ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಮ್ಮ ಸ್ವಂತ ಸುಖ-ನಿದ್ರೆಯನ್ನು ಬದಿಗಿಟ್ಟು, ರೋಗಿಗಳ ಪ್ರಾಣ ಉಳಿಸಲು ಹಗಲಿರುಳು ಶ್ರಮಿಸುವ ವೈದ್ಯರ ನಿಸ್ವಾರ್ಥ ಸೇವೆ ಅಮೂಲ್ಯ ಮತ್ತು ಸಮಾಜಕ್ಕೆ ಅತ್ಯಂತ ಅನನ್ಯ ಕೊಡುಗೆಯಾಗಿದೆ.ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಸೇವೆ ಸದಾ ಸ್ಮರಣೀಯ ಎಂದು ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಹೇಳಿದರು.
ಶ್ರೀ ರಾಮ ಆಸ್ಪತ್ರೆ ಹಾಗೂ ಶ್ರೀರಾಮ ನರ್ಸಿಂಗ್ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರನ್ನು ಅಭಿನಂದಿಸಿ ಅವರು ಮಾತನಾಡಿ ವೈದ್ಯರ ಪ್ರಾಮುಖ್ಯತೆ ಹಾಗು ಚಿಕಿತ್ಸೆಗಳ ಮಹತ್ವಗಳನ್ನು ಅರಿಯುವಲ್ಲಿ ವೈದ್ಯರ ದಿನಾಚರಣೆ ಮಹತ್ವದ್ದಾಗಿದೆ. ವೈದ್ಯೋ ನಾರಾಯಣೋ ಹರಿ ಎನ್ನುವುದು ವೈದ್ಯರ ಸೇವೆಗೆ ಅನ್ವರ್ಥವಾದ ಮಾತಾಗಿದೆ. ಅದಕ್ಕಾಗಿ ವೈದ್ಯರನ್ನ ದೇವರಿಗೆ ಹೋಲಿಸಲಾಗುತ್ತದೆ. ಆರೋಗ್ಯವೇ ಮಹಾಭಾಗ್ಯ ಎನ್ನುವುದು ಸಾರ್ವಕಾಲಿಕ ಸತ್ಯ. ಅಂತಹ ಆರೋಗ್ಯವನ್ನು ರಕ್ಷಿಸುವ ವೈದ್ಯರ ಶ್ರಮವನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ.
ತಾಲೂಕಿನ ಹೆಸರಾಂತ ವೈದ್ಯರಲ್ಲಿ ಒಬ್ಬರಾಗಿರುವ ಡಾ.ಎಚ್.ಜಿ.ವಿಜಯಕುಮಾರ್ ಅವರು, ವೈದ್ಯಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೇ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದರೆ ಇವರ ಒಡನಾಡಿಯಾಗಿ ಅವರ ಪತ್ನಿ ಡಾ.ಮಾಲಾ ವಿಜಯಕುಮಾರ್ ಅವರ ಸೇವೆ ಸಹ ಸ್ಮರಣೀಯವಾಗಿದ್ದು, ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಶ್ರೀ ರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತರತ್ನ ಡಾ. ಭಿದನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ 1 ರಂದು ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಡಾ.ಬಿ.ಸಿ.ರಾಯ್ ವೈದ್ಯರಷ್ಟೇ ಅಲ್ಲದೇ, ರಾಜಕಾರಣಿ, ಶಿಕ್ಷಣ ತಜ್ಞ ಹಾಗೂ ಸಮಾಜ ಸೇವಕರಾಗಿದ್ದರು. ವೈದ್ಯಕೀಯ ವೃತ್ತಿಯಲ್ಲಿ ನಿಷ್ಟೆ ಪ್ರಾಮಾಣಿಕತೆ, ಜನರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ತಾಲೂಕಿನಲ್ಲಿ ಡಾ.ಕೃಷ್ಣಪ್ಪ, ಡಾ.ವೆಂಕಟರೆಡ್ಡಿ ಮೊದಲಾದ ವೈದ್ಯರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ನಿಸ್ವಾರ್ಥವಾಗಿ ರೋಗಿಗಳ ಸೇವೆ ಮಾಡಿದರೆ ಇಂತಹ ಆಚರಣೆಗಳು ಅರ್ಥಪೂರ್ಣ ಎಂದರು.
ಈ ವೇಳೆ ವೈದ್ಯರಾದ ಡಾ.ಎಚ್.ಜಿ.ವಿಜಯಕುಮಾರ್, ಡಾ.ಮಾಲಾ ವಿಜಯಕುಮಾರ್, ಡಾ. ಪ್ರಭು.ಎ.ಆರ್, ಅವರನ್ನು ಸನ್ಮಾನಿಸಲಾಯಿತು.
ಕಾರ್ಯುಕ್ರಮದಲ್ಲಿ ಸುಜ್ಞಾನ ದೀಪಿಕಾ ಜಾಗೃತಿ ಸಂಚಾಲಕರಾದ ಎಂ.ಎಸ್.ಮಂಜುನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.



