ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಮಾಸಿಕ ಕಂತುಗಳ ಬಿಡುಗಡೆಯಲ್ಲಿ ಉಂಟಾಗಿರುವ ವಿಳಂಬ, ಬಾಕಿ ಮೊತ್ತ ಹಾಗೂ ಅಕ್ರಮ ವರ್ಗಾವಣೆ ಆರೋಪಗಳು ಇದೀಗ ರಾಜ್ಯ ರಾಜಕೀಯ ಮತ್ತು ಕಾನೂನು ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿವೆ. ಸುಮಾರು 1.27 ಕೋಟಿ ಮಹಿಳಾ ಫಲಾನುಭವಿಗಳಿಗೆ ತಿಂಗಳಿಗೆ ₹2,000 ನೀಡುವ ಈ ಯೋಜನೆಯಲ್ಲಿ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಸೇರಿದಂತೆ ಒಟ್ಟು ₹5,000 ಕೋಟಿ ಬಾಕಿ ಉಳಿದಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅವರು ಸರಣಿ ಟ್ವೀಟ್ ಮಾಡಿ ಹೈಕೋರ್ಟ್ ಪ್ರಮಾಣಪತ್ರ ಮತ್ತು ಶಾಸನಸಭೆಯ ಹೇಳಿಕೆಗಳ ನಡುವಿನ ವೈರುಧ್ಯಬೆಳಗಾವಿ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ ಬಿಡುಗಡೆಯಾಗದಿರಲು "ಸರ್ವರ್ ತಾಂತ್ರಿಕ ದೋಷಗಳು" ಕಾರಣ ಎಂದು ಸಮರ್ಥಿಸಿಕೊಂಡಿದ್ದರು.
ಆದರೆ, ಹೈಕೋರ್ಟ್ನಲ್ಲಿ (WP 15855/2026) ಆರ್ಥಿಕ ಇಲಾಖೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ "ಖಜಾನೆಯಲ್ಲಿ ಸೂಕ್ತ ಅನುದಾನ ಹಾಗೂ ಹಣಕಾಸಿನ ಅಭಾವವಿದ್ದ ಕಾರಣ ಗ್ರಾಂಟ್ ಬಿಡುಗಡೆಯಾಗಿಲ್ಲ" ಎಂದು ಸ್ಪಷ್ಟಪಡಿಸಲಾಗಿದೆ. ಶಾಸನಸಭೆಗೆ ನೀಡಿದ ಹೇಳಿಕೆಗೂ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರಕ್ಕೂ ಅಂತರವಿರುವುದು ಸರ್ಕಾರದ ವಿರುದ್ಧದ ಆರೋಪಗಳಿಗೆ ಪುಷ್ಟಿ ನೀಡಿದೆ.
ಕಾನೂನಾತ್ಮಕ ಹಕ್ಕಿನ ಕುರಿತು ನ್ಯಾಯಾಲಯದಲ್ಲಿ ಸರ್ಕಾರದ ವಾದ
ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಹಣವನ್ನು ತಾಯಂದಿರ ಹಕ್ಕು ಎಂದು ಬಿಂಬಿಸಿದ್ದ ಸರ್ಕಾರ, ಇದೀಗ ನ್ಯಾಯಾಲಯದಲ್ಲಿ "ಸಂಕಷ್ಟದ ಸಮಯದಲ್ಲಿ ಸಾರ್ವಜನಿಕ ಅನುದಾನವನ್ನು ನಿಲ್ಲಿಸುವ ಅಥವಾ ತಡೆಹಿಡಿಯುವ ಸಂಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಫಲಾನುಭವಿಗಳು ಇದನ್ನು ಕಾನೂನಾತ್ಮಕ ಹಕ್ಕಾಗಿ ಕೋರಲು ಬರುವುದಿಲ್ಲ" ಎಂಬ ವಾದ ಮಂಡಿಸಿದೆ. ಸರ್ಕಾರದ ಈ ನಿಲುವು ರಾಜ್ಯದ ತಾಯಂದಿರಿಗೆ ಎಸಗಿದ ದ್ರೋಹ ಎಂದು ವಿರೋಧ ಪಕ್ಷಗಳು ಖಂಡಿಸಿವೆ.
2,660 ಕೋಟಿ ಹಣ ಖಾಸಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆರೋಪ
ಆರ್ಥಿಕ ವರ್ಷದ ಕೊನೆಯಲ್ಲಿ (31 ಮಾರ್ಚ್ 2025) ಖಜಾನೆಯ ಅನುದಾನ ಲ್ಯಾಪ್ಸ್ (Lapse) ಆಗುವುದನ್ನು ತಪ್ಪಿಸುವ ಉದ್ದೇಶದಿಂದ 2,660.26 ಕೋಟಿ ಸಾರ್ವಜನಿಕ ಹಣವನ್ನು ನೇರ ಖಜಾನೆಯಿಂದ ಹೊರತೆಗೆದು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಾಣಿಜ್ಯ ಬ್ಯಾಂಕ್ ಖಾತೆಗೆ ನಿಯಮಬಾಹಿರವಾಗಿ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವಿಪಕ್ಷಗಳ ಹೋರಾಟದ ಎಚ್ಚರಿಕೆ
ಸರ್ಕಾರವು ಶಾಸನಸಭೆಗೆ ತಪ್ಪು ಮಾಹಿತಿ ನೀಡಿ, ನ್ಯಾಯಾಲಯ ಹಾಗೂ ಸಾರ್ವಜನಿಕರನ್ನು ವಂಚಿಸುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು, ತಕ್ಷಣವೇ ರಾಜ್ಯದ ತಾಯಂದಿರ ಖಾತೆಗೆ ಬಾಕಿ ಇರುವ 5,000 ಕೋಟಿ ಮೊತ್ತವನ್ನು ಜಮೆ ಮಾಡಬೇಕು ಎಂದು ಒತ್ತಾಯಿಸಿವೆ. ಬಾಕಿ ಹಣ ಸಂಪೂರ್ಣವಾಗಿ ಬಿಡುಗಡೆಯಾಗುವವರೆಗೆ ಬೀದಿಗಿಳಿದು ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿವೆ.




