ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನಾಲ್ವರು ಅಂತರ್ ಜಿಲ್ಲಾ ಖದೀಮರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 12,62,000 ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ:
ಹೊಸದುರ್ಗ ಟೌನ್‌ನ ಹೊನ್ನಮ್ಮ ಬಡಾವಣೆಯ ನಿವಾಸಿ ಶಂಭುಲಿಂಗ ಎಂಬುವವರ ಮನೆಯ ಬೀಗ ಮುರಿದು ಕಳ್ಳತನ ನಡೆದಿತ್ತು.
ಬಂಧಿತ ಆರೋಪಿಗಳು:
ವಿವಿಧ ಆಯಾಮಗಳಿಂದ ತನಿಖೆ ನಡೆಸಿ, ಗುಪ್ತ ಮಾಹಿತಿ ಸಂಗ್ರಹಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.




ಹೊಸದುರ್ಗ ಟೌನ್ ಕೋಟೆ ಹಸೇನ್ (22), ದಾವಣಗೆರೆ ತಾಲ್ಲೂಕು ನಾಗರಕಟ್ಟೆ ಗ್ರಾಮದ ಪುರುಶೋತ್ತಮ ನಾಯ್ಕ (23), ದಾವಣಗೆರೆ ಟೌನ್ ಮಹಾರಾಜ್ ಪೇಟೆ ಪ್ರವೀಣ್ ವಿ ಗೌಡ (25) ದಾವಣಗೆರೆ ಟೌನ್ ಶ್ರೀನಿವಾಸ ಪೇಟೆ ದಿಲೀಪ್ ಜಿ (23) ಈ ನಾಲ್ಕು ಆರೋಪಿಗಳು ಈ ಹಿಂದೆ ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕೊಪ್ಪಳ, ತುಮಕೂರು ಹಾಗೂ ದೊಡ್ಡಬಳ್ಳಾಪುರ ಜಿಲ್ಲೆಗಳಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ವಶಪಡಿಸಿಕೊಂಡ ಮಾಲು: ಆರೋಪಿಗಳಿಂದ ಹೊಸದುರ್ಗ ಮತ್ತು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಲನ್ನು ಜಪ್ತಿ ಮಾಡಲಾಗಿದೆ. ಬಂಗಾರದ ಆಭರಣಗಳು: 10,66,000 ಮೌಲ್ಯದ 76 ಗ್ರಾಂ. ಬೆಳ್ಳಿಯ ಆಭರಣಗಳು: 1,96,000 ಮೌಲ್ಯದ 750 ಗ್ರಾಂ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಹಿರಿಯೂರು ಡಿ.ವೈ.ಎಸ್.ಪಿ ಶಿವಕುಮಾರ್ ಟಿ ಎಂ ಅವರ ಉಸ್ತುವಾರಿಯಲ್ಲಿ ಈ ಕಾರ್ಯಾಚರಣೆ ನಡೆಯಿತು.
ಹೊಸದುರ್ಗ ಪಿ.ಐ ರಮೇಶ್ ಕೆ ಟಿ ನೇತೃತ್ವದ ತಂಡದಲ್ಲಿದ್ದ ಪಿಎಸ್ಐ ಗಳಾದ ಶ್ರೀಶೈಲ, ಮಹೇಶ್ ಕುಮಾರ್ ಎನ್, ಅನ್ನಪೂರ್ಣಮ್ಮ, ಪ್ರೊ. ಪಿಎಸ್ಐ ಗಳಾದ ಶಿವರಾಜ್, ಪ್ರಿಯಾಂಕ ಹಾಗೂ ಸಿಬ್ಬಂದಿಗಳಾದ ಕುಮಾರ್, ಉಮೇಶ, ಗಂಗಾದರ, ತಿಪ್ಪೇಸ್ವಾಮಿ, ಚಂದ್ರಪ್ಪ, ದಾದಪೀರ್, ರಾಜಣ್ಣ ಮತ್ತು ತಾಂತ್ರಿಕ ವಿಭಾಗದ ಸತೀಶ್ ಹಾಗೂ ಪ್ರಕಾಶ್ ಅವರ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.


