ಚಂದ್ರವಳ್ಳಿ ನ್ಯೂಸ್, ಮಂತ್ರಾಲಯ:
ಕಲಿಯುಗದ ಕಾಮಧೇನು, ಕಲ್ಪವೃಕ್ಷ, ಯತಿಕುಲತಿಲಕ ಮಂತ್ರಾಲಯ ಪ್ರಭು ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ (ಮಧ್ಯಾರಾಧನೆ) ಅಂಗವಾಗಿ ಕ್ಷೇತ್ರಾದ್ಯಂತ ಭಕ್ತಿಪರವಶತೆ ವ್ಯಕ್ತವಾಗಿದ್ದು, ಲಕ್ಷಾಂತರ ಭಕ್ತಾದಿಗಳು ರಾಯರ ಮೂಲ ಬೃಂದಾವನದ ದರ್ಶನ ಪಡೆದು ಧನ್ಯತೆ ಮೆರೆದರು.
ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಗುರುಸಾರ್ವಭೌಮರಿಗೆ ಕೋಟಿ ಕೋಟಿ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಾಗುತ್ತಿದ್ದು, "ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ..." ಎಂಬ ಮಂತ್ರ ಘೋಷಗಳು ದೇಶ-ವಿದೇಶಗಳ ರಾಯರ ಮಠಗಳಲ್ಲಿ ಪ್ರತಿಧ್ವನಿಸುತ್ತಿವೆ. ಕಷ್ಟ ಕಾರ್ಪಣ್ಯಗಳನ್ನು ಕಳೆದು ಸರ್ವರಿಗೂ ಶ್ರೇಯಸ್ಸು ಹಾಗೂ ಅಭಿವೃದ್ಧಿಯನ್ನು ಕರುಣಿಸಲಿ ಎಂದು ಭಕ್ತರು ರಾಯರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಮಂತ್ರಾಲಯ ಶ್ರೀಮಠದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಈ ಮಹೋತ್ಸವದಲ್ಲಿ ಮಹಾ ಪಂಚಾಮೃತಾಭಿಷೇಕ, ರಥೋತ್ಸವ, ವಿಶೇಷ ಸಿಂಹಾಸನ ಪೂಜೆ ಹಾಗೂ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಗಳಿಂದ ನೆರವೇರುತ್ತಿವೆ. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿರುವ ಭಕ್ತಸಾಗರಕ್ಕೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ.




