ಮುತ್ತುಗದೂರು ಕೆರೆ ಭರ್ತಿಯಾಗಿ ಭೀಮಸಮುದ್ರದತ್ತ ತುಂಗಭದ್ರೆ ದಾಪುಗಾಲು

News Desk

ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
ತುಂಗಭದ್ರೆ ಮತ್ತು ಮಳೆರಾಯನ ಮಧ್ಯೆ ಮ್ಯಾರಥಾನ್ ಓಟದ ಕ್ರೀಡಾ ಸ್ಪರ್ಧೆ ನಡೆಯುತ್ತಿರುವಂತೆ ತೋರುತ್ತದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಅಡಿಯಲ್ಲಿ 60 ಕಿ.ಮೀ. ದೂರದಲ್ಲಿರುವ ಸಾಸ್ವೆಹಳ್ಳಿಯಿಂದ ಹೊರಟ ತುಂಗಭದ್ರೆಯು ಭರದಿಂದ ಮುಂದೆ ಸಾಗಿ ನಮ್ಮ ಸಂಕಲ್ಪದಂತೆ ಕಳೆದ ತಿಂಗಳು 24ರಂದು ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ದಿನದಂದೇ ಮುತ್ತುಗದೂರಿನ ಕೆರೆಗೆ ಧುಮ್ಮಿಕ್ಕಿದುದು ಒಂದು ಐತಿಹಾಸಿಕ ದಾಖಲೆ.

ಮುತ್ತುಗದೂರಿನಿಂದ ಹಿರೇಕಂದವಾಡಿ ಮುಖಾಂತರ ಭೀಮಸಮುದ್ರದತ್ತ ತುಂಗಭದ್ರೆಯು ದಾಪುಗಾಲಿಟ್ಟಿದ್ದನ್ನು ನೋಡಿದ ಈ ಭಾಗದ ರೈತರ ಸಂತಸಕ್ಕೆ ಪಾರವೇ ಇಲ್ಲ.

ಸಿರಿಗೆರೆಗೆ ತುಂಗಭದ್ರೆಯ ನೀರು ಬರುವ ನಿರೀಕ್ಷೆ ಇತ್ತು.  ಅದಕ್ಕೂ ಮುನ್ನ ನಿನ್ನೆ ರಾತ್ರಿ ಆಗಸದಲ್ಲಿ ಗುಡುಗು ಸಿಡಿಲು ಆರ್ಭಟಿಸಿ ಬಂದ ಭಾರೀ ಮಳೆಯಿಂದ ಶಾಂತಿವನದ ಡ್ಯಾಮ್ ತುಂಬಿ ಹರಿದಿದೆ.

ಮುತ್ತುಗದೂರು ಕೆರೆಗೆ ಧುಮ್ಮಿಕ್ಕಿ ಭೀಮಸಮುದ್ರದತ್ತ ಸಾಗಿದ ತುಂಗಭದ್ರೆಯು ಮೊದಲ ಸುತ್ತಿನ ಓಟದಲ್ಲಿ ಗೆಲುವು ಸಾಧಿಸಿದರೆ ಎರಡನೆಯ ಸುತ್ತಿನ ಓಟದಲ್ಲಿ ಧೋ ಧೋ ಎಂದು ಸುರಿದ ಮಳೆರಾಯ ತುಂಗಭದ್ರೆಯನ್ನು ಹಿಂದಕ್ಕೆ ಸರಿಸಿ ಗೆಲುವು ಸಾಧಿಸಿದ್ದಾನೆ!. 

“ಹುಯ್ಯೋ ಹುಯ್ಯೋ ಮಳೆರಾಯ” ಎಂದು ಹಳ್ಳಿಗರು ಹಾರೈಸಿದರೆ  “ನಿಲ್ಲೋ ನಿಲ್ಲೋ ಮಳೆರಾಯ” ಎಂದು ನಗರ ನಿವಾಸಿಗಳು ಪರಿತಪಿಸುವಂತಾಗಿದೆ ಎನ್ನುವ ಅಭಿಪ್ರಾಯವನ್ನು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವ್ಯಕ್ತಪಡಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";