ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
'ಅರ್ನಬ್' ಮತ್ತು 'ಮುರಸು' ಚಂಡಮಾರುತಗಳಿಂದ ತತ್ತರಿಸಿದ್ದ ಆಂಧ್ರಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪನೆಗೆ ಸಕಾಲಿಕ ನೆರವು ನೀಡಿದ ಕರ್ನಾಟಕ ಸರ್ಕಾರಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ನಾಯ್ಡು, ರಾಜ್ಯದ ಸಹಾಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ. ಶಿವಕುಮಾರ್, "ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಚಂದ್ರಬಾಬು ನಾಯ್ಡು ಅವರೇ. ಸಂಕಷ್ಟದ ಸಮಯದಲ್ಲಿ ನೆರೆಯ ರಾಜ್ಯಗಳು ಪರಸ್ಪರ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಚಂಡಮಾರುತಗಳ ಬಳಿಕ ಆಂಧ್ರಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲು ಕರ್ನಾಟಕ ನೆರವಾಗಿರುವುದು ನಮಗೆ ಸಂತಸ ತಂದಿದೆ. ಇದು ಕೇವಲ ಸಹಾಯವಲ್ಲ, ಜನರಿಗಾಗಿ ಒಟ್ಟಾಗಿ ನಿಲ್ಲುವ ನಮ್ಮ ಬದ್ಧತೆ. ನೆರೆಯ ರಾಜ್ಯಗಳ ನೆರವಿಗೆ ನಾವು ಸದಾ ಸಿದ್ಧರಿರುತ್ತೇವೆ" ಎಂದು ತಿಳಿಸಿದ್ದಾರೆ.
ಹಾನಿ ಮತ್ತು ಕಾರ್ಯಾಚರಣೆಯ ವಿವರ: ಎರಡು ಚಂಡಮಾರುತಗಳ ಅಬ್ಬರಕ್ಕೆ ಆಂಧ್ರಪ್ರದೇಶದ ವಿದ್ಯುತ್ ಮೂಲಸೌಕರ್ಯಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಒಟ್ಟು 3,158 ಗ್ರಾಮಗಳಲ್ಲಿ (ಅರ್ನಬ್ ಚಂಡಮಾರುತದಿಂದ 1,333 ಹಾಗೂ ಮುರಸು ಚಂಡಮಾರುತದಿಂದ 1,825 ಗ್ರಾಮಗಳು) ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಅಲ್ಲದೆ, ಕ್ರಮವಾಗಿ 1,852 ಹಾಗೂ 7,850 ವಿದ್ಯುತ್ ಕಂಬಗಳು ಧರೆಗುರುಳಿದ್ದವು.
ಈ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಆಂಧ್ರಪ್ರದೇಶದ ವಿದ್ಯುತ್ ವಿತರಣಾ ಸಂಸ್ಥೆ ವ್ಯಾಪ್ತಿಯಲ್ಲಿ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಈ ಕಾರ್ಯಾಚರಣೆಗೆ ಬಲ ತುಂಬಲು ಕರ್ನಾಟಕ ಸರ್ಕಾರ 68 ತಂಡಗಳಲ್ಲಿ ಒಟ್ಟು 592 ನುರಿತ ಸಿಬ್ಬಂದಿಯನ್ನು ಆಂಧ್ರಕ್ಕೆ ಕಳುಹಿಸಿಕೊಟ್ಟಿತ್ತು. ಸ್ಥಳೀಯ ಅಧಿಕಾರಿಗಳೊಂದಿಗೆ ಕೈಜೋಡಿಸಿದ ಕರ್ನಾಟಕದ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡಿ, ಶೀಘ್ರವಾಗಿ ವಿದ್ಯುತ್ ಪೂರೈಕೆ ಪುನರಾರಂಭಿಸಲು ನೆರವಾದರು ಎಂದು ನಾಯ್ಡು ಪತ್ರದಲ್ಲಿ ಸ್ಮರಿಸಿದ್ದಾರೆ.
ಎಲ್ಲಾ ರೀತಿಯ ಸಹಕಾರದ ಭರವಸೆ:
ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಉತ್ತಮ ಭೌಗೋಳಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವಿದೆ. ವಿಕೋಪಗಳ ಸಂದರ್ಭದಲ್ಲಿ ಇಂತಹ ಪರಸ್ಪರ ಸಹಕಾರವು ಉಭಯ ರಾಜ್ಯಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಭವಿಷ್ಯದಲ್ಲಿ ಕರ್ನಾಟಕಕ್ಕೆ ಯಾವುದೇ ನೈಸರ್ಗಿಕ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದರೂ ಅಗತ್ಯ ಸಿಬ್ಬಂದಿ, ಯಂತ್ರೋಪಕರಣಗಳು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲು ಆಂಧ್ರಪ್ರದೇಶ ಸರ್ಕಾರ ಸದಾ ಸಿದ್ಧವಿರುತ್ತದೆ ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.




