ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವನ್ನು ಆಂಧ್ರಪ್ರದೇಶಕ್ಕೆ ಸೇರಿಸಿ, ಇಲ್ಲವೇ ಪಕ್ಕದ ಚಳ್ಳಕೆರೆ ಕ್ಷೇತ್ರಕ್ಕಾದರೂ ಸೇರಿಸಿ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎನ್.ವೈ. ಗೋಪಾಲಕೃಷ್ಣ ನೀಡಿರುವ ಹೇಳಿಕೆ ತೀವ್ರ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಅಸಮಾಧಾನ ಹೊರಹಾಕಿದ ಶಾಸಕ:
ಮೊಳಕಾಲ್ಮೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ನಿರ್ಲಕ್ಷ್ಯದ ಕುರಿತು ಬಹಿರಂಗವಾಗಿಯೇ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
"ಮೊಳಕಾಲ್ಮೂರು ಯಾವುದೋ ಒಂದು ಮೂಲೆಯಲ್ಲಿದೆ. ದೊಡ್ಡ ದೊಡ್ಡ ನಾಯಕರಿಗೆ ಹಾಗೂ ಸರ್ಕಾರಕ್ಕೆ ಈ ಕ್ಷೇತ್ರವಿರುವುದೇ ಕಣ್ಣಿಗೆ ಕಾಣುತ್ತಿಲ್ಲ. ಇಲ್ಲಿನ ಶಾಸಕರಿಗೆ ಕನಿಷ್ಠ ಗೌರವವೂ ಸಿಗುತ್ತಿಲ್ಲ. ಮೊಳಕಾಲ್ಮೂರಿನ ಹಣೆಬರಹ ಎಲ್ಲಿತ್ತೋ, ವರ್ಷಗಳು ಕಳೆದರೂ ಇಂದಿಗೂ ಅಲ್ಲೇ ಇದೆ" ಎಂದು ಅಸಮಾಧಾನ ಹಂಚಿಕೊಂಡಿದ್ದಾರೆ.
ಅನುದಾನಕ್ಕೆ ಮನವಿ, ವಿಡಿಯೋ ವೈರಲ್:
ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ ಅವರು, "ಆಂಧ್ರಪ್ರದೇಶಕ್ಕೆ ಸೇರಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಚಳ್ಳಕೆರೆ ಕ್ಷೇತ್ರಕ್ಕಾದರೂ ಸೇರ್ಪಡೆ ಮಾಡಲಿ" ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ, "ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ. ಈ ಸಂಬಂಧ ನೂತನ ಸಚಿವರಿಗೂ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ" ಎಂದು ಸಮಾಧಾನದ ಮಾತುಗಳನ್ನೂ ಆಡಿದ್ದಾರೆ. ಶಾಸಕ ಗೋಪಾಲಕೃಷ್ಣ ಅವರು ಆಡಿದ ಈ ಮಾತುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.



