ನೀರಿನ ಸಂರಕ್ಷಣೆಗೆ ಕೃಷಿಭಾಗ್ಯ ಯೋಜನೆ ಸದ್ಭಳಕೆ ಮಾಡಿಕೊಳ್ಳಿ-ಉಪಕೃಷಿ ನಿರ್ದೇಶಕ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರು ನೀರಿನ ಸಂರಕ್ಷಣೆಗೆ ಕೃಷಿಭಾಗ್ಯ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಳ್ಳಕೆರೆ ವಿಭಾಗದ ಉಪಕೃಷಿ ನಿರ್ದೇಶಕ ಡಾ.ಬಿ.ಎನ್.ಪ್ರಭಾಕರ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರೈತರಿಗೆ ಅಟಲ್ ಭೂಜಲ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು ಮತ್ತು ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಕುರಿತು ಆಯೋಜಿಸಲಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೂ ಹೊದಿಕೆ, ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯುವುದು ಮತ್ತು ಬೆಳೆ ಪರಿವರ್ತನೆಗೆ ಆದ್ಯತೆ ನೀಡಲು ತಿಳಿಸಿದ ಅವರು, ಸಮುದಾಯದ ಸಹಭಾಗಿತ್ವದಲ್ಲಿ ಅಂತರ್ಜಲ ಸಂಗ್ರಹಣೆ ಮತ್ತು ಅಂತರ್ಜಲವನ್ನು ಮರುಪೂರಣ ಮಾಡಲು ಅಟಲ್ ಭೂಜಲ ಯೋಜನೆಯು ಹೆಚ್ಚಿನ ಪ್ರಾಮುಖ್ಯತೆವಹಿಸಿ ಎಂದರು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಹೊರತುಪಡಿಸಿ ಉಳಿದ ಐದು ತಾಲೂಕಿನಲ್ಲಿ ಅಂತರ್ಜಲವನ್ನು ಅತಿ ಹೆಚ್ಚು ಬಳಕೆ ಮಾಡುತ್ತಿದ್ದು ನೀರಿನ ಮಿತ ಬಳಕೆ ಮಾಡಿ ಉತ್ಪಾದಕತೆ ಹೆಚ್ಚಿಸಲು ಕೃಷಿ ಇಲಾಖೆಯಿಂದ ಅಟಲ್ ಭೂಜಲ ಯೋಜನೆ ಅಡಿ ಸಹಾಯಧನದಡಿ ರೈತರಿಗೆ ಸ್ಪ್ರಿಂಕ್ಲರ್ ಘಟಕಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಕಾರ್ಯಕ್ರಮ ನಿರ್ವಹಣೆ ಘಟಕ, ಅಟಲ್ ಭೂಜಲ ಯೋಜನೆ ಬೆಂಗಳೂರಿನ ಕೇಂದ್ರ ಕಚೇರಿಯ ಸಾಮಾಜಿಕ ಅಭಿವೃದ್ದಿ ತಜ್ಞ ಪ್ರವೀಣ್ ಮಾತನಾಡಿ,  ನೀರಿನ ಲಭ್ಯತೆ ಹಾಗೂ ಪ್ರಾಮುಖ್ಯತೆ, ಮೇಲ್ಮೈ ನೀರು ಮತ್ತು ಅಂತರ್ಜಲ, ಭಾರತ ಹಾಗೂ ಕರ್ನಾಟಕದಲ್ಲಿ ಅಂತರ್ಜಲ ನೀರಿನ ಅತಿಯಾದ ಬಳಕೆಯ ಇಂದಿನ ಸ್ಥಿತಿಗತಿ, ಅಂತರ್ಜಲ ನಿರ್ವಹಣೆಗೆ ಪೂರಕವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ನಿರ್ವಹಣೆಗೆ ಸಮುದಾಯದಲ್ಲಿ ಅರಿವು ಮೂಡಿಸುವು ಅಗತ್ಯತೆ ಮತ್ತು ಸಮುದಾಯದ ಸಹಭಾಗಿತ್ವದ ಪಾತ್ರ ಮನವರಿಕೆ ಮಾಡಿಕೊಟ್ಟರು.

ಜಿಲ್ಲಾ ಕಾರ್ಯಕ್ರಮ ನಿರ್ವಹಣೆ ಘಟಕ, ಅಟಲ್ ಭೂಜಲ ಯೋಜನೆ ಚಿತ್ರದುರ್ಗ ಕಚೇರಿಯ ಡಿ.ರವಿಕುಮಾರ್ ಮಾತನಾಡಿ,  ಅಟಲ್ ಭೋಜಲ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅನುಷ್ಠಾನ ಸಂಸ್ಥೆಗಳ ಪಾತ್ರ, ಗ್ರಾಮ ಪಂಚಾಯಿತಿ ಮತ್ತು ಅಂತರ್ಜಲ ನಿರ್ವಹಾಣಾ ಸಮಿತಿಯ ಪಾತ್ರ, ಯೋಜನೆಯಲ್ಲಿ ವಿವಿಧ ಸಂಸ್ಥೆಗಳ ಕಾರ್ಯನಿರ್ವಹಣೆ, ಜಲಭದ್ರತಾ ಯೋಜನೆ ತಯಾರಿಕೆ, ಅಂತರ್ಜಲ ಮಿತ ಬಳಕೆ ಕ್ರಮಗಳಾದ ತುಂತುರು ಹಾಗೂ ಹನಿ ನೀರಾವರಿ ಪದ್ಧತಿಗಳ ಬಳಕೆ, ಭೂ ಹೊದಿಕೆ ಹಾಗೂ ಬೆಳೆ ಪರಿವರ್ತನೆ, ಕಡಿಮೆ ನೀರು ಬೇಡುವ ಬೆಳೆಗಳು ಇತ್ಯಾದಿ, ಅಂತರ್ಜಲ ಸಂಗ್ರಹ ಮತ್ತು ಮರುಪೂರಣ ಕ್ರಮಗಳಾದ ತಡೆಹಣೆ, ಕಂದಕದೊಂದಿಗೆ ಬದು, ಕೃಷಿ ಹೊಂಡ, ನೀರು ಇಂಗು ಗುಂಡಿ, ಗೋಕಟ್ಟೆ, ಜಿನುಗು ಕೆರೆ ಕುರಿತು ಮಾಹಿತಿ ನೀಡಿದರು.

 ನೀರಿನ ಮಿತ ಬಳಕೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಲು ಅಟಲ್ ಭೂಜಲ ಯೋಜನೆಯಡಿ ಸಹಾಯಧನದಡಿ 2022-23ನೇ ಸಾಲಿನಿಂದ ಸ್ಪ್ರಿಂಕ್ಲರ್ ಘಟಕ ವಿತರಿಸಲು ಕೃಷಿ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿದೆಂದರು.
ಹಿರಿಯೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ್ ಮಾತನಾಡಿ, ಕೃಷಿ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕೃಷಿ ಭಾಗ್ಯ ಯೋಜನೆಯಡಿ ಬಿದ್ದ ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಣೆ ಮಾಡಲು ಕಂದಕದೊಂದಿಗೆ ಬದು, ಕೃಷಿ ಹೊಂಡ ನಿರ್ಮಾಣ ಕುರಿತು ಮಾಹಿತಿ ನೀಡುತ್ತಾ ಕೃಷಿ ಹೊಂಡದಲ್ಲಿ ಸಂಗ್ರಹಣೆ ಆದ ನೀರನ್ನು ಬೆಳೆಗಳ ಸಂದಿಗ್ಧ ಹಂತದಲ್ಲಿ ನೀರನ್ನು ಹಾಯಿಸಲು ಸ್ಪ್ರಿಂಕ್ಲರ್ ಸೆಟ್ ಮತ್ತು ಡೀಸೆಲ್ ಪಂಪ್ಸೆಟ್ ಬಳಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಿದರು.

ಕೃಷಿ ಹೊಂಡದ ಸುತ್ತ ತಂತಿ ಬೇಲಿ ಹಾಕಿ ಅವಘಡ ತಡೆಯಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಕೋರಿದರು.
ನೆಟಾಫಿಮ್ ಸಂಸ್ಥೆಯ ಬೇಸಾಯ ಶಾಸ್ತ್ರಜ್ಞ  ಆಂಜಿನಪ್ಪ ಅವರು ಕೃಷಿ ಹಾಗೂ ತೋಟಗಾರಿಕಾ ಬೆಳಗಳಲ್ಲಿ ನೀರಿನ ಮಿತ ಬಳಕೆ ಹಾಗೂ ಉತ್ಪಾದಕತೆ ಹೆಚ್ಚಿಸಲು ಸ್ಪ್ರಿಂಕ್ಲರ್ ಮತ್ತು ಹನಿ ನೀರಾವರಿ ತಾಂತ್ರಿಕತೆ, ರಸಾವರಿ ತಂತ್ರಜ್ಞಾನ ಮತ್ತು ಅವುಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು.

ಫೈಲೊ ಸಂಸ್ಥೆಯ ಪ್ರತಿನಿಧಿ ಡಾ.ಬಿ.ಎಂ.ಕಿರಣ್ ಕೃಷಿಯಲ್ಲಿ ಅಂತರ್ಜಾಲ ಆಧಾರಿತ ಸಾಧನಗಳು, ಕೃತಕ ಬುದ್ಧಿಮತ್ತೆ, ಸಂವೇದಕ ಹಾಗೂ ಬೆಳೆ ವಿಜ್ಞಾನಗಳನ್ನು ಬಳಸಿ ಅಭಿವೃದ್ಧಿಪಡಿಸಿದ ಉಪಕರಣದ ಕುರಿತು ಮಾಹಿತಿ ನೀಡಿದರು. ಉಪಕರಣ ಬಳಕೆಯಿಂದ ಮಣ್ಣಿನಲ್ಲಿ ನೀರಿನ ಅವಶ್ಯಕತೆಯನ್ನು ನಿರಂತರವಾಗಿ ಪರಿಶೀಲಿಸಿ, ಬೆಳೆ ಮತ್ತು ಅದರ ಹಂತವನ್ನು ಆಧರಿಸಿ, ಬೆಳೆಯ ನೀರಿನ ಅವಶ್ಯಕತೆಯನ್ನು ಎಲ್ಲಾ ಸಮಯದಲ್ಲೂ ನಿಖರವಾಗಿ ಪೂರೈಸಲು ಮಾಹಿತಿ ನೀಡುತ್ತದೆ.

ಮೂಲಕ 40 ರಿಂದ 60 ಪ್ರತಿಶತ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು. ಮುಂದಿನ 7 ದಿನಗಳವರೆಗಿನ ಕೃಷಿ ಸಂಬಂಧಿತ ನಿರ್ಧಿಷ್ಟ ಸೂಕ್ಷ್ಮ ಹವಾಮಾನದ ಮುನ್ಸೂಚನೆ ಒದಗಿಸುವ ಮೂಲಕ ಭವಿಷ್ಯದ ಹವಾಮಾನ ಬದಲಾವಣೆಗಳ ಅಡ್ಡಪರಿಣಾಮದಿಂದ ಬೆಳೆಗಳನ್ನು ರಕ್ಷಿಸಲು ತಮ್ಮ ಸಂಸ್ಥೆಯ ಉಪಕರಣಗಳಿಂದ ಸಹಾಯವಾಗುತ್ತದೆ. ತಂತ್ರಜ್ಞಾನವು ನೀರು ಮತ್ತು ಕೀಟನಾಶಕವನ್ನು ಬೆಳೆಗಳಿಗೆ ನೀಡುವ ಸೂಕ್ತ ಸಮಯದ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಸಂಪನ್ಮೂಲದ ಸಮರ್ಪಕ ಬಳಕೆ ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದರು.

 ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ರಜನೀಕಾಂತ ಮಾತನಾಡಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳ ಕುರಿತು ಸಾಂಸ್ಥಿಕ, ಹೊರಾಂಗಣ, ಅಂತರಜಾಲ ಮತ್ತು ಯುಟ್ಯೂಬ್ ಮೂಲಕ ತಾಂತ್ರಿಕ ಮಾಹಿತಿಯನ್ನು ನೀಡುತ್ತಿದ್ದು, ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.

 

 

Share This Article
error: Content is protected !!
";