ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರನ್ನು ತ್ಯಾಜ್ಯ ಮುಕ್ತ ಮತ್ತು ಸ್ವಚ್ಛ ನಗರವನ್ನಾಗಿ ಮಾಡುವ 'ಫ್ರೀಡಂ ಫ್ರಮ್ ವೇಸ್ಟ್' (ಕಸದಿಂದ ಮುಕ್ತಿ) ಅಭಿಯಾನಕ್ಕೆ ಬೆಸ್ಕಾಂ ಕೈಜೋಡಿಸಿದ್ದು, ಸಂಸ್ಥೆಯ ಈ ಹೊಣೆಗಾರಿಕೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಶ್ಲಾಘಿಸಿದ್ದಾರೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ ಬೆಸ್ಕಾಂ ಈ ಸ್ವಚ್ಛತಾ ಕಾರ್ಯಕ್ಕೆ ಧುಮುಕಿದೆ. ಸಾರ್ವಜನಿಕ ಸ್ಥಳಗಳಲ್ಲಿರುವ ಬೆಸ್ಕಾಂನ ವಿದ್ಯುತ್ ಸ್ಥಾವರಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಸೌಲಭ್ಯಗಳ ಸುತ್ತಲೂ ಬಿದ್ದಿರುವ ತ್ಯಾಜ್ಯ ಮತ್ತು ಕಟ್ಟಡ ನಿಮಾಣದ ಡೆಬ್ರಿಸ್‌ಗಳನ್ನು ತೆರವುಗೊಳಿಸಲು ಬೆಸ್ಕಾಂ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಜೆಸಿಬಿಗಳ ಮೂಲಕ ಬೃಹತ್ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ.
ಇತರ ಸಂಸ್ಥೆಗಳಿಗೂ ಪ್ರೇರಣೆ:
ಬೆಸ್ಕಾಂ ವಹಿಸಿರುವ ಈ ಜವಾಬ್ದಾರಿ ಮತ್ತು ಕಾಳಜಿ ಅಭಿನಂದನಾರ್ಹ. ಇದೇ ಮಾದರಿಯಲ್ಲಿ ನಗರದ ಇತರ ಎಲ್ಲಾ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದೆ ಬರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಆಶಯ ವ್ಯಕ್ತಪಡಿಸಿದ್ದಾರೆ.
'ಸುಂದರ ಬೆಂಗಳೂರಿಗಾಗಿ ಸ್ವಚ್ಛ ಬೆಂಗಳೂರು' ಕಲ್ಪನೆಯಡಿ ಎಲ್ಲಾ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಂದಾಗಿ ಶ್ರಮಿಸಿದಾಗ ಮಾತ್ರ ಶ್ರೇಷ್ಠ ಬೆಂಗಳೂರು ನಿರ್ಮಾಣ ಸಾಧ್ಯ ಎಂದು ಅವರು ಕರೆ ನೀಡಿದ್ದಾರೆ.



