಿ ಹಾಗೂ ಸ್ಥಳೀಯರು ಸೇರಿ ಆರೋಪಿಗಳ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಜಗದೀಶ್ ಮತ್ತು ಇತರೆ ಆರೋಪಿಗಳು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿ ಜಗದೀಶ್ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಾಗ, ಜಗದೀಶ್ ತನ್ನ ಗನ್‌ಮ್ಯಾನ್‌ಗೆ ತೇಜಸ್ವಿ ಮೇಲೆ ಗುಂಡು ಹಾರಿಸುವಂತೆ ಸೂಚಿಸಿದ್ದಾನೆ. ಅದರಂತೆ ತೇಜಸ್ವಿ ಕಡೆ ಗನ್‌ಮ್ಯಾನ್ ಗುಂಡು ಹಾರಿಸಲು ಮುಂದಾಗಿದ್ದಾರೆ. ಆಗ ತೇಜಸ್ವಿ, ಜಗದೀಶ್‌ರನ್ನು ತಳ್ಳಾಡಿದಾಗ, ಗುಂಡು ಗಾಳಿಯಲ್ಲಿ ಹಾರಿದೆ. ಬಳಿಕ ತೇಜಸ್ವಿ ಹಾಗೂ ಇತರರು ಸ್ಥಳದಿಂದ ಪ್ರಾಣ ಭಯದಿಂದ ಓಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಗದೀಶ್ ಕಾರು ಧ್ವಂಸ: ಮತ್ತೊಂದೆಡೆ ಜಗದೀಶ್ ಅವರ ಸ್ಕಾರ್ಪಿಯೋ ಕಾರನ್ನು ಸ್ಥಳೀಯರು ಧ್ವಂಸ ಮಾಡಿದ್ದಾರೆ. ದೊಣ್ಣೆಗಳಿಂದ ಕಾರಿನ ಗಾಜುಗಳನ್ನು ಪುಡಿ ಮಾಡಿದ್ದಾರೆ. ಈ ವೇಳೆ ತಡೆಯಲು ಹೋದ ಪೊಲೀಸರನ್ನು ಪಕ್ಕಕ್ಕೆ ತಳ್ಳಿ ಕಾರು ಪುಡಿಗಟ್ಟಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಜಗದೀಶ್ ಮತ್ತು ಸ್ಥಳೀಯ ಯುವಕರು ಕೈಕೈ ಮಿಲಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";