ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರಾಧನೆಗೆ ಪ್ರಸಿದ್ದವಾಗಿರುವ ನಾಗಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಣೆ ಮಾಡಲಾಯಿತು.
ನಾಗರ ಪಂಚಮಿ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಯೆ ಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನಾಗರ ಪಂಚಮಿ ಹಿನ್ನೆಲೆಯಲ್ಲಿ ದೇವಾಲಯದ ಮೂಲದೇವರಿಗೆ ವಿಶೇಷ ಅಲಂಕಾರ ಆಭಿಷೇಕ ಮಾಡಲಾಗಿತ್ತು. ದೇವಾಲಯದ ಸುತ್ತಾಮುತ್ತ ಇರುವ ನಾಗರ ಕಲ್ಲಿನ ಮೂರ್ತಿಗಳಿಗೆ ಹಾಲು, ತುಪ್ಪ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ಭಕ್ತರು ನಾಗದೇವರನ್ನು ಆರಾಧಿಸಿ ಧನ್ಯತೆ ಮೆರೆದರು.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸ್ವಾಮಿ ಹಾಗೂ ನರಸಿಂಹಸ್ವಾಮಿಯ ಅಪರೂಪದ ಸಂಯೋಜಿತ ಏಕ ವಿಗ್ರಹಕ್ಕೆ ಪ್ರಸಿದ್ಧವಾಗಿದ್ದು, ಸರ್ಪದೋಷ ನಿವಾರಣಾ ಪೂಜೆಗಳಿಗೂ ಪ್ರಮುಖ ಕ್ಷೇತ್ರವಾಗಿದೆ.
ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗ ದೇವನನ್ನು (ಸರ್ಪ) ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ಪ್ರಕೃತಿಯೊಂದಿಗೆ ನಮಗಿರುವ ನಂಟನ್ನು ಸ್ಮರಿಸಿ, ಕುಟುಂಬದ ರಕ್ಷಣೆ ಹಾಗೂ ಆರೋಗ್ಯಕ್ಕಾಗಿ ನಾಗದೇವತೆಗೆ ಹಾಲು, ಅರಿಶಿನ, ಹೂವುಗಳನ್ನು ಸಮರ್ಪಿಸಿ ವಿಶೇಷ ಪೂಜೆ ಹಾಗೂ ವ್ರತವನ್ನು ಆಚರಿಸಲಾಗುತ್ತದೆ.
ನಾಗದೋಷ ಕಾಳಸರ್ಪದೋಷ ನಿವಾರಣೆಗೆ ಕುಟಂಬ ಪರಿಹಾರ ಸಮೇತರಾಗಿ ಬಂದು ಜಾತಕದಲ್ಲಿ ರಾಹು-ಕೇತು ಅಥವಾ ಕುಜನ ಸ್ಥಿತಿಯಿಂದ ಉಂಟಾಗುವ ದೋಷಗಳ ಪ್ರಭಾವವನ್ನು ಕಡಿಮೆ ಮಾಡಲು ಈ ದಿನವು ಅತ್ಯಂತ ಶ್ರೇಷ್ಠವೆಂದು ನಂಬಲಾಗಿದೆ.
ಈ ಹಬ್ಬವು ನಾಗದೇವರ ಆರಾಧನೆಯೊಂದಿಗೆ ಪ್ರಕೃತಿ ಹಾಗೂ ಜೀವಜಗತ್ತಿನೊಂದಿಗೆ ಸಹಬಾಳ್ವೆಯ ಸಂದೇಶವನ್ನು ಸಾರುವ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಶ್ರದ್ದೆ ಭಕ್ತಿಯಿಂದ ನಾಗದೇವರ ಪೂಜೆ ನೆರವೇರಿಸಿದರು.



