ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ಚಪ್ಪಲಿ ತೂರಿದ ಕಿಡಿಗೇಡಿಗಳು

News Desk

ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಗಣೇಶ ಮೂರ್ತಿ ವಿಸರ್ಜನೆ ವೇಳೆ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಭಾರೀ ಗಲಾಟೆ ನಡೆದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ.
ಕೆಲ ಮುಸ್ಲಿಂ ವ್ಯಕ್ತಿಗಳು ಗಣೇಶ ಮೂರ್ತಿ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಿ ಗಲಾಟೆಗೆ ಕುಮ್ಮಕ್ಕು ನೀಡಿದ್ದಾರೆ ಅಂತ ಹೇಳಲಾಗುತ್ತಿದೆ. ಇದೇ ವೇಳೆ ಕೆಲ ಅಂಗಡಿಗಳಿಗೂ ಬೆಂಕಿ ಹಚ್ಚಿದ್ದು
,ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಿಂದ ಬುಧವಾರ ಸಂಜೆ 6.30ರ ಸುಮಾರಿಗೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹೊರಟಿತ್ತು. ಮಂಡ್ಯ ಸರ್ಕಲ್ ಮಾರ್ಗವಾಗಿ ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಗಣೇಶ ಮೂರ್ತಿ ವಿಸರ್ಜನೆಗಾಗಿ ಮೆರವಣಿಗೆ ಹೊರಟಿತ್ತು.

ಅಲ್ಲಿಂದ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಸಾಗುತ್ತಿರುವಾಗ ಹಿಂದೂ ಕಾರ್ಯಕರ್ತರು ಜೋರಾಗಿ ಜೈಶ್ರೀರಾಮ್ ಘೋಷಣೆ ಕೂಗುವುದನ್ನು ಗಮನಿಸಿ ಅತ್ತ ಮಸೀದಿ ಬಳಿ ಇದ್ದವರು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗಿದೆ. ಪರಸ್ಪರ ಘೋಷಣೆ ಕೂಗಿದ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ನಂತರ ಕಲ್ಲು ತೂರಾಟ ಮಾಡಲಾಗಿದೆ ಎನ್ನಲಾಗಿದೆ.

ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿ ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗಿದ್ದಿದ್ದಾರೆ. ನಂತರ ಏಕಾಏಕಿ ಕಲ್ಲು ಮತ್ತು ಚಪ್ಪಲಿಯನ್ನು ಗಣೇಶ ಮೂರ್ತಿಯತ್ತ ಎಸೆದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ವೇಳೆ ಪರಸ್ಪರ ಎರಡು ಗುಂಪಿನ ನಡುವೆ ನೂಕಾಟ ತಳ್ಳಾಟ ನಡೆದು ಜಗಳ ಜೋರಾಗಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ನಂತರ ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಹಿಂದೂಪರ ಕಾರ್ಯಕರ್ತರು ನಾಗಮಂಗಲ ಪೊಲೀಸ್ ಠಾಣೆ ಮುಂದೆಯೇ ಗಣೇಶ ವಿಗ್ರಹವನ್ನಿಟ್ಟು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.ಇದರ ಬೆನ್ನಲ್ಲೇ ರಾತ್ರಿ 10 ಗಂಟೆ ಸುಮಾರಿಗೆ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ಭಾರೀ ಅವಘಡ ಸಂಭವಿಸಿದ್ದು, ಕಿಡಿಗೇಡಿಗಳ ಗುಂಪು ಸಿಕ್ಕಸಿಕ್ಕ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು,ಪೆಟ್ರೋಲ್ ಬಾಂಬ್‌ಗಳನ್ನು ತೂರಿದ ಪರಿಣಾಮ ಗುಜರಿ ಅಂಗಡಿಗೆ ಬೆಂಕಿ ತಗುಲಿದೆ. ನಂತರ ಬೈಕ್ ಶೋರೂಂ ಒಂದನ್ನು ಧ್ವಂಸಗೊಳಿಸಿದ್ದಾರೆ. ಬೈಕ್‌ಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾರೆ. ಬೆಂಕಿ ಹಚ್ಚಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಏತನ್ಮಧ್ಯೆ ಕೆಲ ಕಿಡಿಗೇಡಿಗಳು ರಸ್ತೆಯಲ್ಲೇ ಲಾಂಗು, ರಾಡ್‌, ತಲ್ವಾರ್‌ಗಳನ್ನು ಝಳಪಿಸುತ್ತಾ ಅಟ್ಟಹಾಸ ಮರೆದಿದ್ದಾರೆ. ರಸ್ತೆಯಲ್ಲೇ ಬರುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿ ಗೂಂಡಾಗಿರಿ ಮಾಡಿದ್ದಾರೆ. ಪೊಲೀಸರು ಕಿಡಿಗೇಡಿಗಳಿಂದ ಲಾಂಗ್‌ಸೇರಿ ಇತರೆ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದರೂ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ದು ಜಿಲ್ಲಾಡಳಿತ ಸೆಪ್ಟೆಂಬರ್​ 14ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಿದೆ.

 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 46 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳು 6 ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, 13 ಸಣ್ಣಪುಟ್ಟ ಅಂಗಡಿಗಳು ದ್ವಂಸಗೊಂಡಿದೆ. ಇನ್ನು ಮತ್ತಷ್ಟು ಜನರನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

- Advertisement -  - Advertisement -  - Advertisement - 
Share This Article
error: Content is protected !!
";