ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ನೀಡಿರುವ ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದವೀಧರರ ವಿಭಾಗ ತೀವ್ರವಾಗಿ ಖಂಡಿಸಿದೆ.
ಕಾಂಗ್ರೆಸ್ ನಾಯಕರನ್ನು ತುಂಡುತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತೇವೆ ಎಂಬರ್ಥದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರು ನೀಡಿರುವ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಜಿಲ್ಲಾಧ್ಯಕ್ಷ ಪ್ರಕಾಶ್ ರಾಮನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ಸೈದ್ಧಾಂತಿಕ ಮತ್ತು ರಾಜಕೀಯವಾಗಿ ಉತ್ತರ ನೀಡಬೇಕೇ ಹೊರತು, ಬೆದರಿಕೆ ಹಾಗೂ ಹಿಂಸೆಯ ಭಾಷೆಯನ್ನು ಬಳಸುವುದು ರಾಜಕಾರಣಿಗೆ ಶೋಭೆ ತರುವುದಿಲ್ಲ. ದ್ವೇಷ ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಬದಲು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸಲು ಜನಪ್ರತಿನಿಧಿಗಳು ಶ್ರಮಿಸಬೇಕು. ಕತ್ತಿ ಹಾಗೂ ಹಲ್ಲೆಯ ಮಾತುಗಳ ಮೂಲಕ ರಾಜಕೀಯ ವಾತಾವರಣವನ್ನು ಕಲುಷಿತಗೊಳಿಸಬಾರದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಹೋರಾಟ, ತ್ಯಾಗ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಇತಿಹಾಸವಿದೆ. ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ಎಂದಿಗೂ ಹೆದರುವುದಿಲ್ಲ. ಛಲವಾದಿ ನಾರಾಯಣಸ್ವಾಮಿ ಅವರು ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಹಾಗೂ ಬಿಜೆಪಿ ನಾಯಕತ್ವ ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪ್ರಕಾಶ್ ರಾಮನಾಯಕ್ ಆಗ್ರಹಿಸಿದ್ದಾರೆ.




