ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೊಳಕಾಲ್ಮೂರು ತಾಲೂಕಿನ ಪ್ರಸಿದ್ಧ ತಮ್ಮೇನಹಳ್ಳಿ ಮಠದ ಜಮ್ಮಣ್ಣ ಸ್ವಾಮೀಜಿ ವಿರುದ್ಧ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಗಂಭೀರ ಆರೋಪ ಕೇಳಿಬಂದಿದ್ದು, ಆಕ್ರೋಶಗೊಂಡ ಸ್ಥಳೀಯರು ಹಾಗೂ ಮಹಿಳೆಯ ಸಂಬಂಧಿಕರು ಸ್ವಾಮೀಜಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಬಳ್ಳಾರಿ ಮೂಲದ ಮಹಿಳೆಯೊಬ್ಬರು ತಮ್ಮ ಸಂಬಂಧಿಕರೊಂದಿಗೆ ಸ್ವಾಮೀಜಿಯನ್ನು ಭೇಟಿ ಮಾಡಲು ಮಠಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜಮ್ಮಣ್ಣ ಸ್ವಾಮೀಜಿ ಆಕೆಯ ಜೊತೆ ಅತ್ಯಂತ ಅನುಚಿತ ಹಾಗೂ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಮತ್ತು ಸ್ಥಳೀಯರು ಸ್ವಾಮೀಜಿಯ ಮೇಲೆ ದಾಳಿ ನಡೆಸಿ ಧರ್ಮದೇಟು ನೀಡಿದ್ದಾರೆ.
ವಂಚನೆ ಹಾಗೂ ವಾಮಾಚಾರದ ದೂರುಗಳು:
ಜಮ್ಮಣ್ಣ ಸ್ವಾಮೀಜಿ ವಿರುದ್ಧ ಈ ಹಿಂದೆಯೂ ಸಹ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ವಾಮಾಚಾರ ಮಾಡುವುದು ಹಾಗೂ ಅನಾರೋಗ್ಯ ನಿವಾರಣೆ ಮಾಡುವ ನೆಪದಲ್ಲಿ ಅಮಾಯಕರನ್ನು ನಂಬಿಸಿ ಹಣ-ವಂಚನೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಈ ಹಳೆಯ ಆಕ್ರೋಶಗಳ ನಡುವೆಯೇ ಈಗ ಮಹಿಳೆಯ ಮೇಲಿನ ಅಸಭ್ಯ ವರ್ತನೆಯ ಘಟನೆ ನಡೆದಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಸಾರ್ವಜನಿಕರ ಆಕ್ರೋಶ:
ಧಾರ್ಮಿಕ ಕ್ಷೇತ್ರ ಹಾಗೂ ಪೀಠಗಳ ಹೆಸರಿನಲ್ಲಿ ಸಮಾಜದ ಭಾವನೆಗಳು ಮತ್ತು ನಂಬಿಕೆಗಳ ಜೊತೆ ಆಟವಾಡುವ ಇಂತಹ ವ್ಯಕ್ತಿಗಳ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಸದ್ಯ ಘಟನೆಯ ವೀಡಿಯೊ ಹಾಗೂ ಮಾಹಿತಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.



