ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಮಾಯಸಂದ್ರ ಗ್ರಾಮದ ಶಕ್ತಿ ದೇವತೆ ಶ್ರೀ ಕರಿಯಮ್ಮ ದೇವಿಯ ಕಳಸ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವವು 2025ರ ಮೇ-3 ರಿಂದ 16ರವರೆಗೆ ಹಮ್ಮಿಕೊಂಡಿದ್ದಾರೆ.
ಮಾಯಸಂದ್ರ ಗ್ರಾಮದಲ್ಲಿ ಶಿಲಾರೂಪದಲ್ಲಿ ಉದ್ಭವಿಸಿರುವ ಶ್ರೀ ಕರಿಯಮ್ಮ ದೇವಿಯ ಕಳಸ ಸ್ಥಾಪನೆ ಹಾಗೂ ಬ್ರಹ್ಮ ಕುಂಭಾಭಿಷೇಕ ಉತ್ಸವವನ್ನು ಬೀರೇನಹಳ್ಳಿಯ ವೀರಕರಿಯಣ್ಣ ಸ್ವಾಮಿ ಮತ್ತು ಶಿಡ್ಲಯ್ಯನಕೋಟೆಯಶ್ರೀ ಚಿತ್ರ ಲಿಂಗಸ್ವಾಮಿ ದೇವರುಗಳ ಸಮ್ಮುಖದಲ್ಲಿ ಕುಂದಾಪುರದ ಗಣೇಶ್ ಭಟ್ ಮತ್ತು ವಂಡಾರು ರಮೇಶ್ ಬಾಯಿರಿ ಇವರುಗಳ ನೇತೃತ್ವದಲ್ಲಿ ನಡೆಸಲು ಭಕ್ತಾದಿಗಳು ತೀರ್ಮಾನಿಸಿದ್ದಾರೆ.
ಮೇ-3 ರಂದು ಹೋಮ ನವಗ್ರಹ ಪೂಜೆ, 4 ರಂದು ನಾಗದೇವರಿಗೆ ಆಶ್ಲೇಷಾಬಲಿ ಪೂಜೆ, 5 ರಿಂದ 8ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೇ.9 ರಂದು ಶುಕ್ರವಾರ ಮೊದಲಿಗಿತ್ತಿ ಶಾಸ್ತ್ರ, ಕಂಕಣ ಕಟ್ಟುವುದು ಕಾರ್ಯಕ್ರಮ ಇರುತ್ತದೆ. ಮೇ-10 ರಂದು ಜಲ್ದಿ ಪೂಜೆ, ದೇವಿಯ ಮೆರವಣಿಗೆ ನಂತರ ದೊಡ್ಡ ಪೂಜೆ ಏರ್ಪಡಿಸಲಾಗಿದೆ.
ಮೇ-11 ರಂದು ಆರತಿ ಬಾನ ಮತ್ತು ಗ್ರಾಮಸ್ಥರಿಂದ ಬೇವಿನ ಹುಡಿಕೆ ಪೂಜೆ ಇರುತ್ತದೆ. ಮೇ 12 ರಂದು ಕರಿಯಮ್ಮ ದೇವಿಯ ಸಿಡಿ ಉತ್ಸವ ಇರುತ್ತದೆ. ಮೇ-13 ರಂದು ಭಕ್ತಾದಿಗಳಿಂದ ಆರತಿ ಮತ್ತು ಮುಡಿ ತೆಗೆಯುವ ಕಾರ್ಯ ಇರುತ್ತದೆ. ಮೇ.14 ರಂದು ಬುಧವಾರ ಬೆಳಿಗ್ಗೆ 4 ಗಂಟೆಗೆ 101 ಎಡೆ ಪೂಜೆ, ಬೆಳಿಗ್ಗೆ 7 ಗಂಟೆಗೆ ಗಾವು, ಬೆಳಿಗ್ಗೆ 8.30 ರಿಂದ ಗ್ರಾಮ ಪ್ರವೇಶ ಕಾರ್ಯಕ್ರಮ ಇರುತ್ತದೆ.
ಮೇ-15 ರಂದು ವಿವಿಧ ಪೂಜಾ ಕಾರ್ಯಗಳು, ಮೇ-16 ರಂದು ಕರಿಯಮ್ಮ ದೇವಿಯ ದೊಡ್ಡ ಪೂಜೆ, ಚಪ್ಪರ ಇಳಿಸುವುದು ಮತ್ತು ಕಂಕಣ ಬಿಟ್ಟುವ ಪೂಜಾ ಕಾರ್ಯ ಏರ್ಪಡಿಸಲಾಗಿದೆ.
ಮೇ-3 ರಿಂದ 16ರವರೆಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ, ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಪದಾಧಿಕಾರಿಗಳು, ಸದಸ್ಯರು, ಗೌಡ್ರು, ಪೂಜಾರಿಗಳು, ಕೈವಾಡಸ್ಥರು ಮಾಯಸಂದ್ರ ಮತ್ತು ಶಿಡ್ಲಯ್ಯನಕೋಟೆ ಗ್ರಾಮಸ್ಥರು ತಿಳಿಸಿದ್ದಾರೆ.