ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಹನಿ ನೀರಾವರಿ ಯೋಜನೆ ಕಾಮಗಾರಿಗಳಿಗೆ ಶೀಘ್ರವಾಗಿ ಚಾಲನೆ ನೀಡುವಂತೆ ಆಗ್ರಹಿಸಿ, ಕ್ಷೇತ್ರದ ಮುಖಂಡರು ಹಾಗೂ ರೈತ ಬಾಂಧವರ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಮನವಿ ಸಲ್ಲಿಸಿದೆ.
ಮಾಜಿ ಸಚಿವ ದಿ. ಸುಧಾಕರ್ ಪುತ್ರ ಸುಹಾಸ್ ಸುಧಾಕರ್, ಕೆಪಿಸಿಸಿ ಉಪಾಧ್ಯಕ್ಷ ಆರ್. ಮಂಜುನಾಥ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ವಿಪ ಸದಸ್ಯ ಡಿ.ಟಿ ಶ್ರೀನಿವಾಸ್ ಹಾಗೂ ಪ್ರಮುಖರಾದ ಜೆ. ರಾಜು ಬೇತೂರ್ ಪಾಳ್ಯ ಅವರ ನೇತೃತ್ವದಲ್ಲಿ ಹಿರಿಯೂರು ಕ್ಷೇತ್ರದ ರೈತರು ಮತ್ತು ಸಾರ್ವಜನಿಕರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರನ್ನು ಭೇಟಿಯಾಗಿ ತಾಲ್ಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿದರು.
ಐಮಂಗಲ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು ಆಗ್ರಹ
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯು ಸದಾ ಜನ ಹಾಗೂ ಜಾನುವಾರುಗಳಿಗೆ ನೀರಿನ ತೊಂದರೆ ಎದುರಿಸುತ್ತಿದ್ದು, ಇಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅತ್ಯಂತ ಪ್ರಮುಖವಾಗಿದೆ. ಇದರೊಂದಿಗೆ ನನೆಗುದಿಗೆ ಬಿದ್ದಿರುವ ಹನಿ ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ ತಕ್ಷಣವೇ ಚಾಲನೆ ನೀಡಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳ ಗಮನ ಸೆಳೆಯಿತು.
ಇದರ ಜೊತೆಗೆ ತಾಲ್ಲೂಕಿನ ಒಟ್ಟಾರೆ ಮೂಲಸೌಕರ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆಯೂ ಈ ಸಂದರ್ಭದಲ್ಲಿ ಕೋರಲಾಯಿತು.
ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿರಿಯೂರು ಕ್ಷೇತ್ರದ ರೈತರ ಹಿತರಕ್ಷಣೆ ಮತ್ತು ನೀರಾವರಿ ಯೋಜನೆಗಳಿಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಐಮಂಗಲ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಪ್ರಸ್ತಾವನೆ ಹಾಗೂ ಹನಿ ನೀರಾವರಿ ಯೋಜನೆಗಳ ಪ್ರಗತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ನಿಯೋಗದಲ್ಲಿ ಚಳ್ಳಕೆರೆ ಶಾಸಕರು ಹಾಗೂ ನಿಗಮ ಮಂಡಳಿ ಅಧ್ಯಕ್ಷ ರಘುಮೂರ್ತಿ, ಹೊಸದುರ್ಗ ಶಾಸಕರು ಹಾಗೂ ನಿಗಮ ಮಂಡಲಿ ಅಧ್ಯಕ್ಷ ಗೋವಿಂದಪ್ಪ, ಕೆಪಿಸಿಸಿ ಉಪಾಧ್ಯಕ್ಷ ಆರ್.ಮಂಜುನಾಥ್, ಮಾಜಿ ಸಂಸದ ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಡಿ ಟಿ ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್,
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜೆ ರಾಜು ಬೇತೂರು ಪಾಳ್ಯ, ಸುಹಾಸ್ ಸುಧಾಕರ್, ಸೋಮಶೇಖರ್, ಸೇರಿದಂತೆ ಹಿರಿಯೂರು ತಾಲ್ಲೂಕಿನ ವಿವಿಧ ಘಟಕಗಳ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳು, ಹಿರಿಯೂರು ಕ್ಷೇತ್ರದ ನೂರಾರು ರೈತ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.



