ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಜಾಹೀರಾತು ಪ್ರಕಟಿಸಲು ₹76,500 ಕೋಟಿ ವೆಚ್ಚ ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ, ಗೃಹಲಕ್ಷ್ಮಿ ಯೋಜನೆಯ ₹5,000 ಕೋಟಿ ಬಾಕಿ ಹಣ ನೀಡಲು ಸಾಧ್ಯವಾಗುತ್ತಿಲ್ಲವೇ?" ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಸಾಧನೆಯ ಹೆಸರಿನಲ್ಲಿ ಜಾಹೀರಾತು ನೀಡುತ್ತಿರುವುದನ್ನು ಖಂಡಿಸಿ ಮಾತನಾಡಿದ ಅವರು, "ಚುನಾವಣೆ ವೇಳೆ ಪ್ರತಿ ತಿಂಗಳು ₹2,000 'ಕಟಾ ಕಟ್' ಎಂದು ಹಣ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಆದರೆ ಈಗ 2 ತಿಂಗಳ ₹5,000 ಕೋಟಿ ಬಾಕಿ ಹಣ ಎಲ್ಲಿಗೆ ಹೋಯಿತು? ಅದು ಹೈದರಾಲಿಯ ಸಂಬಳವಾಯಿತೇ?" ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ, "ಮಹಾಲೇಖಪಾಲರ (ಸಿಎಜಿ) ತಪಾಸಣೆಯಲ್ಲಿ ₹225 ಕೋಟಿ ಅಕ್ರಮ ಪತ್ತೆಯಾಗಿದ್ದು, ಮೃತಪಟ್ಟ 2.88 ಲಕ್ಷ ವ್ಯಕ್ತಿಗಳ ಹೆಸರಲ್ಲಿ ₹115 ಕೋಟಿ ಜಮೆಯಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಯೋಜನೆ ಹೆಸರಿನಲ್ಲಿ ನಾಡಿನ ಮಹಿಳೆಯರಿಗೆ ಮೋಸ ಮಾಡುತ್ತಿರುವ ಸರ್ಕಾರ, ಮೊದಲು ಮೃತರ ಹೆಸರಲ್ಲಿ ನಡೆದಿರುವ ಕೊಳ್ಳೆಗೆ ಲೆಕ್ಕ ಕೊಡಲಿ. ತಕ್ಷಣವೇ ಬಾಕಿ ಉಳಿಸಿಕೊಂಡಿರುವ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡಿ, ರಾಜ್ಯದ ತಾಯಂದಿರಲ್ಲಿ ಕ್ಷಮೆ ಯಾಚಿಸಬೇಕು" ಎಂದು ಸಿ.ಟಿ. ರವಿ ಆಗ್ರಹಿಸಿದ್ದಾರೆ.




