ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಹಾಗೂ ರೀಲ್ಸ್ ಹುಚ್ಚು ಜನರ ಪ್ರಾಣಕ್ಕೆ ಕಂಟಕವಾಗುತ್ತಿರುವುದಕ್ಕೆ ಮತ್ತೊಂದು ಧೃತಿಗೆಡಿಸುವ ಘಟನೆ ಸಾಕ್ಷಿಯಾಗಿದೆ. ಬೇಸಿಗೆಯ ಬೇಗೆ ತಣಿಸಿಕೊಳ್ಳಲು ಹೋದ ಕಡೆ ತಂದೆಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ನಡೆಸಿದ ಹುಚ್ಚಾಟಕ್ಕೆ ಕೇವಲ 4 ವರ್ಷದ ಕಂದಮ್ಮ ಬಲಿಯಾಗಿರುವ ಅತ್ಯಂತ ಕರುಣಾಜನಕ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಸಂಭವಿಸಿದೆ.
ಅಪ್ಪನ ಸೆಲ್ಫಿ ಕ್ರೇಜ್‌ಗೆ ಮಗ ಬಲಿ!
ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ನಿವಾಸಿ ಜಾಫರ್ ಸಾಧಿಕ್ ಎಂಬುವವರು ತಮ್ಮ 4 ವರ್ಷದ ಮುದ್ದಾದ ಮಗ ಸಮರ್ ಜೊತೆಗೆ ಪ್ರಸಿದ್ಧ ವಾಣಿ ವಿಲಾಸ ಸಾಗರ (ವಿ.ವಿ. ಸಾಗರ) ನಾಲೆಯ ಬಳಿ ತೆರಳಿದ್ದರು. ಬೇಸಿಗೆಯ ಹಿನ್ನೆಲೆಯಲ್ಲಿ ನಾಲೆಯಲ್ಲಿ ನೀರಿನ ಹರಿವು ಹೆಚ್ಚಿರುವುದನ್ನು ಕಂಡು, ಜಾಫರ್ ಸಾಧಿಕ್ ಮಗನೊಂದಿಗೆ ನಾಲೆ ನೀರಿಗೆ ಇಳಿದಿದ್ದಾರೆ.
ನೀರಿನ ರಭಸದ ನಡುವೆಯೂ ಸುರಕ್ಷತೆಯನ್ನು ಮರೆತು ಮಗನ ಜೊತೆ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ದುರದೃಷ್ಟವಶಾತ್ ಜಾಫರ್ ಸಾಧಿಕ್ ಅವರ ಕೈಯಿಂದ 4 ವರ್ಷದ ಬಾಲಕ ಸಮರ್ ಜಾರಿ ಧುಮ್ಮಿಕ್ಕಿ ಹರಿಯುತ್ತಿದ್ದ ನಾಲೆ ನೀರಿಗೆ ಬಿದ್ದಿದ್ದಾನೆ.
ಮಗ ನೀರುಪಾಲು, ತಂದೆ ಬಚಾವ್-
ಕಣ್ಣೆದುರೇ ಮಗ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಗಾಬರಿಗೊಂಡ ತಂದೆ ಆತನನ್ನು ರಕ್ಷಿಸಲು ಹೋಗಿ ತಾವೂ ಕೂಡ ನೀರಿನ ಸೆಳತಕ್ಕೆ ಸಿಲುಕಿ ಕೊಚ್ಚಿ ಹೋಗಲಾರಂಭಿಸಿದ್ದಾರೆ. ತಂದೆ-ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ತಕ್ಷಣ ಸ್ಥಳೀಯ ಸಾರ್ವಜನಿಕರು ರಕ್ಷಣೆಗೆ ಧಾವಿಸಿದ್ದಾರೆ.
ಸ್ಥಳೀಯರಿಂದ ತಂದೆ ರಕ್ಷಣೆ: ಸಾರ್ವಜನಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಂದೆ ಜಾಫರ್ ಸಾಧಿಕ್‌ನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಕಂದಮ್ಮ ಇಹಲೋಕ ತ್ಯಜಿಸಿತು: ಆದರೆ, ನೀರಿನ ರಭಸಕ್ಕೆ ಸಿಲುಕಿದ್ದ 4 ವರ್ಷದ ಮಗು ಸಮರ್ ಅಷ್ಟರಲ್ಲಾಗಲೇ ನೀರಿನಲ್ಲಿ ಕೊಚ್ಚಿ ಹೋಗಿ ದುರಾದೃಷ್ಟವಶಾತ್ ಮೃತಪಟ್ಟಿದ್ದಾನೆ.
ಎಚ್ಚರಿಕೆಯ ಪಾಠ-
ಬೇಸಿಗೆಯ ದಿನಗಳಲ್ಲಿ ನಾಲೆ, ನದಿ, ಜಲಪಾತ ಹಾಗೂ ಕೆರೆಗಳ ಬಳಿ ಪ್ರವಾಸಿಗರು ಮತ್ತು ಸಾರ್ವಜನಿಕರು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸಾಲದು. ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಕಣ್ಣಮುಂದಿನ ಉದಾಹರಣೆಯಾಗಿದೆ. ತಂದೆಯ ಕ್ಷಣಿಕ ನಿರ್ಲಕ್ಷ್ಯಕ್ಕೆ ಕಂದಮ್ಮ ಬಲಿಯಾಗಿರುವುದು ಇಡೀ ಗ್ರಾಮದಲ್ಲಿ ಶೋಕದ ಅಲೆ ಎಬ್ಬಿಸಿದೆ.


