ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪಠ್ಯದಲ್ಲಿ ಇತಿಹಾಸವನ್ನು ಓದುವುದರ ಜೊತೆಗೆ ಹೊರಗೆ ಬಂದು ಇತಿಹಾಸವನ್ನು ತಿಳಿದುಕೊಳ್ಳಬೇಕೆಂದು ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಸುರೇಶ್ ಬಿ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಿಳಿಸಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಸಹಾಯಕ ನಿರ್ದೇಶಕರ ಕಚೇರಿ ಸಹಯೋಗಹದೊಂದಿಗೆ ರಂಗಯ್ಯನಬಾಗಿಲು ಸಮೀಪವಿರುವ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
೧೯೭೭ ರಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಘೋಷಿಸಲಾಯಿತು. ಇತಿಹಾಸದ ಕುರುಹುಗಳನ್ನು ತಿಳಿದುಕೊಳ್ಳುವುದು ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಉದ್ದೇಶ. ಬ್ರಿಟೀಷರ ಕಾಲದಲ್ಲಿ ಇತಿಹಾಸದ ಅಧ್ಯಯನ ಆರಂಭಗೊಂಡಿತು. ಅಂದಿನಿಂದ ಶಾಸನ, ಸ್ಮಾರಕ, ವೀರಗಲ್ಲುಗಳ ಸಂಗ್ರಹವಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಇತಿಹಾಸದ ಉಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಡಾ.ರೇವಣಸಿದ್ದಪ್ಪ ಎಸ್. ಮಾತನಾಡಿ ೧೫೮ ದೇಶಗಳಲ್ಲಿ ೩೭ ವಸ್ತು ಸಂಗ್ರಹಾಲಯಗಳಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ನಡೆಯುತ್ತಿದೆ. ವಸ್ತು ಸಂಗ್ರಹಾಲಯಗಳು ಪೂರ್ವಜರ ಜ್ಞಾನ, ವಿಜ್ಞಾನ ಸಾಂಸ್ಕೃತಿಕ ಪರಂಪರೆಯನ್ನು ಜೀವಂತ ಸ್ಮಾರಕಗಳನ್ನಿಟ್ಟುಕೊಂಡಿರುವ ಕೇಂದ್ರಗಳು. ಯುನೆಸ್ಕೋ ಅಡಿಯಲ್ಲಿ ೧೯೪೬ ರಲ್ಲಿ ಐಸಿಓಎಂ. ಎನ್.ಜಿ.ಓ. ಆರಂಭವಾಯಿತು. ವಸ್ತು ಸಂಗ್ರಹಾಲಯಗಳು ಚರಿತ್ರಕಾರನ ಅವಿಭಾಜ್ಯ ಅಂಗ ಎಂದರು.
ವಸ್ತು ಸಂಗ್ರಹಾಲಯಗಳು ಶಿಕ್ಷಣ ಮತ್ತು ಸಂಶೋಧನೆಗೆ ಅನುಕೂಲವಾಗಲಿದೆ. ಪ್ರಾಥಮಿಕ ಆಕಾರಗಳನ್ನು ಒದಗಿಸಿಕೊಡುತ್ತವೆ. ಲಕ್ಕುಂಡಿಯನ್ನು ಬಯಲು ಸಂಗ್ರಹಾಲಯವನ್ನಾಗಿ ಮಾಡಲು ಹೊರಟಿರುವುದು ಹೆಮ್ಮೆಯ ಸಂಗತಿ. ಪ್ರಾಚೀನ ಅವಶೇಷಗಳು ಎಲ್ಲಿಯಾದರೂ ಕಂಡು ಬಂದಲ್ಲಿ ನಿರ್ಲಕ್ಷೆ ವಹಿಸದೆ ವಸ್ತು ಸಂಗ್ರಹಾಲಯಕ್ಕೆ ತಂದು ಕೊಡುವುದು ಎಲ್ಲರ ಜವಾಬ್ದಾರಿ. ರೀಲ್ಸ್ ಹುಚ್ಚಿಗಾಗಿ ಮೂರ್ತಿಗಳನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಪ್ರಾಚ್ಯವಸ್ತು, ದೇವಾಲಯಗಳು ಪೂರ್ವಜರ ಬದುಕಿನ ಸಾಂಸ್ಕೃತಿಕ ಬೇರುಗಳು ಎಂದು ತಿಳಿಸಿದರು.
ನಾಯಕನಹಟ್ಟಿ ಸಮೀಪವಿರುವ ಹೊಸಗುಡ್ಡವನ್ನು ಕಾಶಿರಾಮೇಶ್ವರ ಎಂದು ಕರೆಯಲಾಗುತ್ತದೆ. ಕೋಟೆಯ ಕಲ್ಲುಗಳನ್ನು ಕಿತ್ತು ಸಣ್ಣ ಸಣ್ಣ ಗುಡಿಗಳನ್ನು ಕಟ್ಟಿ ವಿಕೃತಿ ಮೆರೆಯಲಾಗುತ್ತಿದೆ. ಪ್ರಾಚ್ಯ ಅವಶೇಷಗಳು ಹಾಳಾಗುತ್ತಿವೆ. ಇತಿಹಾಸದ ಪ್ರಜ್ಞೆ ಜನರಲ್ಲಿ ಇಲ್ಲದಂತಾಗಿದೆ. ತಿಳಿಸಿ ಹೇಳುವ ಪ್ರಕ್ರಿಯೆ ಪ್ರತಿ ಮನೆ ಮನೆಯಿಂದ ಆರಂಭವಾಗಬೇಕು. ಪ್ರಾಚ್ಯಾವಶೇಷಗಳ ರಕ್ಷಣೆ ಕಡೆ ಹೆಚ್ಚಿನ ಗಮನ ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನುಡಿದರು.
ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಚಿತ್ರದುರ್ಗದ ಮುರುಘಾಮಠ, ಬೆಂಗಳೂರು, ಧರ್ಮಸ್ಥಳ, ಬಾದಾಮಿ ಐಹೊಳೆ ಪಟ್ಟದಕಲ್ಲಿನಲ್ಲಿ ವಸ್ತು ಸಂಗ್ರಹಾಲಯಗಳಿವೆ. ಬಾಂಬೆ, ಲಂಡನ್‌ನಲ್ಲಿ ದೊಡ್ಡ ಮ್ಯೂಸಿಯಂ ಇದೆ. ಭಾರತದಲ್ಲಿ ಇಲ್ಲದಂತ ವಸ್ತು ಸಂಗ್ರಹಾಲಯಗಳನ್ನು ಅಲ್ಲಿ ಕಾಣಬಹುದು. ಸುತ್ತಮುತ್ತ ಎಲ್ಲಿಯಾದರೂ ಸ್ಮಾರಕ, ಶಾಸನ, ವಿಗ್ರಹಗಳು ಕಂಡು ಬಂದರೆ ವಸ್ತು ಸಂಗ್ರಹಾಲಯಕ್ಕೆ ತಂದು ಕೊಟ್ಟರೆ ರಕ್ಷಿಸಿದಂತಾಗುತ್ತದೆ. ಹಳೆ ವಸ್ತುಗಳನ್ನು ಹಾಳು ಮಾಡಬೇಡಿ. ಚಿತ್ರದುರ್ಗದಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯವಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಸರ್ಕಾರಿ ಕಲಾ ಕಾಲೇಜು ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಜಗನ್ನಾಥ ಬಿ.ಇ. ಮಾತನಾಡಿ ಪ್ರಾಚೀನ ಕಾಲದ ಪರಂಪರೆಗಳಾದ ಅವಶೇಷ
ಕುರುಹು, ವೀರಗಲ್ಲು, ಮಾಸ್ತಿಗಲ್ಲುಗಳು ನಾಶವಾಗುತ್ತಿವೆ. ಸಂರಕ್ಷಿಸಬೇಕಿದೆ. ಅವಶೇಷಗಳನ್ನು ಸಂಗ್ರಹಣೆ ಮಾಡಬೇಕೆಂಬ ಕಲ್ಪನೆ ಹುಟ್ಟಿದ್ದು, ಈಜಿಪ್ಟ್‌ನಲ್ಲಿ. ಭಾರತದಲ್ಲಿ ೩೩ ಸ್ಥಳಗಳು ವಿಶ್ವ ಪಾರಂಪರಿಕ ಪಟ್ಟಿಯಲ್ಲಿವೆ. ೧೯೦೪ ರಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯ ಆರಂಭಗೊಂಡಿತು. ಎಷ್ಟೋ ಶಾಸನಗಳು ಸಂರಕ್ಷಣೆಯಿಲ್ಲದೆ ಶಿಥಿಲಾವಸ್ಥೆಯಲ್ಲಿವೆ. ಹಿರಿಯರು ಬಿಟ್ಟು ಹೋಗಿರುವ ಪಳಯುಳಿಕೆಗಳನ್ನು ಸಂರಕ್ಷಿಸಬೇಕಿದೆ ಎಂದು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರ್ಕಾರಿ ವಸ್ತು ಸಂಗ್ರಹಾಲಯದ ಸಹಾಯಕ ನಿರ್ದೇಶಕ ಪ್ರಹ್ಲಾದ್ ಜಿ. ವೇದಿಕೆಯಲ್ಲಿದ್ದರು.


